ಸುಳ್ಯ ತಾಲೂಕು ಕೆಡಿಪಿ ಸಭೆ ಶಾಸಕಿ ಭಾಗೀರಥಿ ಮುರುಳ್ಯ ಅಧ್ಯಕ್ಷತೆಯೊಂದಿಗೆ ನಡೆಯಿತು. ತಹಸೀಲ್ದಾರ್​ ಎಂ.ಮಂಜುಳ, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ರಾಜಣ್ಣ, ಜಯಪ್ರಕಾಶ್​ ನೆಕ್ರಪ್ಪಾಡಿ, ಪರಮೇಶ್ವರ ಕೆಂಬಾರೆ ಇದ್ದರು. 
ದಕ್ಷಿಣ ಕನ್ನಡ

ಸುಳ್ಯದಲ್ಲಿ ಅಕ್ರಮವಾಗಿ ಕಟ್ಟಡ ನಿರ್ಮಾಣ

Vinod Kumar

ಪ್ರಮುಖ ಮುಖ್ಯಾಂಶಗಳು

  • ತಾಲೂಕು ಕೆಡಿಪಿ ಸಭೆಯಲ್ಲಿ ಆರೋಪ
  • ನಿಧಾನಗತಿ ಕಡತ ವಿಲೇಗೆ ಅಸಮಾಧಾನ
ವಿಜಯವಾಣಿ ಸುದ್ದಿಜಾಲ ಸುಳ್ಯ
ಸುಳ್ಯ ತಾಲೂಕು ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ತೆಮಾಸಿಕ ಪ್ರಗತಿ ಪರಿಶೀಲನಾ ಸಭೆ ಬುಧವಾರ ಶಾಸಕಿ ಭಾಗೀರಥಿ ಮುರುಳ್ಯ ಅಧ್ಯಕ್ಷತೆಯಲ್ಲಿ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ನಡೆಯಿತು. ಕೆಡಿಪಿ ಸದಸ್ಯರು, ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.

ಕಡತ ವಿಲೇವಾರಿ ವಿಳಂಬ ಆರೋಪ

ಸುಳ್ಯ ತಾಲೂಕು ಕೆಡಿಪಿ ಸಭೆ ಶಾಸಕಿ ಭಾಗೀರಥಿ ಮುರುಳ್ಯ ಅಧ್ಯಕ್ಷತೆಯೊಂದಿಗೆ ನಡೆಯಿತು. ತಹಸೀಲ್ದಾರ್​ ಎಂ.ಮಂಜುಳ, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ರಾಜಣ್ಣ, ಜಯಪ್ರಕಾಶ್​ ನೆಕ್ರಪ್ಪಾಡಿ, ಪರಮೇಶ್ವರ ಕೆಂಬಾರೆ ಇದ್ದರು.

ಕೆಡಿಪಿ ಸದಸ್ಯ ಧರ್ಮಪಾಲ ಕೊಯಿಂಗಾಜೆ ವಿಚಾರ ಪ್ರಸ್ತಾಪಿಸಿ, ಸುಳ್ಯ ತಾಲೂಕಿನಲ್ಲಿ ಅಕ್ರಮ ಸಕ್ರಮ ಸಮಿತಿ ಸಭೆಗಳು ನಡೆಯುತ್ತಿಲ್ಲ, ಕಡತಗಳು ವಿಲೇವಾರಿ ಆಗುತ್ತಿಲ್ಲ ಎಂದು ಹೇಳಿದರು. ತೀರ್ಥರಾಮ ಜಾಲ್ಸೂರು, ಜಯಪ್ರಕಾಶ್​ ನೆಕ್ರಪ್ಪಾಡಿ, ಪರಮೇಶ್ವರ ಕೆಂಬಾರೆ ಮತ್ತಿತರರು ದನಿಗೂಡಿಸಿದರು.

