ಕರಾವಳಿ ಭಾಗದ ರೈಲ್ವೆ ಪ್ರಯಾಣಿಕರ ದಶಕಗಳ ಕಾಲದ ಕನಸು ಮತ್ತು ಬೇಡಿಕೆ ಅಂತಿಮವಾಗಿ ಈಡೇರಿದೆ. ಮಂಗಳೂರು ರೈಲ್ವೆ ಪ್ರದೇಶವನ್ನು ದಕ್ಷಿಣ ರೈಲ್ವೆಯ ಪಾಲಕ್ಕಾಡ್ ವಿಭಾಗದಿಂದ ಹಿಂಪಡೆದು, ನೈರುತ್ಯ ರೈಲ್ವೆಯ ಮೈಸೂರು ವಿಭಾಗಕ್ಕೆ ಸೇರ್ಪಡೆಗೊಳಿಸಿ ಕೇಂದ್ರ ರೈಲ್ವೆ ಮಂಡಳಿ ಐತಿಹಾಸಿಕ ಆದೇಶ ಹೊರಡಿಸಿದೆ.
ಮಂಗಳೂರು: ಕರಾವಳಿ ಭಾಗದ ರೈಲ್ವೆ ಪ್ರಯಾಣಿಕರ ದಶಕಗಳ ಕಾಲದ ಕನಸು ಮತ್ತು ಬೇಡಿಕೆ ಅಂತಿಮವಾಗಿ ಈಡೇರಿದೆ. ಮಂಗಳೂರು ರೈಲ್ವೆ ಪ್ರದೇಶವನ್ನು ದಕ್ಷಿಣ ರೈಲ್ವೆಯ ಪಾಲಕ್ಕಾಡ್ ವಿಭಾಗದಿಂದ ಹಿಂಪಡೆದು, ನೈರುತ್ಯ ರೈಲ್ವೆಯ ಮೈಸೂರು ವಿಭಾಗಕ್ಕೆ ಸೇರ್ಪಡೆಗೊಳಿಸಿ ಕೇಂದ್ರ ರೈಲ್ವೆ ಮಂಡಳಿ ಐತಿಹಾಸಿಕ ಆದೇಶ ಹೊರಡಿಸಿದೆ.
ಈ ಕುರಿತು ರೈಲ್ವೆ ಮಂಡಳಿಯ ನೈರುತ್ಯ, ದಕ್ಷಿಣ ಹಾಗೂ ಕೊಂಕಣ ರೈಲ್ವೆ ವಿಭಾಗಗಳ ಉನ್ನತಾಧಿಕಾರಿಗಳಿಗೆ ಆ.21 ರಂದು ಅಧಿಕೃತ ಸುತ್ತೋಲೆ ರವಾನಿಸಲಾಗಿದೆ.
*ಕೊಂಕಣ ರೈಲ್ವೆ ವ್ಯಾಪ್ತಿಯಲ್ಲೇ ತೊಕೂರು ರೈಲ್ವೆ ನಿಲ್ದಾಣ
ಈ ಹೊಸ ನಿರ್ಧಾರದ ಪ್ರಕಾರ, ಉಳ್ಳಾಲವರೆಗಿನ (ಉಳ್ಳಾಲ ಸೇರಿದಂತೆ) ಮಂಗಳೂರು ರೈಲ್ವೆ ವ್ಯಾಪ್ತಿಯು ಮೈಸೂರು ವಿಭಾಗದ ಸುಪರ್ದಿಗೆ ಬರಲಿದೆ. ಇದರೊಂದಿಗೆ ದಕ್ಷಿಣ ರೈಲ್ವೆ ಮತ್ತು ನೈರುತ್ಯ ರೈಲ್ವೆಯ ಇಂಟರ್‌ಚೇಂಜ್ (ಬದಲಾವಣೆ) ಪಾಯಿಂಟ್ ಇದುವರೆಗೆ ಪಡೀಲ್‌ನಲ್ಲಿದ್ದುದು, ಇನ್ಮುಂದೆ ಉಳ್ಳಾಲಕ್ಕೆ ಸ್ಥಳಾಂತರಗೊಳ್ಳಲಿದೆ. ಇನ್ನು ತೊಕೂರು ರೈಲ್ವೆ ನಿಲ್ದಾಣವು ಪ್ರಸ್ತುತ ಇರುವಂತೆ ಕೊಂಕಣ ರೈಲ್ವೆ ವ್ಯಾಪ್ತಿಯಲ್ಲೇ ಮುಂದುವರಿಯಲಿದ್ದು, ಕೊಂಕಣ ಹಾಗೂ ನೈರುತ್ಯ ರೈಲ್ವೆ ನಡುವಿನ ಇಂಟರ್‌ಚೇಂಜ್ ಪಾಯಿಂಟ್ ಆಗಿ ಕಾರ್ಯನಿರ್ವಹಿಸಲಿದೆ.
