ಬಜಪೆ ಸಮೀಪದ ಪೆರ್ಮುದೆ ಸಂತ ಸ್ನಾನಿಕ ಯೋಹಾನ್ನರಿಗೆ ಸಮರ್ಪಿಸಿದ ನವೀಕೃತ ಚರ್ಚ್ ಉದ್ಘಾಟನೆ, ಆಶೀರ್ವಚನ ಹಾಗೂ ವಜ್ರ ಮಹೋತ್ಸವ ಸಂಭ್ರಮ ಸಮಾರಂಭ ನಡೆಯಿತು. 
ದಕ್ಷಿಣ ಕನ್ನಡ

ಪೆರ್ಮುದೆ ಸಂತ ಸ್ನಾನಿಕ ಯೋಹಾನ್ನರಿಗೆ ಸಮರ್ಪಿಸಿದ ನವೀಕೃತ ಚರ್ಚ್ ಉದ್ಘಾಟನೆ-ವಜ್ರ ಮಹೋತ್ಸವ ಸಂಭ್ರಮ

ಮಂಗಳೂರಿನ ವಿಶ್ರಾಂತ ಧರ್ಮಾಧ್ಯಕ್ಷ ಡಾ. ಅಲೋಶಿಯಸ್ ಪೌಲ್ ಡಿಸೋಜ ನವೀಕೃತವಾಗಿ ನಿರ್ಮಾಣಗೊಂಡ ಚರ್ಚ್ ಕಟ್ಟಡ ಉದ್ಘಾಟನೆ

ಮಂಗಳೂರು: ದೇವರು ಎಲ್ಲಾ ಕಡೆಗಳಲ್ಲೂ ಇದ್ದರೂ, ಸಂಘ ಜೀವಿಗಳಾದ ನಮಗೆ ಅವರನ್ನು ಸಮೂಹವಾಗಿ ಸ್ತುತಿಸಲು ದೇವಾಲಯಗಳು ಅಗತ್ಯವಾಗಿದೆ. ಸಾಮೂಹಿಕ ಪ್ರಾರ್ಥನೆಯಿಂದ ಇತರರಿಗೆ ನಾವು ಶಕ್ತಿ ತುಂಬುತ್ತೇವೆ. ಪೆರ್ಮುದೆ ಧರ್ಮಕ್ಷೇತ್ರಕ್ಕೆ ಒಳಪಟ್ಟ ಜನರು ಅನ್ಯೋನ್ಯವಾಗಿ ಬಾಳುವವರಾಗಿದ್ದು, ಜನರ ವಿಶಾಲ ಹೃದಯ, ಪರಿಶ್ರಮ, ಸಹಕಾರದಿಂದಾಗಿ ಅಲ್ಪ ಅವಧಿಯಲ್ಲೇ ಕನಸು ಈಡೇರಿದೆ ಎಂದು ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ಹೇಳಿದರು.

ಗುರುವಾರ ಬಜಪೆ ಸಮೀಪದ ಪೆರ್ಮುದೆ ಸಂತ ಸ್ನಾನಿಕ ಯೋಹಾನ್ನರಿಗೆ ಸಮರ್ಪಿಸಿದ ನವೀಕೃತ ಚರ್ಚ್ ಉದ್ಘಾಟನೆ, ಆಶೀರ್ವಚನ ಹಾಗೂ ವಜ್ರ ಮಹೋತ್ಸವ ಸಂಭ್ರಮ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಶಾಸಕ ಉಮಾನಾಥ ಕೋಟ್ಯಾನ್ ಅವರು ಮಾತನಾಡಿ, ದೇವಾಲಯಗಳು ನಮ್ಮನ್ನು ಒಂದುಗೂಡಿಸಿ ಸಾಮೂಹಿಕ ಪ್ರಾರ್ಥನೆಗೆ ಅವಕಾಶ ಒದಗಿಸುತ್ತದೆ. ಸಾಮೂಹಿಕ ಪ್ರಾರ್ಥನೆಯ ವೇಳೆ ಕಷ್ಟ-ಸುಖ, ನೋವು ನಲಿವು ಹಂಚಿಕೊಂಡಾಗ ದೇವರು ಆ ಸಮಸ್ಯೆಯನ್ನು ಪರಿಹರಿಸುತ್ತಾರೆ. ಇಂದು ಪೆರ್ಮುದೆ ಪರಿಸರದಲ್ಲಿ ಒಂದೇ ತಾಯಿಯ ಮಕ್ಕಳಂತೆ ಸೌಹಾರ್ದದಿಂದ ಬದುಕುತ್ತಿದ್ದೇವೆ ಎಂದರು.

ನವೀಕೃತವಾಗಿ ನಿರ್ಮಾಣಗೊಂಡ ಚರ್ಚ್ ಕಟ್ಟಡವನ್ನು ಮಂಗಳೂರಿನ ವಿಶ್ರಾಂತ ಧರ್ಮಾಧ್ಯಕ್ಷ ಡಾ. ಅಲೋಶಿಯಸ್ ಪೌಲ್ ಡಿಸೋಜ ಅವರು ಉದ್ಘಾಟಿಸಿದರು. ಪವಿತ್ರ ಬಲಿಪೂಜೆಯಲ್ಲಿ ಮೈಸೂರು ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ ಡಾ. ಫ್ರಾನ್ಸಿಸ್ ಸೆರಾವೊ ನೆರವೇರಿಸಿದರು.

