ಏಪ್ರಿಲ್ 10ರಿಂದ 12ರವರೆಗೆ ಕರಾವಳಿ ಕರ್ನಾಟಕದಲ್ಲಿ ಬಿಸಿಲು ಮತ್ತು ಆದ್ರತೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.  
ದಕ್ಷಿಣ ಕನ್ನಡ

ಕರಾವಳಿಯಲ್ಲಿ ಬಿಸಿ ಮತ್ತು ಆದ್ರರ್ತೆ ಪರಿಸ್ಥಿತಿಗಳು ಹೆಚ್ಚಳ ಸಾಧ್ಯತೆ

ಮಂಗಳೂರು: ಏಪ್ರಿಲ್ 10ರಿಂದ 12ರವರೆಗೆ ಕರಾವಳಿ ಕರ್ನಾಟಕದಲ್ಲಿ ಬಿಸಿಲು ಮತ್ತು ಆದ್ರತೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ದಕ್ಷಿಣ ಕನ್ನಡ (ದ.ಕ) ಮತ್ತು ಉಡುಪಿ ಜಿಲ್ಲೆಗಳಲ್ಲಿಯೂ ಬಿಸಿಯಾದ ವಾತಾವರಣ ಮುಂದುವರಿಯಲಿದ್ದು, ಜನರು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅಧಿಕಾರಿಗಳು ಸೂಚಿಸಿದ್ದಾರೆ.
ಹವಾಮಾನ ಇಲಾಖೆ ನೀಡಿದ ಮಾಹಿತಿಯ ಪ್ರಕಾರ, ಈ ಅವಧಿಯಲ್ಲಿ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 2 ರಿಂದ 3 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗುವ ಸಾಧ್ಯತೆ ಇದೆ. ಕರಾವಳಿ ಭಾಗಗಳಲ್ಲಿ ಸಮುದ್ರದ ಸಮೀಪತೆ ಕಾರಣದಿಂದಾಗಿ ಆದ್ರತೆ ಪ್ರಮಾಣವೂ ಏರಿಕೆಯಾಗಲಿದೆ. ಇದರಿಂದಾಗಿ ಹೀಟ್ ಇಂಡೆಕ್ಸ್ ಹೆಚ್ಚಾಗಿ ಅನುಭವವಾಗಲಿದ್ದು, ಜನರಿಗೆ ಹೆಚ್ಚಿನ ಉಷ್ಣತೆ ಅನುಭವವಾಗಬಹುದು. ವಿಶೇಷವಾಗಿ ಮಧ್ಯಾಹ್ನ ಸಮಯದಲ್ಲಿ ಬಿಸಿಲಿನ ತೀವ್ರತೆ ಹೆಚ್ಚು ಇರಲಿದ್ದು, ಹೊರಾಂಗಣ ಚಟುವಟಿಕೆಗಳನ್ನು ಸಾಧ್ಯವಾದಷ್ಟು ಕಡಿಮೆಗೊಳಿಸಲು ಸಲಹೆ ನೀಡಲಾಗಿದೆ. ಮೀನುಗಾರರು, ಕೂಲಿ ಕಾರ್ಮಿಕರು ಮತ್ತು ಹೊರಗಡೆ ಕೆಲಸ ಮಾಡುವವರು ಹೆಚ್ಚಾಗಿ ಎಚ್ಚರಿಕೆಯಿಂದ ಇರಬೇಕು. ದೇಹದ ನೀರಿನ ಪ್ರಮಾಣವನ್ನು ಕಾಪಾಡಿಕೊಳ್ಳಲು ಸಾಕಷ್ಟು ನೀರು ಸೇವಿಸುವುದು ಅತ್ಯವಶ್ಯಕ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ತೇವಾಂಶದ ಗಾಳಿಯಿಂದ ಆದ್ರತೆ ಹೆಚ್ಚಳ

ಹವಾಮಾನ ತಜ್ಞರ ಪ್ರಕಾರ, ಗಾಳಿ ಸಂಚಲನದ ಕೊರತೆ ಮತ್ತು ಮೋಡರಹಿತ ಆಕಾಶದ ಕಾರಣದಿಂದಾಗಿ ತಾಪಮಾನ ಹೆಚ್ಚಾಗುತ್ತಿದೆ. ಇದೇ ಸಮಯದಲ್ಲಿ ಸಮುದ್ರದಿಂದ ಭೂಭಾಗಕ್ಕೆ ಬರುವ ತೇವಾಂಶದ ಗಾಳಿಗಳು ಆದ್ರತೆಯನ್ನು ಹೆಚ್ಚಿಸುತ್ತಿವೆ. ಈ ಎರಡರ ಸಂಯೋಗದಿಂದಾಗಿ ಉಷ್ಣ ಅಲೆ ಅನುಭವವಾಗುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ಕೆಲವು ಮುನ್ನೆಚ್ಚರಿಕೆ ಕ್ರಮಗಳನ್ನು ಪ್ರಕಟಿಸಿದೆ. ಅನಗತ್ಯವಾಗಿ ಬಿಸಿಲಿನಲ್ಲಿ ತಿರುಗಾಡಬಾರದು, ತೆಳುವಾದ ಹಾಗೂ ಹಗುರವಾದ ಬಟ್ಟೆಗಳನ್ನು ಧರಿಸಬೇಕು, ತಲೆಗೆ ಟೋಪಿ ಅಥವಾ ಛತ್ರಿಯನ್ನು ಬಳಸಬೇಕು ಎಂದು ಸೂಚಿಸಲಾಗಿದೆ. ಜೊತೆಗೆ, ಮಕ್ಕಳನ್ನು ವಾಹನಗಳೊಳಗೆ ಒಬ್ಬರೇ ಬಿಡಬಾರದು ಎಂಬ ಎಚ್ಚರಿಕೆಯೂ ನೀಡಲಾಗಿದೆ.

ಸಾಮಾನ್ಯ ಮಳೆಯ ಸಾಧ್ಯತೆ

ಬಂಗಾಳಕೊಲ್ಲಿಯ ಕಡೆಯಿಂದ ಬೀಸುತ್ತಿರುವ ಗಾಳಿಯ ಪ್ರಭಾವವು ನಿಧಾನವಾಗಿ ಬಲಗೊಳ್ಳುವ ನಿರೀಕ್ಷೆಗಳಿವೆ. ಕಾಸರಗೋಡು, ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಬಿಸಿಲಿನ ತಾಪ ಅಧಿಕವಾಗಲಿದ್ದು, ಕಾಸರಗೋಡು, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ನಾಳೆ ಮುಂಜಾನೆ ಅಲ್ಲಲ್ಲಿ ಸಾಮಾನ್ಯ ಮಳೆಯ ಸಾಧ್ಯತೆಗಳಿವೆ. ಈಗಿನಂತೆ ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಎಪ್ರಿಲ್ 15ರ ನಂತರ ಮಳೆ ಬರುವ ಸಾಧ್ಯತೆ ಹೆಚ್ಚಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.