*ಅ.1 ರಿಂದ ಅಧಿಕೃತವಾಗಿ ಜಾರಿ
ಈ ಆಡಳಿತಾತ್ಮಕ ಬದಲಾವಣೆಯು ಅಕ್ಟೋಬರ್ 1 ರಿಂದ ಅಧಿಕೃತವಾಗಿ ಜಾರಿಗೆ ಬರಲಿದೆ ಎಂದು ಪತ್ರದಲ್ಲಿ ಸ್ಪಷ್ಟಪಡಿಸಲಾಗಿದೆ. ಸಿಬ್ಬಂದಿ ಮತ್ತು ಅಧಿಕಾರಿಗಳ ವರ್ಗಾವಣೆಗೆ ಸಂಬಂಧಿಸಿದಂತೆ, ಗೆಜೆಟೆಡ್ ಅಧಿಕಾರಿಗಳಿಗೆ ಜಾರಿಯಲ್ಲಿರುವ ನಿಯಮಾವಳಿಗಳಂತೆ ವರ್ಗಾವಣೆ ಆದೇಶ ನೀಡಲಾಗುತ್ತದೆ. ನಾನ್-ಗೆಜೆಟೆಡ್ ಸಿಬ್ಬಂದಿಗೆ ದಕ್ಷಿಣ ರೈಲ್ವೆಯಲ್ಲೇ ಉಳಿ ಯುವ ಅಥವಾ ನೈರುತ್ಯ ರೈಲ್ವೆಗೆ ಬದಲಾಗುವ ಆಯ್ಕೆಯನ್ನು ನೀಡಲಾಗುತ್ತಿದ್ದು, ಸೇವಾವಧಿಯ ಆಧಾರದ ಮೇಲೆ ಜೇಷ್ಠತೆ ನಿಗದಿಯಾಗಲಿದೆ.
ತಾಂತ್ರಿಕ-ಆಡಳಿತಾತ್ಮಕ ತೊಡಕು ನಿವಾರಣೆಗೆ
ನೈರುತ್ಯ ರೈಲ್ವೆ ವ್ಯಾಪ್ತಿಗೆ ಸೇರ್ಪಡೆ ಅನಿವಾರ್ಯ
ಕರಾವಳಿ ಭಾಗದ ರೈಲ್ವೆ ಅಭಿವೃದ್ಧಿಗೆ ಮತ್ತು ಹೊಸ ರೈಲುಗಳ ಚಾಲನೆಗೆ ನೈರುತ್ಯ ರೈಲ್ವೆ ವ್ಯಾಪ್ತಿಗೆ ಸೇರ್ಪಡೆಯಾಗುವುದು ಅಗತ್ಯವಾಗಿತ್ತು. ಪಾಲಕ್ಕಾಡ್ ವಿಭಾಗದಲ್ಲಿದ್ದಾಗ ಎದುರಾಗುತ್ತಿದ್ದ ಹಲವು ತಾಂತ್ರಿಕ ಹಾಗೂ ಆಡಳಿತಾತ್ಮಕ ತೊಡಕುಗಳು ಈ ನಿರ್ಧಾರದಿಂದ ನಿವಾರಣೆಯಾಗಲಿವೆ. ಕರ್ನಾಟಕದ ಮೈಸೂರು ಮತ್ತು ಬೆಂಗಳೂರು ಭಾಗಕ್ಕೆ ಸಂಪರ್ಕ ಕಲ್ಪಿಸುವ ರೈಲು ಸೇವೆಗಳ ವಿಸ್ತರಣೆಗೆ ಹಾಗೂ ಮಂಗಳೂರು ಭಾಗದ ಮೂಲಸೌಕರ್ಯ ಅಭಿವೃದ್ಧಿಗೆ ಈ ಐತಿಹಾಸಿಕ ಜುರಿಸ್ಡಿಕ್ಷನ್ ಬದಲಾವಣೆ ಪ್ರಮುಖ ಮೈಲಿಗಲ್ಲಾಗಲಿದೆ.