ಮಂಗಳೂರು ಧರ್ಮಪ್ರಾಂತ್ಯ ಪ್ರಧಾನ ಧರ್ಮಗುರು ಮ್ಯಾಕ್ಸಿಂ ಎಲ್. ನೊರೊನ್ಹಾ, ಪೇಜಾವರ ವಲಯ ಪ್ರಧಾನ ಧರ್ಮಗುರು ರವಿ ರುಡಾಲ್ಫ್ ಡೆಸಾ, ಧರ್ಮಪ್ರಾಂತ್ಯದ ಚಾನ್ಸಿಲರ್ ವಿಕ್ಟರ್ ಜಾರ್ಜ್ ಡಿಸೋಜ, ಹಣಕಾಸು ಅಧಿಕಾರಿ ಎಡ್ವಿನ್ ವಿನ್ಸೆಂಟ್ ಕೊರೆಯಾ, ರಿಚರ್ಡ್ ಲಸ್ರಾದೊ, ಪೆರ್ಮುದೆಯ ಪವಿತ್ರಪಾಣಿ ವೇಣುಗೋಪಾಲ ಪೆಜತ್ತಾಯ, ಎಕ್ಕಾರು ಕೊಡಮಾಣಿತ್ತಾಯ ದೈವಸ್ಥಾನದ ಆಡಳಿತಾಧಿಕಾರಿ ನಿತಿನ್ ಹೆಗ್ಡೆ, ಮೌಲಾನಾ ಬಶೀರ್ ಮದನಿ ಕೂಳೂರು, ಧರ್ಮ ಕೇಂದ್ರ ಪಾಲನಾ ಮಂಡಳಿ ಕಾರ್ಯದರ್ಶಿ ಅನಿತಾ ಡಿಸೋಜ, ಸರ್ವ ಆಯೋಗದ ಸಂಯೋಜಕ ಹೆನ್ರಿ ಡಿಕುನ್ಹಾ, ರೋಶನ್ ತಾವ್ರೊ, ಪ್ರಮುಖರಾದ ರೊನಾಲ್ಡ್ ಪ್ರೆಸಿಲ್ಲಾ ಫೆನಾರ್ಂಡಿಸ್, ಮಾರ್ಕ್ ಸ್ಟೆಲ್ಲಾ ಡಿಸೋಜಾ, ಇಂಜಿನಿಯರ್ ಲಾರೆನ್ಸ್ ಕುಟಿನ್ಹಾ, ಗುತ್ತಿಗೆದಾರ ರಿಚಾರ್ಡ್ ರೊಡ್ರಿಗಸ್ ಉಪಸ್ಥಿತರಿದ್ದರು.

ಸಮಾರಂಭದಲ್ಲಿ ದಾನಿಗಳನ್ನು ಗೌರವಿಸಲಾಯಿತು. ಸಭಾ ಕಾರ್ಯಕ್ರಮದ ನಂತರ ದೇವದಾಸ್ ಕಾಪಿಕಾಡ್ ತಂಡದಿಂದ ಸುಣ್ಣದ ಬೊಟ್ಟು ಹಾಸ್ಯ ನಾಟಕ ಪ್ರದರ್ಶನಗೊಂಡಿತು. ಧರ್ಮಗುರು ರೊನಾಲ್ಡ್ ಪಿಂಟೊ ಸ್ವಾಗತಿಸಿದರು. ಪಾಲನಾ ಮಂಡಳಿಯ ಉಪಾಧ್ಯಕ್ಷ ರೋಶನ್ ರೊಡ್ರಿಗಸ್ ವಂದಿಸಿದರು.

ಸಂತ ಸ್ನಾನಿಕ ಯೋಹಾನ್ನ ಸತ್ಯ, ನ್ಯಾಯ ನೀತಿಯ ಹಾದಿಯಲ್ಲಿ ನಡೆದವರು. ಅನ್ಯಾಯವನ್ನು ಖಂಡಿಸಿದವರು. ದೇವ ಪುತ್ರ ಯೇಸುಕ್ರಿಸ್ತರ ಬರುವಿಕೆಯ ಸಂದೇಶ ಸಾರಿದವರು. ಅವರ ಸಮರ್ಪಣಾ ಜೀವನ ನಮಗೆ ಮಾದರಿಯಾಗಿದೆ. ನಮಗೆ ಸತ್ಯದ ಹಾದಿಯಲ್ಲಿ ನಡೆದು, ನಿಷ್ಟೆಯಿಂದ ಬದುಕಲು ಕರೆ ನೀಡಿದ ಧೀಮಂತ ವ್ಯಕ್ತಿಯಾಗಿದ್ದಾರೆ.
ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ, ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರು