ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ (ದ.ಕ.)
ತಾಲೂಕಿನ ದಿಡುಪೆ ಜಲಪಾತಕ್ಕೆ ಭೇಟಿ ನೀಡಿದ್ದಾಗ ಪಾವತಿಸಿದ ಪ್ರವೇಶ ಶುಲ್ಕಕ್ಕೆ ಡಿಜಿಟಲ್ ಬಿಲ್ ಕೇಳಿದ ಪ್ರವಾಸಿಗರಿಗೆ ದಂಡ ಪಾವತಿ ರಸೀದಿ ನೀಡಿ, ಅವರ ವಿರುದ್ಧ ಮತ್ತು 50,500 ಸಾವಿರ ರೂ. ನಗದು ಹಣ ದೋಚಿದ ಆರೋಪದ ಮೇಲೆ ಎಫ್‌ಐಆರ್ ದಾಖಲಿಸಿರುವುದಕ್ಕೆ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಪ್ರಕರಣದ ವಿವರ ನೀಡಲು ನ.6ರಂದು ವಿಚಾರಣೆಗೆ ಖುದ್ದು ಹಾಜರಾಗುವಂತೆ ಮಂಗಳೂರು ವಲಯ ಅರಣ್ಯಾಧಿಕಾರಿಗೆ ಸೂಚಿಸಲಾಗಿದೆ.
ಎಫ್‌ಐಆರ್ ರದ್ದು ಕೋರಿ ಚಿಕ್ಕಮಂಗಳೂರಿನ ಎಸ್.ಪ್ರತಾಪ್ ಸೇರಿ ಐವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿ.ಶ್ರೀಶಾನಂದ ಅವರ ಪೀಠ ಈ ಆದೇಶ ನೀಡಿದೆ. ಬೆಳ್ತಂಗಡಿ ಠಾಣೆಯ ತನಿಖಾಧಿಕಾರಿಯೂ ಅರ್ಜಿಯ ಮುಂದಿನ ವಿಚಾರಣೆಗೆ ಖುದ್ದು ಹಾಜರಾಗಬೇಕು ಎಂದು ಸೂಚಿಸಿರುವ ಪೀಠ, ಅರ್ಜಿದಾರರ ವಿರುದ್ಧದ ಎಫ್‌ಐಆರ್‌ಗೆ ತಡೆಯಾಜ್ಞೆ ನೀಡಿದೆ.
ದಿನಕ್ಕೆ ನೂರಾರು ಪ್ರವಾಸಿಗರು ಜಲಪಾತ ನೋಡಲು ಬರುತ್ತಾರೆ. ಅವರಿಂದ ಸಂಗ್ರಹಿಸಿದ ಶುಲ್ಕಕ್ಕೆ ಎಲ್ಲಿದೆ ಲೆಕ್ಕ? ದುಡ್ಡು ಸರ್ಕಾರಕ್ಕೆ ಹೋಗುತ್ತಿದೆಯೇ ಎನ್ನುವುದೇ ಅನುಮಾನ. ಡಿಜಿಟಲ್ ಬಿಲ್ ಕೇಳಿರುವುದಕ್ಕೆ ಅರ್ಜಿದಾರರ ಮೇಲೆಯೇ ದೂರು ದಾಖಲಿಸುವುದೇ? ಎಂದು ಪೀಠ ಅಸಮಾಧಾನ ವ್ಯಕ್ತಪಡಿಸಿದೆ.
ಅರ್ಜಿದಾರರು ಹಾಗೂ 15 ಸ್ನೇಹಿತರು ಜು.19ರಂದು ದಿಡುಪೆ ಜಲಪಾತಕ್ಕೆ ಬಂದಿದ್ದರು. ಈ ವೇಳೆ ತಲಾ 200 ರೂ.ನಂತೆ ಒಟ್ಟು ಮೂರು ಸಾವಿರ ರೂ.ಪ್ರವೇಶ ಶುಲ್ಕ ಪಾವತಿಸಿದ್ದರು. ಅರ್ಜಿದಾರರು ಕೇಳಿದರೂ, ಸ್ಥಳದಲ್ಲಿ ಕರ್ತವ್ಯನಿರತ ಸಿಬ್ಬಂದಿ ಭರತೇಶ್ ಡಿಜಿಟಲ್ ಬಿಲ್ ಕೊಟ್ಟಿರಲಿಲ್ಲ. ಆಗ ವಾಗ್ವಾದ ನಡೆದಿತ್ತು. ಪ್ರವಾಸಿಗರು ಭರತೇಶ್ ಮೇಲೆ ಹಲ್ಲೆ ನಡೆಸಿ ಅವರಲ್ಲಿದ್ದ 50,500 ರೂ. ಇದ್ದ ಬ್ಯಾಗ್ ಕಿತ್ತುಕೊಂಡರೆಂದು ಆರೋಪಿಸಿ ಅರಣ್ಯ ವಾಚರ್ ಗೋಪಾಲ್ ಬೆಳ್ತಂಗಡಿ ಠಾಣೆಗೆ ದೂರು ನೀಡಿದ್ದರು. ಎಫ್‌ಐಆರ್ ರದ್ದು ಕೋರಿ ಪ್ರವಾಸಿಗರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ.