ಕುಂದಾಪುರದಲ್ಲಿ ನಿರ್ಮಿಸಲ್ಪಟ್ಟ ಹೈಟೆಕ್ ವಸತಿ ನಿಲಯ. 
ದಕ್ಷಿಣ ಕನ್ನಡ

ವಿದ್ಯಾರ್ಥಿ ನಿಲಯ ಹೈಟೆಕ್

ಲಿಫ್ಟ್ ಹೊಂದಿರುವ ರಾಜ್ಯದ ಮೊದಲ ಹಾಸ್ಟೆಲ್ ಹೆಗ್ಗಳಿಕೆ

ರಾಘವೇಂದ್ರ ಪೈ ಗಂಗೊಳ್ಳಿ ಕುಂದಾಪುರ

ಕುಂದಾಪುರ ಸಂಗಮ್ ಜಂಕ್ಷನ್ ಸಮೀಪ ನಿರ್ಮಾಣಗೊಂಡಿರುವ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯ ಕಟ್ಟಡ ಹೈಟೆಕ್ ಲುಕ್ ಮತ್ತು ಅತ್ಯಾಧುನಿಕ ವ್ಯವಸ್ಥೆಯ ಕಾರಣಕ್ಕೆ ಗಮನ ಸೆಳೆಯುತ್ತಿದೆ. ಲಿಫ್ಟ್ ವ್ಯವಸ್ಥೆ ಹೊಂದಿರುವ ರಾಜ್ಯದ ಮೊದಲ ಹಾಸ್ಟೆಲ್ ಎಂಬ ಹೆಗ್ಗಳಿಕೆಗೆ ಬಾಲಕಿಯರ ವಿದ್ಯಾರ್ಥಿ ನಿಲಯ ಪಾತ್ರವಾಗಿದೆ.

ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದ ಹೊಸ ಕಟ್ಟಡ 2023-24ನೇ ಸಾಲಿನಲ್ಲಿ ಪಿಡಬ್ಲುೃಡಿ ಇಲಾಖೆಯ 6.30 ಕೋಟಿ ರೂ. ಅನುದಾನದಲ್ಲಿ ನಿರ್ಮಿಸಲ್ಪಟ್ಟಿದೆ. ರಾಜ್ಯದಲ್ಲಿ ಪ್ರಥಮ ಬಾರಿಗೆ ಪಿಡಬ್ಲುೃಡಿ ಇಲಾಖೆ ಬಿಡುಗಡೆಗೊಳಿಸಿದ ಅನುದಾನದಲ್ಲಿ ನಿರ್ಮಾಣಗೊಂಡ ಸುಸಜ್ಜಿತ ಕಟ್ಟಡ ಇದಾಗಿದೆ.

ಏನೇನಿದೆ?

ಕಟ್ಟಡ ಜಿ ಪ್ಲಸ್ 2 ಮಾದರಿಯಲ್ಲಿ ನಿರ್ಮಿಸಲ್ಪಟ್ಟಿದೆ. ಭೋಜನಾಲಯ, ಡೈನಿಂಗ್ ಟೇಬಲ್, ಅಡುಗೆ ಕೊಠಡಿ, ಪ್ರತಿ 6ರಿಂದ 8 ವಿದ್ಯಾರ್ಥಿಗಳಿಗೆ ಪ್ರತ್ಯೇಕ ಮಲಗುವ ಕೊಠಡಿಗಳು, ಪ್ರತಿ ಮಹಡಿಗೂ ಸ್ನಾನ ಗೃಹ, ಶೌಚಗೃಹ, ಪ್ರತ್ಯೇಕ ಕಂಪ್ಯೂಟರ್ ಕೊಠಡಿ, ವಾರ್ಡನ್ ರೂಂ, ಜನರೇಟರ್, ಸೋಲಾರ್ ವಾಟರ್ ಹೀಟರ್, ವಾಟರ್ ಫ್ಯೂರಿಫಯರ್, ವಿದ್ಯಾರ್ಥಿಗಳಿಗೆ ಕುಳಿತು ಓದಲು ಪ್ರತಿ ಮಹಡಿಯಲ್ಲೂ ಪ್ರತ್ಯೇಕ ರೀಡಿಂಗ್ ಚೇರ್, ಸಿಬ್ಬಂದಿ ಕೊಠಡಿ, ಪಾಲಕರ ಸಭೆ ಹಾಗೂ ಇತರ ಕಾರ್ಯಕ್ರಮಕ್ಕೆ ಪ್ರತ್ಯೇಕ ಸಭಾಂಗಣ, ಲಿಫ್ಟ್ ವ್ಯವಸ್ಥೆ ಹಾಗೂ ನೆಲ ಅಂತಸ್ತಿನಲ್ಲಿ ಐಷರಾಮಿ ವಿಸಿಟರ್ ರೂಮ್ ಮೊದಲಾದ ಸೌಕರ್ಯಗಳನ್ನು ಹೊಂದಿದೆ.

ಪ್ರಸ್ತುತ ವಸತಿ ನಿಲಯದಲ್ಲಿ ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ ಅಲ್ಲದೆ ಬಾಗಲಕೋಟೆ, ರಾಯಚೂರು ಜಿಲ್ಲೆಯ ಪ.ಜಾತಿ, ಪಂಗಡ ಹಾಗೂ ಇತರ ವರ್ಗ ಸಮುದಾಯದ 153 ವಿದ್ಯಾರ್ಥಿನಿಯರು ಪ್ರವೇಶಾತಿ ಪಡೆದಿದ್ದಾರೆ. ರಾಜ್ಯದ ಅತ್ಯಾಧುನಿಕ ಸೌಕರ್ಯ ಹೊಂದಿರುವ ಹಾಸ್ಟೆಲ್ ಇದಾಗಿದೆ.
ರಮೇಶ ಕುಲಾಲ್ ಸಹಾಯಕ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, ಕುಂದಾಪುರ
ಸುತ್ತಮುತ್ತಲಿನ ಕಾಲೇಜಿನಲ್ಲಿ ವಿವಿಧ ಕೋರ್ಸ್‌ಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗಾಗಿ ರೂಪಿಸಿರುವ ಈ ಕಟ್ಟಡದ ವ್ಯವಸ್ಥೆ ಅದ್ಭುತ. ಒಳ್ಳೆಯ ಪರಿಸರದಲ್ಲಿ ಸುಸಜ್ಜಿತ ಕಟ್ಟಡವನ್ನು ಕರ್ನಾಟಕ ಸರ್ಕಾರ ಹಾಗೂ ಇಲಾಖೆ ನಿರ್ಮಿಸಿರುವುದರಿಂದ ವಿದ್ಯಾರ್ಥಿನಿಯರಿಗೆ ಅನುಕೂಲವಾಗಿದೆ.
ಪ್ರಭಾಕರ ವಿ., ಕುಂದಾಪುರ