ಬಂಟ್ವಾಳ: ಇಲ್ಲಿನ ಪುರಸಭೆಯಲ್ಲಿ ನಾಲ್ಕು ವರ್ಷಗಳಿಂದ ಬಳಕೆಯಾಗದೆ ಟರ್ಪಾಲು ಹೊದ್ದುಕೊಂಡು ತುಕ್ಕು ಹಿಡಿಯುತ್ತಿದ್ದ ಹಿಟಾಚಿ ಯಂತ್ರ ಕೊನೆಗೂ ಕಾರ್ಯಕ್ಕಿಳಿದಿದೆ.
ಪುರಸಭೆ ಮುಖ್ಯಾಧಿಕಾರಿ ತೀರ್ಥಪ್ರಸಾದ್ ಮೂಲೆ ಸೇರಿದ್ದ ಯಂತ್ರವನ್ನು ದುರಸ್ತಿಗೊಳಿಸಿ ಜುಲೈನಲ್ಲಿ ಕಾರ್ಯಗತಗೊಳಿಸುವಲ್ಲಿ ಸಫಲರಾಗಿದ್ದಾರೆ. ಬಂಟ್ವಾಳ ಪುರಸಭೆ ತ್ಯಾಜ್ಯ ವಿಲೇವಾರಿ ಸಹಿತ ವಿವಿಧ ಕೆಲಸಗಳಿಗೆ ಸಂಬಂಧಿಸಿದಂತೆ ಅಮೃತ ಭಾರತ್ ಯೋಜನೆಯಡಿ ಖರೀದಿಸಲಾಗಿದ್ದ ಹಿಟಾಚಿ ಯಂತ್ರ ಕೆಲವು ವರ್ಷಗಳಿಂದ ಪುರಸಭಾ ಹಿಂಭಾಗದಲ್ಲಿ ಟರ್ಪಾಲು ಹೊದ್ದುಕೊಂಡು ನಿಂತಿತ್ತು. ಜನಪ್ರತಿನಿಧಿಗಳ ಆಡಳಿತ ಇದ್ದಾಗ ಪ್ರತಿ ಸಾಮಾನ್ಯ ಸಭೆಗಳಲ್ಲೂ ಈ ಬಗ್ಗೆ ಚರ್ಚೆ ನಡೆಯುತ್ತಿತ್ತಾದರೂ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದ ಯಂತ್ರ ಬಳಕೆಗೆ ಸಿಗದೆ ನನೆಗುದಿಗೆ ಬಿದ್ದಿತ್ತು.
ಈ ಬಗ್ಗೆ ಕಾರ್ಯಪ್ರವೃತ್ತರಾದ ಮುಖ್ಯಾಧಿಕಾರಿ ತೀರ್ಥಪ್ರಸಾದ್ ಮೆಕಾನಿಕ್ ಸಂಪರ್ಕಿಸಿ ಸ್ಥಳಕ್ಕೆ ಕರೆಸಿ ಹಿಟಾಚಿ ಯಂತ್ರದ ದುರಸ್ತಿಗೆ ಕ್ರಮ ಕೈಗೊಂಡಿದ್ದಾರೆ. ಜು.30ರಂದು ಹಿಟಾಚಿ ಯಂತ್ರ ದುರಸ್ತಿ ಪಡಿಸಲಾಗಿದ್ದು, ಇದೀಗ ಪುರಸಭಾ ಕಾಮಗಾರಿಗಳಿಗೆ ಬಳಕೆಯಾಗಲಿದೆ. ಲಕ್ಷಾಂತರ ರೂ. ಖರ್ಚು ಮಾಡಿ ಖರೀದಿಸಿದ ಹಿಟಾಚಿ ಯಂತ್ರ ಬಳಕೆಯಾಗದೆ ಉಳಿದಿರುವ ಬಗ್ಗೆ ವಿಜಯವಾಣಿ ವಿಶೇಷ ವರದಿ ಪ್ರಕಟಿಸಿ ಗಮನ ಸೆಳೆದಿತ್ತು.