ಮನೋಹರ್ ಬಳಂಜ ಬೆಳ್ತಂಗಡಿ
ಮಂಗಳೂರು-ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿಯ ಪುಂಜಾಲಕಟ್ಟೆ-ಚಾರ್ಮಾಡಿ ನಡುವಿನ ಸುಮಾರು 32 ಕಿ.ಮೀ. ರಸ್ತೆ ಅಭಿವೃದ್ಧಿ ಕಾಮಗಾರಿ ಅಂತಿಮ ಹಂತ ತಲುಪಿದ್ದು, ಹಲವು ಪ್ರದೇಶಗಳಲ್ಲಿ ಬಹುತೇಕ ಕಾಮಗಾರಿಗಳು ಪೂರ್ಣಗೊಂಡಿವೆ. ಪೇಟೆ ಹಾಗೂ ಜನನಿಬಿಡ ಪ್ರದೇಶಗಳಲ್ಲಿ ಬಾಕಿ ಉಳಿದಿರುವ ಕಾಮಗಾರಿಗಳಿಗೆ ವೇಗ ನೀಡಲಾಗಿದ್ದು, ಕಟ್ಟಡ ಮತ್ತು ಮರಗಳ ತೆರವು, ಸರ್ವೀಸ್ ರಸ್ತೆ ನಿರ್ಮಾಣ ಸೇರಿದಂತೆ ವಿವಿಧ ಕೆಲಸಗಳು ಭರದಿಂದ ಸಾಗುತ್ತಿವೆ.
ಪ್ರಮುಖ ಸಂಪರ್ಕ ರಸ್ತೆಯಾಗಿರುವ ಪುಂಜಾಲಕಟ್ಟೆ-ಚಾರ್ಮಾಡಿ ಹೆದ್ದಾರಿಯಲ್ಲಿ ಪ್ರತಿದಿನ ಸಾವಿರಾರು ವಾಹನಗಳು ಸಂಚರಿಸುತ್ತವೆ. ದಕ್ಷಿಣ ಕನ್ನಡ ಜಿಲ್ಲೆಯ ಕರಾವಳಿ ಭಾಗವನ್ನು ಘಟ್ಟ ಪ್ರದೇಶದೊಂದಿಗೆ ಸಂಪರ್ಕಿಸುವ ಪ್ರಮುಖ ಮಾರ್ಗವಾಗಿರುವುದರಿಂದ ಈ ರಸ್ತೆಯ ಅಭಿವೃದ್ಧಿಗೆ ಸಾರ್ವಜನಿಕರು ಹಲವು ವರ್ಷಗಳಿಂದ ಒತ್ತಾಯಿಸುತ್ತಿದ್ದರು. 2023ರಲ್ಲಿ 700 ಕೋಟಿ ರೂ.ಗೂ ಅಧಿಕ ಅನುದಾನದ ಯೋಜನೆಯಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ಆರಂಭಗೊಂಡಿತ್ತು. ಆರಂಭಿಕ ಹಂತದಲ್ಲಿ ಡಿ.ಪಿ.ಜೈನ್ ಕಂಪನಿಗೆ ಗುತ್ತಿಗೆ ನೀಡಲಾಗಿತ್ತು. ಕಾಮಗಾರಿಯ ಗುಣಮಟ್ಟ ಹಾಗೂ ನಿರ್ವಹಣಾ ವಿಧಾನದ ಕುರಿತು ಸಾರ್ವಜನಿಕರಿಂದ ಆಕ್ಷೇಪಗಳು ವ್ಯಕ್ತವಾಗಿದ್ದವು. ಬಳಿಕ ಒಳಗುತ್ತಿಗೆ ಆಧಾರದಲ್ಲಿ ಮುಗ್ರೋಡಿ ಕನ್‌ಸ್ಟ್ರಕ್ಷನ್ ಸಂಸ್ಥೆಗೆ ಕಾಮಗಾರಿಯ ಜವಾಬ್ದಾರಿ ವಹಿಸಲಾಗಿದ್ದು, ಕಾಮಗಾರಿಗೆ ವೇಗ ದೊರೆತಿದೆ.
ಹೆದ್ದಾರಿ ಅಭಿವೃದ್ಧಿಯಿಂದ ರಸ್ತೆ ಅಗಲಗೊಂಡು ವಾಹನ ಸಂಚಾರಕ್ಕೆ ಹೆಚ್ಚಿನ ಸ್ಥಳಾವಕಾಶ ಸಿಕ್ಕಿದ್ದರೂ, ಕೆಲವು ಕಡೆಗಳಲ್ಲಿ ಬೇಕಾಬಿಟ್ಟಿ ವಾಹನ ನಿಲುಗಡೆ ಹೊಸ ಸಮಸ್ಯೆಯಾಗಿ ಪರಿಣಮಿಸಿದೆ. ಅಗಲೀಕರಣಗೊಂಡ ರಸ್ತೆಯ ಬದಿಗಳಲ್ಲಿ ಕಾರು, ಆಟೋ, ಸರಕು ವಾಹನ ಸೇರಿದಂತೆ ವಿವಿಧ ವಾಹನಗಳನ್ನು ಅಡ್ಡಾದಿಡ್ಡಿಯಾಗಿ ನಿಲ್ಲಿಸಲಾಗುತ್ತಿದೆ. ಇದರಿಂದ ರಸ್ತೆ ಕಿರಿದಾಗಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದೆ. ವಿಶೇಷವಾಗಿ ಪೇಟೆ ಪ್ರದೇಶಗಳಲ್ಲಿ ಪಾರ್ಕಿಂಗ್ ವ್ಯವಸ್ಥೆಗೆ ಸೂಕ್ತ ಸ್ಥಳ ಗುರುತಿಸದೆ ರಸ್ತೆಯ ಬದಿಯಲ್ಲೇ ವಾಹನಗಳನ್ನು ನಿಲ್ಲಿಸಲಾಗುತ್ತಿದೆ.
