ಅನಂತಪುರದಲ್ಲಿರುವ ಕೈಗಾರಿಕಾ ವಲಯ
ರೈಲು ಮಾರ್ಗ ವಿದ್ಯುದ್ದೀಕರಣಗೊಂಡ ಬಳಿಕ ಕುಂಬಳೆಯ ಮೂಲಕ ರೈಲುಗಳು ಹಾದುಹೋದರೆ ಅನಂತಪುರ ಕೈಗಾರಿಕಾ ವಲಯದಲ್ಲಿರುವ ಕೈಗಾರಿಕೆಗಳ ಯಂತ್ರಗಳು ಕೆಲಸ ಮಾಡುವುದನ್ನು ನಿಲ್ಲಿಸುತ್ತವೆ. ಇದಕ್ಕೆ ಕಾರಣ ಲೋವೋಲ್ಟೇಜ್ ಸಮಸ್ಯೆ ಎಂಬುದು ಕೈಗಾರಿಕೋದ್ಯಮಿಗಳ ಅಳಲು. ಜಿಲ್ಲೆಯಲ್ಲಿ ಕೈಗಾರಿಕೆಗಳ ಉತ್ತೇಜನಕ್ಕೆ ಪೂರಕವಾದ ವಾತಾವರಣವಿದ್ದರೂ ವಿದ್ಯುತ್ ಬಿಕ್ಕಟ್ಟು ಕೈಗಾರಿಕಾ ವಲಯಕ್ಕೆ ಹಿನ್ನಡೆಯಾಗುತ್ತಿದೆ.
ರಾಷ್ಟ್ರೀಯ ಹೆದ್ದಾರಿ 66, ಮಂಗಳೂರು-ಕಣ್ಣೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಮಂಗಳೂರು ಬಂದರು ಕೂಡ ಸಮೀಪದಲ್ಲೇ ಇರುವ ಕಾರಣ ಕಾಸರಗೋಡು ಕೈಗಾರಿಕೆಗಳ ಹೂಡಿಕೆಗೆ ಪರಿಸರಸ್ನೇಹಿ ಜಿಲ್ಲೆಯಾಗಿದೆ.
ಜಿಲ್ಲೆಯಲ್ಲಿ ಐದು ಕೈಗಾರಿಕಾ ಎಸ್ಟೇಟ್‌ಗಳು ಕಾರ್ಯನಿರ್ವಹಿಸುತ್ತಿವೆ. ಅವುಗಳಲ್ಲಿರುವ ಎಲ್ಲ ಪ್ಲಾಟ್‌ಗಳನ್ನು ವಿವಿಧ ಕೈಗಾರಿಕೆಗಳಿಗಾಗಿ ಸ್ವಾಧೀನಪಡಿಸಿಕೊಳ್ಳಲಾಗಿದೆ. ಹಲವಾರು ಘಟಕಗಳು ಈಗಾಗಲೇ ಕಾರ್ಯಾರಂಭಿಸಿವೆ. ಸಾಕಷ್ಟು ಸರ್ಕಾರಿ ಭೂಮಿ ಲಭ್ಯವಿರುವುದರಿಂದ ಭವಿಷ್ಯದಲ್ಲಿ ಹೆಚ್ಚಿನ ಹೂಡಿಕೆ ಮತ್ತು ದೊಡ್ಡ ಕೈಗಾರಿಕಾಗಳನ್ನು ಆಕರ್ಷಿಸುವ ಸಾಮರ್ಥ್ಯವನ್ನು ಜಿಲ್ಲೆ ಹೊಂದಿದೆ.
ಲೋವೋಲ್ಟೇಜ್ ಸಮಸ್ಯೆ: ಮೂಲ ಸೌಕರ್ಯ ಕೊರತೆ, ವಿಶೇಷವಾಗಿ ವಿದ್ಯುತ್ ಸರಬರಾಜಿನಲ್ಲಿನ ಅಸ್ಥಿರತೆ ಕೈಗಾರಿಕೋದ್ಯಮಿಗಳಿಗೆ ದೊಡ್ಡ ಹೊಡೆತ ನೀಡುತ್ತಿದೆ. ವಿದ್ಯುತ್ ವ್ಯತ್ಯಯವಿಲ್ಲದಿದ್ದರೂ ಸಂಜೆ 6 ಗಂಟೆಯ ನಂತರ ವೋಲ್ಟೇಜ್ ಗಮನಾರ್ಹವಾಗಿ ಕಡಿಮೆಯಾಗುವುದರಿಂದ ಯಂತ್ರಗಳು ಕೆಲಸ ಮಾಡುವುದನ್ನೇ ನಿಲ್ಲಿಸುತ್ತವೆ.
