ಬಂಟ್ವಾಳ: ಬಿ.ಸಿ.ರೋಡಿನ ಹೃದಯಭಾಗದಲ್ಲಿರುವ ಬಂಟ್ವಾಳ ತಾಲೂಕು ಪಂಚಾಯಿತಿಯ ವಾಣಿಜ್ಯ ಸಂಕೀರ್ಣ ಕಟ್ಟಡದ ಕೊಠಡಿಯ ಹರಾಜು ಪ್ರಕ್ರಿಯೆಗೆ ರಾಜ್ಯ ಉಚ್ಚ ನ್ಯಾಯಾಲಯ ತಡೆ ನೀಡಿದ್ದು, ಬಾಡಿಗೆದಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳದಂತೆ ತಾಲೂಕು ಪಂಚಾಯಿತಿಗೆ ಆದೇಶಿಸಿದೆ.
2026 ಆಗಸ್ಟ್ 30ರಂದು ಬಂಟ್ವಾಳ ತಾಲೂಕು ಪಂಚಾಯಿತಿ ವಾಣಿಜ್ಯ ಸಂಕೀರ್ಣ ಕಟ್ಟಡದ 12 ವಿವಿಧ ವ್ಯಾಪಾರ, ವ್ಯವಹಾರ ಕೋಣೆಗಳ ಹರಾಜು ಪ್ರಕ್ರಿಯೆ ನಡೆಸುವುದಾಗಿ ಪತ್ರಿಕೆಯಲ್ಲಿ ಪ್ರಕಟಣೆ ನೀಡಲಾಗಿತ್ತು. 30ಕ್ಕಿಂತ ಹೆಚ್ಚು ವರ್ಷಗಳಿಂದ 12ರಿಂದ 13 ಬಾಡಿಗೆ ಕೋಣೆಗಳಲ್ಲಿ ಬಾಡಿಗೆಗೆ ಇರುವವರು ಕೋಣೆಯನ್ನು ಲಕ್ಷಾಂತರ ರೂ. ಖರ್ಚು ಮಾಡಿ ತಮ್ಮ ವ್ಯವಹಾರಕ್ಕೆ ಅನುಗುಣವಾಗಿ ಪರಿವರ್ತನೆಗೊಳಿಸಿದ್ದಾರೆ. ಹರಾಜು ಪ್ರಕ್ರಿಯೆಯಿಂದ ಅವರಿಗೆ ತೊಂದರೆಗೊಳಗಾಗುವ ಸಾಧ್ಯತೆಯ ಹಿನ್ನೆಲೆಯಲ್ಲಿ ಪತ್ರಿಕಾ ಪ್ರಕಟಣೆ ಮತ್ತು ಏಲಂ ಪ್ರಕ್ರಿಯೆ ತಡೆ ಹಿಡಿಯುವಂತೆ ಬಾಡಿಗೆದಾರರು ಉಚ್ಚ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು. ಪ್ರಾಥಮಿಕ ತನಿಖೆ ನಡೆಸಿದ ನ್ಯಾಯಾಲಯ ತಡೆಯಾಜ್ಞೆ ನೀಡಿದೆ.
ಬುಧವಾರ ತಾ.ಪಂ. ವಾಣಿಜ್ಯ ಸಂಕೀರ್ಣದ ಬಾಡಿಗೆದಾರರ ನಿಯೋಗ ನ್ಯಾಯಾಲಯದ ಆದೇಶದ ಪ್ರತಿಯನ್ನು ತಾಲೂಕು ಪಂಚಾಯಿತಿ ಆಡಳಿತಾಧಿಕಾರಿಗೆ ಸಲ್ಲಿಸಿ ನ್ಯಾಯಾಲಯದ ಆದೇಶ ಪಾಲಿಸುವಂತೆ ಆಗ್ರಹಿಸಿತು. ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ನಿಗದಿಯಾಗಿದ್ದ ವಾಣಿಜ್ಯ ಸಂಕೀರ್ಣ ಕೊಠಡಿಗಳ ಏಲಂ ಪ್ರಕ್ರಿಯೆಯನ್ನು ಸದ್ಯಕ್ಕೆ ಮುಂದೂಡಲಾಗಿದೆ ಎಂದು ತಾ.ಪಂ. ವ್ಯವಸ್ಥಾಪಕರು ತಿಳಿಸಿದ್ದಾರೆ.