ಭವಿಷ್ಯದಲ್ಲಿ ಸಮಸ್ಯೆಯ ಗಂಭೀರತೆ ಅರಿತು ರಾ.ಹೆ. ಪ್ರಾಧಿಕಾರ, ಸ್ಥಳೀಯಾಡಳಿತ ಹಾಗೂ ಪೊಲೀಸ್ ಇಲಾಖೆ ಸಮನ್ವಯದಿಂದ ಪಾಕಿರ್ಂಗ್ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕಿದೆ. ಅಗತ್ಯವಿರುವೆಡೆ ಪಾರ್ಕಿಂಗ್ ಸ್ಥಳ ಗುರುತಿಸಿ, ನೋ-ಪಾರ್ಕಿಂಗ್ ಪ್ರದೇಶಗಳಲ್ಲಿ ವಾಹನ ನಿಲುಗಡೆಗೆ ಕಡಿವಾಣ ಹಾಕಬೇಕು. ರಸ್ತೆ ಅಭಿವೃದ್ಧಿಯ ಜತೆಗೆ ಪಾರ್ಕಿಂಗ್ ವ್ಯವಸ್ಥೆಯನ್ನೂ ಸಮರ್ಪಕವಾಗಿ ರೂಪಿಸಿದಾಗ ಮಾತ್ರ ಪುಂಜಾಲಕಟ್ಟೆ-ಚಾರ್ಮಾಡಿ ಹೆದ್ದಾರಿ ಅಭಿವೃದ್ಧಿಯ ಸಂಪೂರ್ಣ ಪ್ರಯೋಜನ ವಾಹನ ಸವಾರರು ಮತ್ತು ಸಾರ್ವಜನಿಕರಿಗೆ ದೊರೆಯಲಿದೆ.
2024ರ ಮಳೆಗಾಲದಲ್ಲಿ ಕಾಮಗಾರಿ ನಡೆಯುತ್ತಿದ್ದ ಸಂದರ್ಭ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ತೀವ್ರ ತೊಂದರೆ ಉಂಟಾಗಿತ್ತು. ರಸ್ತೆ ಹದಗೆಡುವುದು, ಕೆಸರು, ಗುಂಡಿಗಳು, ಸಂಚಾರ ದಟ್ಟಣೆ ಸೇರಿದಂತೆ ಹಲವು ಸಮಸ್ಯೆಗಳಿಂದ ವಾಹನ ಸವಾರರು ಪರದಾಡುವಂತಾಗಿತ್ತು. ಸಂಸದ ಕ್ಯಾ.ಬ್ರಿಜೇಶ್ ಚೌಟ ಹಾಗೂ ಶಾಸಕ ಹರೀಶ್ ಪೂಂಜ ಕಾಮಗಾರಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ವಾಹನ ಸಂಚಾರಕ್ಕೆ ಭಾರಿ ಸಮಸ್ಯೆಯಾಗದಂತೆ ಕಾಮಗಾರಿ ನಡೆಸಲು ಸಂಬಂಧಪಟ್ಟವರಿಗೆ ಸೂಚಿಸಿದ್ದರು.
ಸುಮಾರು 28.5 ಕಿ.ಮೀ. ವ್ಯಾಪ್ತಿಯ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಇನ್ನುಳಿದ ಪ್ರದೇಶಗಳಲ್ಲಿ ಕಾಮಗಾರಿ ಭರದಿಂದ ನಡೆಯುತ್ತಿದೆ. ಕೆಲವು ಕಡೆಗಳಲ್ಲಿ ರಸ್ತೆ ಅಭಿವೃದ್ಧಿ ಹೊಂದಿದ್ದು ಅಂತಿಮ ಹಂತದ ಸಣ್ಣಪುಟ್ಟ ಕಾಮಗಾರಿಗಳು ನಡೆಯಬೇಕಿದೆ. ಕಾಮಗಾರಿ ಉತ್ತಮ ರೀತಿಯಲ್ಲಿ ಸಾಗುತ್ತಿದ್ದು ಡಿಸೆಂಬರ್ ಒಳಗೆ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ.ಚಂದ್ರಶೇಖರ್ ಕೆ.ಟಿ. ಇಇ, ರಾಷ್ಟ್ರೀಯ ಹೆದ್ದಾರಿ ಇಲಾಖೆ, ದ.ಕ.