ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ
ಕರಾವಳಿ ಮಣ್ಣಿನಲ್ಲಿ ಶಕ್ತಿ, ಭಾವನೆ, ಪರಂಪರೆ, ಸಂಸ್ಕೃತಿ ಇದೆ. ಗುರುಗಳ ಪುತ್ಥಳಿ ನಿರ್ಮಾಣ ಮೂಲಕ ಮುಂದಿನ ಪೀಳಿಗೆಗೆ ಪರಂಪರೆ ಹಾಕಿಕೊಡುವುದರೊಂದಿಗೆ ಇತಿಹಾಸ ಪರಿಚಯಿಸಿದಂತಾಗಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಹೇಳಿದರು.
ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ವತಿಯಿಂದ ಉಚ್ಚಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರದಲ್ಲಿ ನಿರ್ಮಿಸಲಾಗಿರುವ ಮೊಗವೀರ ಕುಲಗುರು ಕೀರ್ತಿಶೇಷ ಶ್ರೀ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನವಾರಣ, ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗಾಗಿ ನಿರ್ಮಿಸಲ್ಪಟ್ಟ ವಿದ್ಯಾರ್ಥಿ ನಿಲಯ ಉದ್ಘಾಟನೆ ಹಾಗೂ ಗುರಿಕಾರರಿಗೆ ಗೌರವಧನ ವಿತರಣಾ ಕಾರ್ಯಕ್ರಮವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.
ಮೊಗವೀರ ಮಹಾಜನ ಸಂಘದ ಗೌರವ ಸಲಹೆಗಾರ ನಾಡೋಜ ಜಿ.ಶಂಕರ್, ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಸಂಸದ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ, ಪ್ರಮೋದ್ ಮಧ್ವರಾಜ್ ಮಾತನಾಡಿದರು. ಮಾಜಿ ಶಾಸಕ ಲಾಲಾಜಿ ಆರ್.ಮೆಂಡನ್, ಪ್ರಮುಖರಾದ ಪ್ರಸಾದ್ ರಾಜ್ ಕಾಂಚನ್, ಆನಂದ ಸಿ.ಕುಂದರ್, ಗಿರಿಧರ ಸುವರ್ಣ, ಕವಿತಾ ಶರತ್, ಸುಗುಣಾ ಕರ್ಕೇರ, ವೇದ್ ಪ್ರಕಾಶ್ ಶ್ರೀಯಾನ್, ಅಜಿತ್ ಸುವರ್ಣ ಮುಂಬೈ, ಸಂತೋಷ್ ಪುತ್ರನ್ ಮುಂಬೈ, ಉದಯ್ ಕುಮಾರ್ ಹಟ್ಟಿಯಂಗಡಿ, ರವೀಶ್ ಕೊರವಡಿ, ನಾಗರಾಜ್ ಸುವರ್ಣ, ಶಂಕರ ಕುಂದರ್, ಮೋಹನ್ ಬೇಂಗ್ರೆ, ಉಪ್ಪಳದಿಂದ ಶೀರೂರುವರೆಗಿನ ಹತ್ತು ಸಂಯುಕ್ತ ಸಭಾಗಳ ಅಧ್ಯಕ್ಷರು, ಗುರಿಕಾರರು, ಪ್ರತಿನಿಧಿಗಳು ಉಪಸ್ಥಿತರಿದ್ದರು.
ದ.ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ.ಕೋಟ್ಯಾನ್ ಸ್ವಾಗತಿಸಿದರು. ಗೌರವ ಪ್ರಧಾನ ಕಾರ್ಯದರ್ಶಿ ಶರಣ್ ಕುಮಾರ್ ಮಟ್ಟು ನಿರೂಪಿಸಿದರು. ಮನೋಜ್ ಸಾಲ್ಯಾನ್ ವಂದಿಸಿದರು.
ಸಚಿವರನ್ನು ಕ್ಷೇತ್ರದ ವತಿಯಿಂದ ಸನ್ಮಾನಿಸಲಾಯಿತು. ಪುತ್ಥಳಿ ನಿರ್ಮಾಣ ನಿರ್ವಹಣೆ ಮಾಡಿರುವ ಶಿವಪ್ರಸಾದ್ ದಂಪತಿ, ಮುಜಾಬಿಲ್ ಪಠಾಣ್, ನಿಶಿತ್ ಶೆಟ್ಟಿ, ಶರತ್ ಶೆಟ್ಟಿ ಅವರನ್ನು ಅಭಿನಂದಿಸಲಾಯಿತು. ಮೊಗವೀರ ಸಮಾಜದ ಗುರಿಕಾರರಿಗೆ ಗೌರವಧನ ವಿತರಿಸಲಾಯಿತು. ಉಚ್ಚಿಲ ದಸರಾ ಅಂಗವಾಗಿ ನಡೆಯುವ ರಾಜ್ಯ ಮಟ್ಟದ ದೇಹದಾರ್ಢ್ಯ ಸ್ಪರ್ಧೆಯ ಪೋಸ್ಟರನ್ನು ಸಚಿವರು ಬಿಡುಗಡೆಗೊಳಿಸಿದರು.
ಶಿಕ್ಷಣ, ಆರೋಗ್ಯ ವ್ಯವಸ್ಥೆಯಿಂದ ವಂಚಿತರಾಗಿ ಸಮಾನತೆಗಾಗಿ ಹೋರಾಡುತ್ತಿದ್ದ ಮೊಗವೀರ ಸಮಾಜ ಸ್ವಾಭಿಮಾನದ ಪ್ರತೀಕವಾಗಿ ಕುಲಗುರುಗಳ ಪುತ್ಥಳಿ ಸ್ಥಾಪಿಸಿದೆ. ಮೊಗವೀರ ಸಮಾಜವನ್ನು ಎಸ್‌ಟಿಗೆ ಸೇರಿಸುವ ನಿಟ್ಟಿನಲ್ಲಿ ನಾವು ಪ್ರಯತ್ನಿಸಿದ್ದೇವೆ. ಎಲ್ಲರೂ ಜತೆಗೂಡಿ ಕೇಂದ್ರದ ಮುಂದೆ ಬೇಡಿಕೆ ಇಡೋಣ.ಕೋಟ ಶ್ರೀನಿವಾಸ ಪೂಜಾರಿ ಸಂಸದ