8ರಿಂದ 10 ಕಡತಗಳು ವಿಲೇ

ತಹಸೀಲ್ದಾರ್​ ಎಂ.ಮಂಜುಳ ಉತ್ತರಿಸಿ, ಪ್ರತಿ ತಿಂಗಳು ಅಕ್ರಮ ಸಕ್ರಮ ಸಮಿತಿ ಸಭೆ ನಡೆಯುತ್ತಿದೆ. 8ರಿಂದ 10 ಕಡತಗಳು ವಿಲೇವಾರಿಯಾಗುತ್ತಿವೆ. ಪ್ರಸ್ತುತ ತಾಲೂಕಿನಲ್ಲಿ 6500&-7000 ಕಡತಗಳು ವಿಲೇವಾರಿಗೆ ಬಾಕಿ ಇವೆ ಎಂದರು. 94ಸಿ ಕಡತ ವಿಲೇವಾರಿ ಆಗದಿರುವ ಕುರಿತು ಕೆಡಿಪಿ ಸದಸ್ಯ ಅಶ್ರ್​ ಗುಂಡಿ ಗಮನ ಸೆಳೆದರು.

ಅಕ್ರಮ ಕಟ್ಟಡ ನಿರ್ಮಾಣ

ಸುಳ್ಯ ನಗರದಲ್ಲಿ ಅಕ್ರಮ ಕಟ್ಟಡಗಳು ತಲೆ ಎತ್ತುತ್ತಿದ್ದರೂ ನಗರ ಪಂಚಾಯಿತಿ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶಾಹುಲ್​ ಹಮೀದ್​ ಕುತ್ತಮೊಟ್ಟೆ ಆರೋಪಿಸಿದರು. ಈ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು. ಅಕ್ರಮ ಕಟ್ಟಡಗಳ ನಿಮಾರ್ಣಕ್ಕೆ ಅವಕಾಶ ಇಲ್ಲ, ನಿರ್ದಿಷ್ಟ ಪ್ರಕರಣದ ಬಗ್ಗೆ ಮಾಹಿತಿ ನೀಡಿ ಎಂದು ತಹಸೀಲ್ದಾರ್​ ಹೇಳಿದರು.

ನೋಟಿಸ್​ ನೀಡಿ ಕ್ರಮ ಕೈಗೊಳ್ಳಿ

ಅಧಿಕಾರಿಗಳೇ ಪರಿಶೀಲನೆ ನಡೆಸಿ ಅಕ್ರಮ ಕಟ್ಟಡ ನಿರ್ಮಾಣ ತಡೆಯುವಂತೆ ಗ್ಯಾರಂಟಿ ಸಮಿತಿ ಅಧ್ಯಕ್ಷ ಹಾಗೂ ಕೆಡಿಪಿ ಸದಸ್ಯರು ಒತ್ತಾಯಿಸಿದರು. ಈ ಕುರಿತು ಪರಿಶೀಲನೆ ನಡೆಸುವಂತೆ ಶಾಸಕರು ಸೂಚಿಸಿದರು. ಪಯಸ್ವಿನಿ ನದಿಗೆ ಮಣ್ಣು ಹಾಕುವವರ ವಿರುದ್ಧ ನೋಟಿಸ್​ ನೀಡಿ ಕ್ರಮ ಕೈಗೊಳ್ಳಿ ಎಂದು ತಹಸೀಲ್ದಾರ್​ ನಗರ ಪಂಚಾಯಿತಿ ಅಧಿಕಾರಿಗಳಿಗೆ ಸೂಚಿಸಿದರು.

