ಪುತ್ತೂರು ಗ್ರಾಮಾಂತರ: ಅಕ್ರಮವಾಗಿ ದನ ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ನೆಟ್ಟಣಿಗೆ ಮುಡ್ನೂರು ಗ್ರಾಮದ ನೂಜಿಬೈಲು ಎಂಬಲ್ಲಿ ಭಾನುವಾರ ರಾತ್ರಿ ಪತ್ತೆಹಚ್ಚಿದ ಸಂಪ್ಯ ಪೊಲೀಸರು ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈಶ್ವರಮಂಗಲ ಪೊಲೀಸ್ ಹೊರ ಠಾಣೆಯಲ್ಲಿ ಕರ್ತವ್ಯದಲ್ಲಿದ್ದ ಸಂಪ್ಯ ಠಾಣೆ ಹೆಡ್ಕಾನ್ಸ್ಟೆಬಲ್ ನಾಗರಾಜ ಕೆ. ಅವರಿಗೆ ಭಾನುವಾರ ರಾತ್ರಿ ಲಭಿಸಿದ ಮಾಹಿತಿಯಂತೆ ಕಾವು ಕಡೆಯಿಂದ ಬರುತ್ತಿದ್ದ ವಾಹನವನ್ನು ನೂಜಿಬೈಲಿನಲ್ಲಿ ನಿಲ್ಲಿಸಲು ಸೂಚಿಸಿದ್ದಾರೆ.
ಚಾಲಕ ವಾಹನ ನಿಲ್ಲಿಸದೆ ಹೋಗಿದ್ದಾನೆ. ನಾಗರಾಜ್ ದ್ವಿಚಕ್ರ ವಾಹನದಲ್ಲಿ ಬೆನ್ನಟ್ಟಿ ತಡೆದು ನಿಲ್ಲಿಸಿ ಪರಿಶೀಲಿಸಿದಾಗ ಮೂರು ದೊಡ್ಡ ಗಾತ್ರದ ದನಗಳನ್ನು ಹಿಂಸಾತ್ಮಕ ರೀತಿಯಲ್ಲಿ ಕಟ್ಟಿ ಸಾಗಾಟ ಮಾಡುತ್ತಿರುವುದು ಕಂಡು ಬಂದಿತ್ತು. ವಾಹನ ಚಾಲಕ ತಮಿಳುನಾಡಿನ ದುರೈಯಾರಸನ್(21) ಮತ್ತು ದನಗಳನ್ನು ಹಿಂಸಾತ್ಮಕ ರೀತಿಯಲ್ಲಿ ವಾಹನದಲ್ಲಿ ಲೋಡ್ ಮಾಡಿ ಕಳುಹಿಸಿಕೊಟ್ಟಿರುವ ಕಾಸರಗೋಡಿನ ಅಹಮ್ಮದ್ ಆಸೀದ್ ಎಂಬುವರ ವಿರುದ್ಧ ಪ್ರಕರಣ ದಾಖಲಾಗಿದೆ.
ಸಾಗಾಟಕ್ಕೆ ಬಳಸಿದ 5 ಲಕ್ಷ ರೂ. ಮೌಲ್ಯದ ವಾಹನ ಮತ್ತು 4.5 ಲಕ್ಷ ರೂ. ಮೌಲ್ಯದ ದನಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಾಸರಗೋಡು ವಿಲೇಜ್ ಡೈರಿ ಫಾರ್ಮ್ನ ಅಹಮ್ಮದ್ ಆಸಿದ್ ಎಂಬಾತ ಚಿಂತಾಮಣಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಿಂದ ದನ ಖರೀದಿಸಿ ತನ್ನ ವಾಹನದಲ್ಲಿ ಲೋಡ್ ಮಾಡಿ ಆತ ಬೇರೆ ವಾಹನದಲ್ಲಿ ಹೋಗಿರುವುದಾಗಿ ಪೊಲೀಸ್ ವಿಚಾರಣೆ ವೇಳೆ ಚಾಲಕ ತಿಳಿಸಿದ್ದಾನೆ.