- ಭಾರತೀಯ ಪಾಸ್ಪೋರ್ಟ್ ಬಳಸಿ ವಿದೇಶ ಪ್ರಯಾಣ ಯತ್ನ
ಬೆಂಗಳೂರು: ನಕಲಿ ಆಧಾರ್ ಕಾರ್ಡ್ ಬಳಸಿ ಪಡೆದ ಭಾರತೀಯ ಪಾಸ್ಪೋರ್ಟ್ ಮೂಲಕ ಮಂಗಳೂರು ವಿಮಾನ ನಿಲ್ದಾಣದಿಂದ ವಿದೇಶಕ್ಕೆ ತೆರಳಲು ಪ್ರಯತ್ನಿಸಿ ಬಂಧನಕ್ಕೊಳಗಾಗಿದ್ದ ಬಾಂಗ್ಲಾದೇಶದ ಪ್ರಜೆಯೊಬ್ಬನಿಗೆ ಹೈಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ಬಾಂಗ್ಲಾದೇಶ ಮೂಲಕ ಮಹಮ್ಮದ್ ಮಾಣಿಕ್ ಹುಸೇನ್ ಎಂಬಾತ ನಕಲಿ ಆಧಾರ್ ಕಾರ್ಡ್ ಬಳಸಿ ಭಾರತೀಯ ಪಾಸ್ಪೋರ್ಟ್ ಪಡೆದಿದ್ದ. ದುಬೈಗೆ ಪ್ರಯಾಣಿಸಲು ಯತ್ನಿಸಿದಾಗ ಮಂಗಳೂರು ವಿಮಾನ ನಿಲ್ದಾಣದಲ್ಲಿ ವಲಸೆ ಅಧಿಕಾರಿಗಳು 2024ರ ಅಕ್ಟೋಬರ್ನಲ್ಲಿ ಬಂಧಿಸಿದ್ದರು. ಪ್ರಕರಣದಲ್ಲಿ ಚಾರ್ಜ್ಶೀಟ್ ಸಲ್ಲಿಕೆಯಾಗಿರುವುದರಿಂದ ಜಾಮೀನು ನೀಡುವಂತೆ ಕೋರಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಲಾಗಿತ್ತು.
ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಮೂರ್ತಿ ಶಿವಶಂಕರ್ ಅಮರಣ್ಣನವರ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ಆರೋಪಿಗೆ ಷರತ್ತುಬದ್ಧ ಜಾಮೀನು ನೀಡಿದೆ. 1 ಲಕ್ಷ ರೂ. ಮೌಲ್ಯದ ಬಾಂಡ್, ಅಷ್ಟೇ ಮೊತ್ತಕ್ಕೆ ಇಬ್ಬರಿಂದ ಶ್ಯೂರಿಟಿ, ವಾರಕೊಮ್ಮೆ ಪೊಲೀಸ್ ಠಾಣೆಗೆ ಹಾಜರಾಗಬೇಕು, ವಿಚಾರಣಾ ನ್ಯಾಯಾಲಯಕ್ಕೆ ತಪ್ಪದೆ ಹಾಜರಾಗಬೇಕು ಮತ್ತು ಸಾಕ್ಷ್ಯ ನಾಶಕ್ಕೆ ಯತ್ನಿಸಬಾರದು ಎಂಬ ಷರತ್ತುಗಳನ್ನು ನ್ಯಾಯಾಲಯ ವಿಧಿಸಿದೆ.
ಹುಸೇನ್ ಪರ ವಾದಿಸಿದ್ದ ವಕೀಲರು, ಅರ್ಜಿದಾರರ ಮೇಲೆ ಗರಿಷ್ಠ 8 ವರ್ಷ ಜೈಲು ಶಿಕ್ಷೆ ಮಾತ್ರ ವಿಧಿಸಬಹುದಾದ ಆರೋಪವಿದೆ. ಈ ಪ್ರಕರಣದಲ್ಲಿ ಚಾರ್ಜ್ಶೀಟ್ ಸಲ್ಲಿಕೆಯಾಗಿದೆ. ಆದ್ದರಿಂದ ಬಂಧನದ ಅಗತ್ಯವಿಲ್ಲ. ಅಲ್ಲದೆ, ಆರೋಪಿಗೆ ಕನ್ನಡ ಭಾಷೆಯ ಜ್ಞಾನವಿಲ್ಲ ಮತ್ತು ಬಂಧನಕ್ಕೆ ಸೂಕ್ತ ಕಾರಣಗಳನ್ನು ಆರೋಪಿಗೆ ತಿಳಿಸಿಲ್ಲ ಎಂದು ವಾದಿಸಿದ್ದರು.
ಪ್ರಾಸಿಕ್ಯೂಷನ್ ಪರ ವಾದಿಸಿದ್ದ ವಕೀಲರು, ಆರೋಪಿ ವಿದೇಶಿ ಪ್ರಜೆಯಾಗಿರುವುದರಿಂದ ದೇಶ ಬಿಟ್ಟು ಪರಾರಿಯಾಗುವ ಸಾಧ್ಯತೆಯಿದೆ ಎಂದು ವಾದಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಆರೋಪಿ ಪರ ವಕೀಲರು, ಪಾಸ್ಪೋರ್ಟ್ ವಶಪಡಿಸಿಕೊಂಡಿರುವುದರಿಂದ ವಿದೇಶಕ್ಕೆ ಪರಾರಿಯಾಗುವ ಅಪಾಯವಿಲ್ಲ ಎಂದು ವಾದ ಮಂಡಿಸಿದ್ದರು.