ಕಲ್ಲಡ್ಕ ಸಮೀಪದ ಪೂರ್ಲಿಪ್ಪಾಡಿ ಬಳಿ ಪೈಪ್‌ಪೈನ್ ಒಡೆದು ಹೋಗಿರುವುದು. 
ದಕ್ಷಿಣ ಕನ್ನಡ

ಹೆದ್ದಾರಿ ಕಾಮಗಾರಿ ಅವಾಂತರ

 ಸಂದೀಪ್ ಸಲ್ಯಾನ್ ಬಂಟ್ವಾಳ
 ಬಿ.ಸಿ.ರೋಡು-ಅಡ್ಡಹೊಳೆ ಹೆದ್ದಾರಿ ಕಾಮಗಾರಿ ಬಹುತೇಕ ಪೂರ್ಣಗೊಂಡರೂ, ಹೆದ್ದಾರಿ ಕಾಮಗಾರಿ ನಡೆಸುವವರು ಸೃಷ್ಟಿಸುತ್ತಿರುವ ಸಮಸ್ಯೆ ಇನ್ನೂ ದೂರವಾಗಿಲ್ಲ. ಇದೀಗ ಕಲ್ಲಡ್ಕ ಸಮೀಪದ ಪೂರ್ಲಿಪ್ಪಾಡಿ ಬಳಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಪೈಪ್ ಒಡೆದು ಗೋಳ್ತಮಜಲು ಗ್ರಾಮದ ಪಟ್ಟೆಕೋಡಿ ಭಾಗದಲ್ಲಿ 8 ದಿನಗಳಿಂದ ಕುಡಿಯುವ ನೀರಿನ ಪೂರೈಕೆ ಇಲ್ಲವಾಗಿದ್ದು, ಕೊನೆಗೂ ನೀರಿಲ್ಲದೆ ಸ್ಥಳೀಯರು ಮನೆ ಬದಲಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ.
 ಹೆದ್ದಾರಿ ಕಾಮಗಾರಿ ಆರಂಭಗೊಂಡ ಸಂದರ್ಭದಿಂದಲೂ ನೀರಿನ ಪೈಪ್ ಒಡೆದು ತಿಂಗಳುಗಟ್ಟಲೆ ಅದು ದುರಸ್ತಿಯಾಗದೆ ನೀರಿನ ಸಮಸ್ಯೆ ಎದುರಾಗುತ್ತಲೇ ಇದ್ದು, ಬಂಟ್ವಾಳ ಪುರಸಭೆ, ನರಿಕೊಂಬು, ಬಾಳ್ತಿಲ, ಗೋಳ್ತಮಜಲು ಮೊದಲಾದ ಪಂಚಾಯಿತಿ ವ್ಯಾಪ್ತಿಗಳಲ್ಲಿ ನೀರಿನ ತೊಂದರೆ ಉಂಟಾಗುತ್ತಲೇ ಇತ್ತು. ಆದರೆ ಕಾಮಗಾರಿ ಪೂರ್ಣಗೊಳ್ಳುತ್ತಾ ಬರುತ್ತಿದ್ದಂತೆ ಬಹುತೇಕ ಕಡೆ ನೀರಿನ ಪೈಪ್ ಒಡೆಯುವ ಸಮಸ್ಯೆ ದೂರವಾಗಿದ್ದು, ಇದೀಗ ಗೋಳ್ತಮಜಲು ಗ್ರಾ.ಪಂ.ವ್ಯಾಪ್ತಿಯ ಪೂರ್ಲಿಪ್ಪಾಡಿ ಭಾಗದಲ್ಲಿ ಪೈಪ್ ಒಡೆದು ಜನರಿಗೆ ಕುಡಿಯುವ ನೀರಿಲ್ಲದಂತಾಗಿದೆ.
ನರಿಕೊಂಬು ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮೂಲಕ ಈ ಭಾಗದಲ್ಲಿ ನೀರು ಪೂರೈಕೆ ಮಾಡಲಾಗುತ್ತಿದ್ದು, ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅದನ್ನು ನಿರ್ವಹಣೆ ಮಾಡುತ್ತಿದೆ. ಈ ಭಾಗದಲ್ಲಿ ಹೆದ್ದಾರಿ ತಡೆಗೋಡೆ, ಚರಂಡಿ ಕಾಮಗಾರಿ ಪರಿಣಾಮ ನೀರಿನ ಪೈಪಿಗೆ ಹಾನಿಯಾಗಿದ್ದು, ಸ್ಥಳೀಯರ ಮಾಹಿತಿ ಪ್ರಕಾರ ಫೆ.7ರಿಂದ ನೀರು ಪೂರೈಕೆಯಾಗಿಲ್ಲ. ಈ ಕುರಿತು ಈಗಾಗಲೇ ಇಲಾಖೆ, ಎನ್‌ಎಚ್‌ಎಐ, ಹೆದ್ದಾರಿ ಗುತ್ತಿಗೆ ಸಂಸ್ಥೆ ಮಾತುಕತೆ, ಪತ್ರ ವ್ಯವಹಾರ ನಡೆಸಿದ್ದು, ಇನ್ನೂ ದುರಸ್ತಿ ಕಾರ್ಯ ನಡೆದಿಲ್ಲ ಎನ್ನಲಾಗಿದೆ. 

