ಮೂಡುಬಿದಿರೆ ನಗರ ಮಂಡಲದಿಂದ ಹಿಂದೂ ಸಂಗಮ ಕಾರ್ಯಕ್ರಮ ನಡೆಯಿತು. ಸಂಸ್ಕಾರ ಭಾರತಿ ಮಂಗಳೂರು ಜಿಲ್ಲೆಯ ಅಧ್ಯಕ್ಷ ತಾರಾನಾಥ ಕೊಟ್ಟಾರಿ, ವಕೀಲ ಶರತ್ ಶೆಟ್ಟಿ ಮೊದಲಾದವರಿದ್ದರು.
ಮೂಡುಬಿದಿರೆ: ಇತ್ತೀಚಿನ ದಿನಗಳಲ್ಲಿ ಕೌಟುಂಬಿಕ ಮೌಲ್ಯಗಳು ಕ್ಷೀಣಿಸುತ್ತಿವೆ. ಅಡುಗೆ ಮನೆಗಳು ಖಾಲಿಯಾಗುತ್ತಿದ್ದು, ಆನ್‌ಲೈನ್ ಆಹಾರ ಪದ್ಧತಿ ಹೆಚ್ಚುತ್ತಿದೆ. ಕೌಟುಂಬಿಕ ವ್ಯವಸ್ಥೆಯೇ ಹಿಂದುತ್ವದ ಮೂಲ. ಕುಟುಂಬಗಳು ಒಟ್ಟಾಗಿ ಊಟ ಮಾಡಬೇಕು. ಭಜನೆ, ಹಬ್ಬಗಳನ್ನು ಸಂಭ್ರಮದಿಂದ ಆಚರಿಸಬೇಕು. ಉಡುಗೆ-ತೊಡುಗೆ ಹಾಗೂ ಆಚರಣೆಗಳಲ್ಲಿ ಸ್ವದೇಶಿತನ ಅಳವಡಿಸಿಕೊಳ್ಳಬೇಕು ಎಂದು ಸಂಸ್ಕಾರ ಭಾರತಿ ಮಂಗಳೂರು ಜಿಲ್ಲೆಯ ಅಧ್ಯಕ್ಷ ತಾರಾನಾಥ ಕೊಟ್ಟಾರಿ ಹೇಳಿದರು.
ಭಾನುವಾರ ಸ್ವರಾಜ್ಯ ಮೈದಾನದಲ್ಲಿ ನಡೆದ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ಬೌದ್ಧಿಕ್ ನೀಡಿದರು.
ವಕೀಲ ಶರತ್ ಶೆಟ್ಟಿ ಅಧ್ಯಕ್ಷತೆ ವಹಿಸಿ, ಸನಾತನ ಹಿಂದೂ ಧರ್ಮದ ವೇದಗಳು, ಮಹಾಭಾರತ, ರಾಮಾಯಣ, ಭಗವದ್ಗೀತೆಗಳಲ್ಲಿನ ಯಥೋ ಧಮರ್ಃ ತಥೋ ಜಯಃ, ಸತ್ಯಮೇವ ಜಯತೇ ಎಂಬ ಧ್ಯೇಯ ವಾಕ್ಯವನ್ನು ನಮ್ಮ ಸಂವಿಧಾನ, ಸಂಸತ್ತು ಹಾಗೂ ಸರ್ವೋಚ್ಚ ನ್ಯಾಯಾಲಯಗಳಲ್ಲಿ ಅಳವಡಿಸಿಕೊಂಡಿರುವುದು ಸನಾತನ ಧರ್ಮದ ಹಿರಿಮೆಯ ಪ್ರತೀಕ ಎಂದರು.
ಮನೋಜ್ ಶೆಣೈ, ಪಟ್ಟಣಶೆಟ್ಟಿ ಸುದೇಶ್ ಜೈನ್, ಕೋಟಬಾಗಿಲು ದೇವಸ್ಥಾನದ ಮೊಕ್ತೇಸರ ವಿಶ್ವನಾಥ ಹೆಗ್ಡೆ, ಮಣಿಕಂಠ ಕ್ಷೇತ್ರದ ಪ್ರಧಾನ ಅರ್ಚಕ ಶಿವಾನಂದ ಶಾಂತಿ, ಗೌರಿಕೆರೆ ರಾಮಮಂದಿರದ ವಿಶ್ವನಾಥ ದೇವಾಡಿಗ, ವಿಶ್ವಕರ್ಮ ಸಮಾಜದ ಶಿವರಾಮ ಆಚಾರ್, ಮಾರಿಗುಡಿ ಅರ್ಚಕ ಸುಂದರ ಬೋವಿ ಉಪಸ್ಥಿತರಿದ್ದರು.