ಮಂಗಳೂರು ನಗರದ ಎಯ್ಯಡಿಯಲ್ಲಿ ವಸಂತಿ ಅವರ ಮನೆ ಮೇಲೆ ತೆಂಗಿನ ಮರ ಬಿದ್ದು ಹಾನಿಯಾಗಿದೆ.
- ಸನ್ನದ್ಧವಾಗಿರಲು ಜಿಲ್ಲಾಧಿಕಾರಿಗಳ ಸೂಚನೆ
ಮಂಗಳೂರು: ಮುಂದಿನ 24 ಗಂಟೆಗಳಲ್ಲಿ ಕೆಲವು ಜಲಾನಯನ ಪ್ರದೇಶಗಳು ಮತ್ತು ತಗ್ಗು ಪ್ರದೇಶಗಳಲ್ಲಿ ದಿಢೀರ್ ಪ್ರವಾಹದ ಸಾಧ್ಯತೆ ಇದೆ.
ದಕ್ಷಿಣ ಕನ್ನಡ, ಉಡುಪಿ ಮತ್ತು ಸುತ್ತಮುತ್ತಲಿನ ಉತ್ತರ ಕನ್ನಡ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಲ್ಲಿ ಅಪಾಯದ ಮುನ್ಸೂಚನೆ ನೀಡಲಾಗಿದೆ. ಇಲ್ಲಿನ ತಗ್ಗು ಪ್ರದೇಶಗಳಲ್ಲಿ ಮೇಲ್ಮೈ ಹರಿವು/ಪ್ರವಾಹ ಸಂಭವಿಸಬಹುದು ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.
ಕೆಲವು ದಿನ ಜಿಲ್ಲೆಯಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ಇರುವುದರಿಂದ ಅಧಿಕಾರಿಗಳು ಸನ್ನದ್ಧರಾಗಿರುವಂತೆ ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ. ಸೂಚಿಸಿದ್ದಾರೆ.
ಅವರು ಶನಿವಾರ ಈ ಸಂಬಂಧ ಅಧಿಕಾರಿಗಳೊಂದಿಗೆ ಆನ್‌ಲೈನ್ ಸಭೆ ನಡೆಸಿ, ಮಳೆ ಅನಾಹುತಗಳನ್ನು ನಿರ್ವಹಿಸಲು ಎಲ್ಲಾ ತಾಲೂಕು ಆಡಳಿತಗಳು ದಿನದ 24 ಗಂಟೆಗಳ ಕಾಲವೂ ಸಾರ್ವಜನಿಕರ ಸೇವೆಗೆ ಲಭ್ಯವಾಗಬೇಕು. ಕಂಟ್ರೋಲ್ ರೂಂಗಳು ದಿನಪೂರ್ತಿ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಗುಡ್ಡ ಕುಸಿತ, ಮಣ್ಣು ಜರಿತ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿವೆ. ಈಗಾಗಲೇ ಗುರುತಿಸಿರುವ ಸಂಭಾವ್ಯ ಕುಸಿತ ಸ್ಥಳಗಳಲ್ಲಿ ನಿಗಾ ವಹಿಸಬೇಕು. ಅಗತ್ಯ ಬಿದ್ದರೆ, ಮುನ್ನೆಚ್ಚರಿಕೆಯಾಗಿ ಅಪಾಯದ ಸಾಧ್ಯತೆ ಇರುವ ಮನೆಗಳಲ್ಲಿ ವಾಸಿಸುತ್ತಿರುವವರನ್ನು ಸ್ಥಳಾಂತರಿಸಬೇಕು. ಮಣ್ಣು ಜರಿಯುವ ಸಾಧ್ಯತೆಗಳಿರುವ ಸ್ಥಳಗಳಲ್ಲಿ ಮರಳಿನ ಚೀಲಗಳನ್ನು ಇಟ್ಟು ತಾತ್ಕಾಲಿಕ ಕ್ರಮ ಕೈಗೊಳ್ಳಬೇಕು. ಖಾಸಗಿ ಜಮೀನುಗಳಲ್ಲೂ ತಾತ್ಕಾಲಿಕ ಕ್ರಮಗಳನ್ನು ಕೈಗೊಳ್ಳಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಪ್ರಾಕೃತಿಕ ವಿಕೋಪದಿಂದ ಸಾವುನಪ್ಪಿದವರ ಕುಟುಂಬಗಳಿಗೆ 24 ಗಂಟೆಯೊಳಗೆ ಪರಿಹಾರ ಚೆಕ್ ನೀಡಬೇಕು. ಮಳೆ ಅನಾಹುತದಿಂದ ಸ್ಥಳಾಂತರಗೊಂಡವರಿಗೆ ಅಗತ್ಯ ಸೌಲಭ್ಯಗಳು ದೊರಕಿಸಲು ಗಮನಹರಿಸಬೇಕು. ಅಗ್ನಿಶಾಮಕ, ಎಸ್‌ಡಿಆರ್‌ಎಫ್ ಮತ್ತು ಎನ್‌ಡಿಆರ್‌ಎಫ್ ತಂಡಗಳು ಸದಾ ಸನ್ನದ್ಧವಾಗಿರಬೇಕು ಎಂದು ಅವರು ಸೂಚಿಸಿದರು.