 ತಾತ್ಕಾಲಿಕವಾಗಿ ಮನೆ ಬದಲಾವಣೆ

 ಗೋಳ್ತಮಜಲಿನ ಪಟ್ಟೆಕೋಡಿ ಭಾಗದ ನಾಗರಿಕರ ಮಾಹಿತಿ ಪ್ರಕಾರ 8 ದಿನಗಳಿಂದ ನೀರಿನ ಪೂರೈಕೆ ಆಗದೇ ಇದ್ದು, ಇಂದು ಬರಬಹುದು, ನಾಳೆ ಬರಬಹುದು ಎಂದು ಕಷ್ಟವಾದರೂ ಬೇರೆ ಬೇರೆ ಮೂಲಗಳಿಂದ ನೀರಿನ ವ್ಯವಸ್ಥೆ ಮಾಡಿದ ಜನ ಇದೀಗ ಕೊನೆಗೂ ನೀರು ಬಾರದೇ ಇರುವುದನ್ನು ಕಂಡು ತಾತ್ಕಾಲಿಕವಾಗಿ ಮನೆ ಬದಲಿಸುವ ಯೋಜನೆ ಹಾಕಿಕೊಂಡಿದ್ದಾರೆ. ಒಂದಷ್ಟು ಮಂದಿ ತಮ್ಮ ಬೇರೆ ಮನೆ, ಸಂಬಂಧಿಕರ ಮನೆಗಳಿಗೆ ತೆರಳಿದ್ದು, ಇನ್ನೂ ಕೆಲವರು ಅದೇ ರೀತಿ ಹೋಗಲು ತೀರ್ಮಾನಿಸಿದ್ದಾರೆ. 

 ಶೀಘ್ರ ದುರಸ್ತಿಗೆ ಆಗ್ರಹ

 ಬಹುಗ್ರಾಮದ ಕುಡಿಯುವ ನೀರಿನ ಯೋಜನೆ ಪೈಪ್‌ಲೈನ್ ಬಹಳ ಆಳದಲ್ಲೇ ಇದ್ದು, ಅದರ ದುರಸ್ತಿ ಕಾರ್ಯ ಕೊಂಚ ಸವಾಲಿನ ವಿಚಾರವೂ ಹೌದು. ಇಲ್ಲಿ ಹೆದ್ದಾರಿಯವರು ಪೈಪ್‌ಲೈನ್‌ಗೆ ಹಾನಿ ಮಾಡಿರುವುದರಿಂದ ಅವರೇ ದುರಸ್ತಿ ಮಾಡಬೇಕು ಎಂದು ಇಲಾಖೆ ಪಟ್ಟು ಹಿಡಿದಿದ್ದು, ಒಟ್ಟಿನಲ್ಲಿ ಜನರಿಗೆ ನೀರಿಲ್ಲದಂತಾಗಿದೆ. ಈಗಾಗಲೇ ಸ್ಥಳೀಯರು ಸಂಬಂಧಪಟ್ಟ ಜನಪ್ರತಿನಿಧಿಗಳು, ಅಧಿಕಾರಿ ವರ್ಗಕ್ಕೆ ದೂರು ನೀಡಿದ್ದು, ಶೀಘ್ರ ದುರಸ್ತಿಗಾಗಿ ಆಗ್ರಹಿಸಿದ್ದಾರೆ.

ಹೆದ್ದಾರಿ ಕಾಮಗಾರಿ ಹಿನ್ನೆಲೆ ಬಹುಗ್ರಾಮ ಯೋಜನೆಯ ಪೈಪ್ ಒಡೆದು ನೀರಿನ ಪೂರೈಕೆ ಅಸಾಧ್ಯವಾಗಿದ್ದು, ದುರಸ್ತಿ ನಿಟ್ಟಿನಲ್ಲಿ ಈಗಾಗಲೇ ಎನ್‌ಎಚ್‌ಎಐ ಬಳಿ ಮಾತುಕತೆ ನಡೆಸಲಾಗಿದ್ದು, ಇಲಾಖೆ ವತಿಯಿಂದ ನೋಟಿಸ್ ಕೂಡ ಕಳುಹಿಸಲಾಗಿದೆ. ಅವರೇ ದುರಸ್ತಿ ಕಾರ್ಯ ನಿರ್ವಹಿಸಬೇಕಿದ್ದು, ಪೈಪ್‌ಗೆ ಆರ್ಡರ್ ಕೊಟ್ಟಿರುವುದಾಗಿ ಮಾಹಿತಿ ನೀಡಿದ್ದಾರೆ. ಒಂದೆರಡು ದಿನಗಳಲ್ಲಿ ಪೈಪ್ ದುರಸ್ತಿ ಭರವಸೆ ನೀಡಿದ್ದಾರೆ.

ಹೆದ್ದಾರಿ ಕಾಮಗಾರಿ ವೇಳೆ ಕುಡಿಯುವ ನೀರಿನ ಪೈಪ್‌ಲೈನ್ ಒಡೆದಿರುವುದರಿಂದ ಗ್ರಾಮದ ಒಂದು ಭಾಗದಲ್ಲಿ ನೀರಿನ ಸಮಸ್ಯೆ ಎದುರಾಗಿದ್ದು, ಅದು ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಪೈಪ್‌ಲೈನ್ ಆದ ಕಾರಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ನಿರ್ವಹಬೇಕಿದೆ. ಈಗಾಗಲೇ ಅವರು ಹೆದ್ದಾರಿಗೆ ಸಂಬಂಧಿಸಿದ ಅಧಿಕಾರಿಗಳ ಜತೆಗೆ ಮಾತುಕತೆಯನ್ನೂ ಮಾಡಿದ್ದಾರೆ.