ಬೇರಿಂಗ್​ಗೆ ಆರ್ಡರ್​

ಆಲೆಟ್ಟಿ-ಬಡ್ಡಡ್ಕ ಜಿಲ್ಲಾ ಮುಖ್ಯ ರಸ್ತೆಯ ನಿರ್ವಹಣೆಗೆ 18.98 ಲಕ್ಷ ಅನುಮೋದನೆಯಾಗಿ ಗುತ್ತಿಗೆ ಒಪ್ಪಂದ ಆಗಿದ್ದು ವಿಭಾಗ ಕಚೇರಿಯಿಂದ ಪತ್ರ ಬರೆಯಲಾಗಿದೆ. ಆಲೆಟ್ಟಿ-ಬಡ್ಡಡ್ಕ ರಸ್ತೆಯ ನಾಗಪಟ್ಟಣ ಸೇತುವೆಯ ದುರಸ್ತಿ ಕಾರ್ಯ ನಡೆಯುತ್ತಿದ್ದು, ಬೇರಿಂಗ್​ ಅಳವಡಿಸಬೇಕಾಗಿದೆ. ಬೇರಿಂಗ್​ಗೆ ಆರ್ಡರ್​ ನೀಡಲಾಗಿದ್ದು, ದೊರೆತ ಕೂಡಲೇ ದುರಸ್ತಿ ಕಾರ್ಯ ನಡೆಸಲಾಗುವುದು ಎಂದು ಲೋಕೋಪಯೋಗಿ ಇಲಾಖೆಯ ಇಂಜಿನಿಯರ್​ ಭರವಸೆ ನೀಡಿದರು. ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ರಾಜಣ್ಣ ಸ್ವಾಗತಿಸಿ, ವಂದಿಸಿದರು.

ಕಾಡಾನೆಗಳ ಹಾವಳಿ ತಡೆಗೆ ಕ್ರಮ

ತಾಲೂಕಿನಲ್ಲಿ ಕಾಡಾನೆ ಉಪಟಳ ಹೆಚ್ಚಳಗೊಂಡಿರುವ ಕುರಿತು ಕೆಡಿಪಿ ಸದಸ್ಯರು ವಿಚಾರ ಪ್ರಸ್ತಾಪಿಸಿದರು. ಪ್ರತಿಕ್ರಿಯಿಸಿದ ಅರಣ್ಯ ಅಧಿಕಾರಿಗಳು ಕಾಡಾನೆ ಹಾವಳಿ ತಡೆಯುವ ನಿಟ್ಟಿನಲ್ಲಿ ಸೋಲಾರ್​ ಬೇಲಿ, ಆನೆ ಕಂದಕಗಳನ್ನು ನಿರ್ಮಿಸುವ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸರ್ಕಾರದಿಂದ ಮಂಜೂರಾಗಿರುವ ಅನುದಾನದ ಲಭ್ಯತೆ ಮೇರೆಗೆ ಅಗತ್ಯ ಸ್ಥಳಗಳಲ್ಲಿ ಸೋಲಾರ್​ ಬೇಲಿ, ಕಂದಕ ನಿರ್ಮಿಸಲಾಗುವುದು. ಅಲ್ಲದೆ ರೈತರು ನಿರ್ಮಿಸುವ ಸೋಲಾರ್​ ಬೇಲಿಗೆ 50:50 ಅನುಪಾತದಲ್ಲಿ ಸಹಾಯಧನ ನೀಡಲಾಗುತಿದೆ ಎಂದು ಮಾಹಿತಿ ನೀಡಿದರು.

ವಿದ್ಯುತ್​ ಕಡಿತದಿಂದ ಹೈರಾಣ

ಸುಳ್ಯದಲ್ಲಿ ವಿದ್ಯುತ್​ ಕಡಿತ ಸಮಸ್ಯೆಯಿಂದ ಜನ ಹೈರಾಣಾಗಿದ್ದಾರೆ. ಮಳೆ ಸುರಿದ ಸಂದರ್ಭ ಸುಳ್ಯದಲ್ಲಿ ದಿನಗಟ್ಟಲೆ ವಿದ್ಯುತ್​ ಕಡಿತಗೊಳಿಸಲಾಗುತ್ತದೆ ಎಂದು ಧರ್ಮಪಾಲ ಕೊಯಿಂಗಾಜೆ ಹೇಳಿದರು. ಮಳೆಗಾಲಕ್ಕೆ ಮುನ್ನ ಲೈನ್​ಗೆ ತಾಗುವ ಮರದ ಗೆಲ್ಲುಗಳನ್ನು ಕಡಿದು ಲೈನ್​ಗಳನ್ನು ಸುಸ್ಥಿತಿಯಲ್ಲಿ ಇಡುವಂತೆ ಶಾಸಕರು ಮೆಸ್ಕಾಂ ಇಂಜಿನಿಯರ್​ಗೆ ಸೂಚನೆ ನೀಡಿದರು.