ಚಾರ್ಮಾಡಿ, ಸಂಪಾಜೆ, ಶಿರಾಡಿ ಸೇರಿದಂತೆ ಪ್ರಮುಖ ಹೆದ್ದಾರಿಗಳಲ್ಲಿ ಭೂಕುಸಿತ, ಗುಡ್ಡ ಜರಿತದಂತಹ ಪ್ರಕರಣಗಳು ಸಂಭವಿಸಿದಲ್ಲಿ ಅವುಗಳನ್ನು ತೆರವುಗೊಳಿಸಲು ತುರ್ತು ಕ್ರಮ ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಅಗತ್ಯ ಮೂಲಸೌಕರ್ಯಗಳನ್ನು ಸಿದ್ಧವಾಗಿಟ್ಟುಕೊಳ್ಳಬೇಕು. ಇದುವರೆಗೆ ಜಿಲ್ಲೆಯಲ್ಲಿ ಹೆದ್ದಾರಿ ತಡೆಯಂತಹ ಯಾವುದೇ ಪ್ರಕರಣಗಳು ವರದಿಯಾಗಿಲ್ಲ ಎಂದು ದರ್ಶನ್ ಹೆಚ್.ವಿ. ಹೇಳಿದರು. ಸಭೆಯಲ್ಲಿ ಜಿ.ಪಂ. ಸಿಇಒ ವಿನಾಯಕ್ ಕಾರ್ಭಾರಿ, ಅಪರ ಜಿಲ್ಲಾಧಿಕಾರಿ ರಾಜು ಕೆ. ಮತ್ತಿತರರು ಉಪಸ್ಥಿತರಿದ್ದರು.
ಶನಿವಾರ ಹಲವೆಡೆ ದಿಢೀರ್ ಪ್ರವಾಹ
ಶನಿವಾರ ಸುರಿದ ಭಾರಿ ಮಳೆಗೆ ದ.ಕ. ಜಿಲ್ಲೆಯ ಗ್ರಾಮಾಂತರ ಪ್ರದೇಶದಲ್ಲಿ ದಿಢೀರ್ ಪ್ರವಾಹ ಬಂದಿತ್ತು. ರಸ್ತೆಗಳೆಲ್ಲ ಜಲಾವೃತಗೊಂಡಿತ್ತು. ಬೆಳತಂಗಡಿಯ ಮುಂಡಾಜೆ, ಬಂಟ್ವಾಳ ಸುತ್ತಮುತ್ತ, ಸುಬ್ರಹ್ಮಣ್ಯದಲ್ಲಿ ನೆರೆಯಾಗಿದೆ. ನದಿಗಳ ನೀರಿನ ಮಟ್ಟ ಏರಿಕೆಯಾಗಿದೆ.
ಬೆಳತಂಗಡಿ ಭಾಗದಲ್ಲಿ ನೇತ್ರಾವತಿ ನದಿ ತುಂಬಿ ಹರಿಯುತ್ತಿತ್ತು. ನದಿ ಪಕ್ಕದ ಮನೆಗಳಿಗೆ ಪ್ರವಾಹ ಭೀತಿ ಎದುರಾಗಿದೆ. ಮಳೆಯೊಂದಿಗೆ ಬೀಸಿದ ಗಾಳಿಗೆ ಹಲವು ಮನೆಗಳ ಮೇಲೆ ಮರ ಬಿದ್ದಿದೆ. ಮಂಗಳೂರು ನಗರದ ಎಯ್ಯಡಿಯಲ್ಲಿ ವಸಂತಿ ಅವರ ಮನೆ ಮೇಲೆ ತೆಂಗಿನ ಮರ ಬಿದ್ದು ಹಾನಿಯಾಗಿದೆ. ವಿದ್ಯುತ್, ಇಂಟರ್ನೆಟ್ ಕೈಕೊಟ್ಟಿತ್ತು.
ಅರಣ್ಯದಂಚಿನಲ್ಲಿ ಮನೆಗಳ ಮೇಲೆ ಗುಡ್ಡ ಕುಸಿಯುವ ಭೀತಿ ಇದೆ. ಕೆಲವೆಡೆಗಳಲ್ಲಿ ರಸ್ತೆಗಳಲ್ಲಿ ನೀರು ನಿಂತು ಸಂಪರ್ಕ ಬಂದ್ ಆಗಿತ್ತು. ನಾವೂರಿನಲ್ಲಿ ಪೇಟೆಯ ಅಂಗಡಿಗಳ ಒಳಗಡೆ ನೀರು ನುಗ್ಗಿ ಬಂದಿತ್ತು. ಉಜಿರೆ-ಧರ್ಮಸ್ಥಳ ರಸ್ತೆಯಲ್ಲೇ ಮೂರನಾಲ್ಕು ಅಡಿಗಳಷ್ಟು ಎತ್ತರಕ್ಕೆ ರಸ್ತೆಯಲ್ಲಿ ನೀರು ಹರಿಯುತ್ತಿತ್ತು. ವಾಹನ ಸವಾರರು ಅಪಾಯಕಾರಿಯಾಗಿ ಅದರಲ್ಲೇ ಸಾಗುತ್ತಿದ್ದರು. ಸುಬ್ರಹ್ಮಣ್ಯದಲ್ಲಿ ಸ್ನಾನಘಟ್ಟವೂ ಜಲಾವೃತವಾಗಿತ್ತು. ನದಿಪಾತ್ರದತ್ತ ಭಕ್ತರು ತೆರಳದಂತೆ ಸೂಚಿಸಲಾಗಿದೆ. ಮಳೆ ಇನ್ನೂ ಒಂದು ವಾರ ಇರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.