ಭಾರತೀಯ ರೈಲ್ವೆ ಕೂಡ ಕೈಗಾರಿಕಾ ಎಸ್ಟೇಟ್‌ಗೆ ಬರುವ ವಿದ್ಯುತ್ ಕೇಂದ್ರಗಳಿಂದ ವಿದ್ಯುತ್ ಪಡೆಯುತ್ತದೆ. ವಿದ್ಯುತ್ ಚಾಲಿತ ರೈಲುಗಳು ಈ ಮಾರ್ಗದಲ್ಲಿ ಹಾದುಹೋದಾಗ, ವೋಲ್ಟೇಜ್ ಕಡಿಮೆಯಾಗಿ ಯಂತ್ರಗಳು ಕೆಲಸ ಮಾಡುವುದಿಲ್ಲ ಎಂದು ಅನಂತಪುರಂ ಕೈಗಾರಿಕಾ ಎಸ್ಟೇಟ್‌ನಲ್ಲಿರುವ ಚಾಕೊಲೇಟ್ ಉತ್ಪಾದನಾ ಕಾರ್ಖಾನೆಯ ಮಾಲೀಕ ಮತ್ತು ಕೈಗಾರಿಕಾ ಮಾಲೀಕರ ಸಂಘದ ಅಧ್ಯಕ್ಷ ಎನ್. ರತ್ನಾಕರನ್ ಹೇಳುತ್ತಾರೆ.
ಯಂತ್ರಗಳಿಗೆ ಹಾನಿ: ಹೆಚ್ಚಿನ ವೋಲ್ಟೇಜ್ ಅಗತ್ಯವಿರುವ ಕೈಗಾರಿಕಾ ವಲಯದಲ್ಲಿ ವೋಲ್ಟೇಜ್‌ನಲ್ಲಿ ಏರಿಳಿತವಾದಾಗ ದುಬಾರಿ ವೆಚ್ಚದ ಯಂತ್ರೋಪಕರಣಗಳಿಗೆ ಹಾನಿಯಾಗಿ ಲಕ್ಷಾಂತರ ರೂ. ನಷ್ಟವಾಗುತ್ತದೆ. ಇದು ಉತ್ಪಾದನಾ ವೆಚ್ಚಕ್ಕೂ ಕಾರಣವಾಗುತ್ತಿದೆ ಎಂಬುದು ಕೈಗಾರಿಕೋದ್ಯಮಿಗಳ ಅಳಲು.
ಕುಂಬಳೆ, ಅನಂತಪುರಂ 1 ಮತ್ತು 2 ಎಸ್ಟೇಟ್‌ಗಳಲ್ಲಿ ಪ್ಲೈವುಡ್ ಘಟಕಗಳು ಹೆಚ್ಚಾಗಿ ಕಾರ್ಯನಿರ್ವಹಿಸುತ್ತಿವೆ. ವೋಲ್ಟೇಜ್ ಕಡಿಮೆಯಾದಾಗ ಜನರೇಟರ್‌ಗಳನ್ನು ಬಳಸಬೇಕಾಗುತ್ತದೆ. ಇದಕ್ಕೆ ದಿನಕ್ಕೆ 30,000 ರೂ.ವರೆಗೆ ವೆಚ್ಚವಾಗುತ್ತದೆ. ಉತ್ಪಾದನಾ ವೆಚ್ಚ ಹೆಚ್ಚಳವಾಗುವುದರಿಂದ ಆದಾಯದ ಮೇಲೆ ಪರಿಣಾಮ ಬೀರುತ್ತದೆ.
ಓವರ್‌ಲೋಡ್ ಪರಿಹರಿಸಲು ಪ್ರಸ್ತುತ ಮೈಲಾಟ್ಟಿ-ವಿದ್ಯಾನಗರ ಮತ್ತು ಸೀತಾಂಗೋಳಿ-ವಿದ್ಯಾನಗರ ಪ್ರಸರಣ ಮಾರ್ಗಗಳ ಮೂಲಕ ಕೈಗಾರಿಕಾ ಎಸ್ಟೇಟ್‌ಗಳಿಗೆ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ. ಆದರೂ ಸಮಸ್ಯೆಗೆ ಶಾಶ್ವತ ಪರಿಹಾರ ಸಿಕ್ಕಿಲ್ಲ.
ಪ್ರಮುಖ ಕೈಗಾರಿಕಾ ಎಸ್ಟೇಟ್‌ಗಳು
ಅನಂತಪುರ 1 ಮತ್ತು 2 ಕೈಗಾರಿಕಾ ಪಾರ್ಕ್, ಸೀತಾಂಗೋಳಿ ಕಿನ್‌ಫ್ರಾ ಕೈಗಾರಿಕಾ ಪಾರ್ಕ್, ಸಿಡ್ಕೊ ಚಟ್ಟಂಚಲ್ ಕೈಗಾರಿಕಾ ಪಾರ್ಕ್, ಮಡಿಕೈ ಗುರು ವನಮ್ ಕೈಗಾರಿಕಾ ಪಾರ್ಕ್, ಎಚ್‌ಎಎಲ್ ಪಾರ್ಕ್, ಕೃಷಿ ಉತ್ಪನ್ನ ಸಂಸ್ಕರಣೆ, ಮರಮಟ್ಟುಗಳಿಗೆ ಸಂಬಂಧಿಸಿದ ಕೈಗಾರಿಕೆಗಳು, ಖನಿಜ ಮತ್ತು ನಿರ್ಮಾಣ ಸಾಮಗ್ರಿಗಳು ಹಾಗೂ ಪೆಟ್ರೋಕೆಮಿಕಲ್ಸ್ ಉದ್ಯಮಗಳು ಇಲ್ಲಿ ಕಾರ್ಯಾಚರಿಸುತ್ತಿವೆ.
ಬಜೆಟ್‌ನಲ್ಲಿ ಯಾವುದೇ ಉಲ್ಲೇಖವಿಲ್ಲ
ಮಧ್ಯಂತರ ರಾಜ್ಯ ಬಜೆಟ್‌ನಲ್ಲಿ ಜಿಲ್ಲೆಯ ವಿದ್ಯುತ್ ಮೂಲ ಸೌಕರ್ಯ ಅಭಿವೃದ್ಧಿ ಕುರಿತು ಘೋಷಣೆಯಾಗಲಿದೆ ಎಂಬ ಕೈಗಾರಿಕೋದ್ಯಮಿಗಳ ನಿರೀಕ್ಷೆ ಹುಸಿಯಾಗಿದೆ. ಅನಂತಪುರದಲ್ಲಿ ಮಾತ್ರವಲ್ಲದೆ ಜಿಲ್ಲೆಯ ಇತರ ಮೂರು ಕೈಗಾರಿಕಾ ಎಸ್ಟೇಟ್‌ಗಳಲ್ಲಿಯೂ ಲೋವೋಲ್ಟೇಜ್ ಸಮಸ್ಯೆ ಕಾಡುತ್ತಿದೆ. ಹಗಲಿನಲ್ಲಿ ಸಮಸ್ಯೆ ಗಂಭೀರವಾಗಿಲ್ಲದಿದ್ದರೂ, ರಾತ್ರಿಯಲ್ಲಿ ಸಮಸ್ಯೆ ಬಿಗಡಾಯಿಸುತ್ತಿದೆ.
ರೈಲು ವಿದ್ಯುದ್ದೀಕರಣಗೊಂಡಿರುವುದರಿಂದ ಅನಂತಪುರ ಕೈಗಾರಿಕಾ ವಲಯದ ವಿದ್ಯುತ್ ಬಳಸಲಾಗುತ್ತಿದೆ. ಇದು ಇಲ್ಲಿನ ಕೈಗಾರಿಕೆಗಳಿಗೆ ಹೊಡೆತ ನೀಡಿದೆ. ರೈಲು ಹಾದುಹೋದಾಗ ವೋಲ್ಟೇಜ್ ಕಡಿಮೆಯಾಗುತ್ತದೆ. ಇದು ಯಂತ್ರಗಳ ಕಾರ್ಯನಿರ್ವಹಣೆ ಮೇಲೆ ಪರಿಣಾಮ ಬೀರುತ್ತಿದೆ. ಸಂಬಂಧಪಟ್ಟವರು ಈ ಬಗ್ಗೆ ತುರ್ತು ಕ್ರಮ ಕೈಗೊಳ್ಳಬೇಕು.
ವಿದ್ಯುತ್ ಕೊರತೆಯನ್ನು ನೀಗಿಸದೆ ಹೊಸ ಹೂಡಿಕೆದಾರರನ್ನು ಆಕರ್ಷಿಸುವುದು ಕಷ್ಟ . ಜಿಲ್ಲೆಯಲ್ಲಿ ವಿದ್ಯುತ್ ಮೂಲ ಸೌಕರ್ಯವನ್ನು ಬಲಪಡಿಸಲು ರಾಜ್ಯ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು.