ವಿಜಯವಾಣಿ ಸುದ್ದಿಜಾಲ ಹಳೆಯಂಗಡಿ
ಹಳೆಯಂಗಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಪ್ಪಲ ಪ್ರದೇಶದ ನಂದಿನಿ ನದಿ ಅಣೆಕಟ್ಟು ಬಳಿಯ ಕೊಂಕಣ ರೈಲ್ವೆ ಸೇತುವೆಯಡಿ ಮನೆಗಳ ತ್ಯಾಜ್ಯದ ರಾಶಿ ತುಂಬಿದ್ದು, ದುರ್ವಾಸನೆಯುಕ್ತ ವಾತಾವರಣ ಸೃಷ್ಟಿಯಾಗಿ ನಡೆದಾಡಲು ಕಷ್ಟಕರ ಪರಿಸ್ಥಿತಿ ಇದೆ.
ಕೊಪ್ಪಲ ಅಣೆಕಟ್ಟು ಬಳಿಯ ಕೊಂಕಣ ರೈಲ್ವೆ ಸೇತುವೆಯಡಿಯಿಂದ ಸ್ಥಳೀಯರಿಗೆ ಇಂದಿರಾ ನಗರ ಸಂಪರ್ಕ ರಸ್ತೆ ಮೂಲಕ ಕಿನ್ನಿಗೋಳಿ, ಕಟೀಲು, ಪಕ್ಷಿಕೆರೆ ಕಡೆಗೆ ಹೋಗಲು ಸಮೀಪದ ರಸ್ತೆಯಾಗಿದೆ. ಕೊಂಕಣ ರೈಲ್ವೆ ಸೇತುವೆ ಅಡಿಯ ಈ ನಿರ್ಜನ ಪ್ರದೇಶದಲ್ಲಿ ವಾಹನಗಳಲ್ಲಿ ಬರುವ ಕಿಡಿಗೇಡಿಗಳು ತ್ಯಾಜ್ಯ ತುಂಬಿದ ಪ್ಲಾಸ್ಟಿಕ್ ಚೀಲಗಳನ್ನು ಎಲ್ಲೆಂದರಲ್ಲಿ ಎಸೆದು ಹೋಗುತ್ತಿದ್ದು, ಸ್ಥಳೀಯರಿಗೆ ಸಮಸ್ಯೆಯಾಗಿದೆ.
ಪರಿಸ್ಥಿತಿ ಅಸಹನೀಯವಾದಾಗ ಸ್ಥಳೀಯರ ದೂರಿನ ಹಿನ್ನೆಲೆಯಲ್ಲಿ ಹಳೆಯಂಗಡಿ ಗ್ರಾ.ಪಂ. ಅಧ್ಯಕ್ಷೆ ಹಾಗೂ ಸದಸ್ಯರು ಕಾರ್ಯಪ್ರವೃತ್ತರಾಗಿ ತ್ಯಾಜ್ಯ ತೆರವುಗೊಳಿಸಿ, ಆಯಕಟ್ಟಿನ ಸ್ಥಳಗಳಲ್ಲಿ ಸಿ.ಸಿ. ಕ್ಯಾಮರಾ ಅಳವಡಿಸಿದ್ದರು. ಆದರೆ ಪರಿಸ್ಥಿತಿ ಸ್ವಲ್ಪವೂ ಬದಲಾಗಿಲ್ಲ. ಸಿ.ಸಿ. ಕ್ಯಾಮರಾ ನಿರ್ವಹಣೆಯಿಲ್ಲದೆ ಹಾಳಾಗಿರುವುದು ಕಿಡಿಗೇಡಿಗಳಿಗೆ ಮತ್ತಷ್ಟು ಅನುಕೂಲವಾಗಿದೆ.
ಈ ಬಾರಿ ಚುನಾವಣೆ ನಡೆಯದೆ ಜನಪ್ರತಿನಿಧಿಗಳು ಅಧಿಕಾರದಲ್ಲಿ ಇಲ್ಲದ ಕಾರಣ ಸಮಸ್ಯೆ ಬಗೆಹರಿಸುವವರು ಇಲ್ಲದೆ ಕಸದ ರಾಶಿ ತುಂಬಿಕೊಂಡಿದೆ. ಬಗ್ಗೆ ಸ್ಥಳೀಯರು ಪಂಚಾಯಿತಿಗೆ ದೂರು ನೀಡಿದರೂ ಕ್ರಮ ಕೈಗೊಂಡಿಲ್ಲ.
ಮನೆ, ಅಂಗಡಿಮುಂಗಟ್ಟುಗಳ ಟ್ಯಾಕ್ಸ್ ಕಟ್ಟುವಾಗ ಕಸದ ಟ್ಯಾಕ್ಸ್ ಎಲ್ಲರೂ ಕಡ್ಡಾಯವಾಗಿ ನೀಡಬೇಕಾಗುತ್ತದೆ. ಆದರೆ ಕಸ ಸಂಗ್ರಹಕಾರರಿಗೆ ಕೊಡದೆ ಬೆಳಗಾಗುತ್ತಲೇ ಕಾರು ಬೈಕುಗಳಲ್ಲಿ ಬಂದು ರಸ್ತೆ ಬದಿಗೆ ಕಸ ಬಿಸಾಡಿಹೋಗುವ ಮನಃಸ್ಥಿತಿ ವಿಪರ್ಯಾಸಕರ.
ಮಳೆಗಾಲದಲ್ಲಿ ನೀರು ತುಂಬಿದ ಸಂದರ್ಭ ಈ ಕಸ, ತ್ಯಾಜ್ಯಗಳು ನೀರಿನೊಂದಿಗೆ ಹರಿದು ನದಿ ಸೇರಿದಲ್ಲಿ ನದಿನೀರು ಕಲುಷಿತವಾಗಿ ಸಮಸ್ಯೆಯಾಗುತ್ತದೆ. ಸಿಹಿನೀರಿನ ಈ ನದಿಗೆ ಅಣೆಕಟ್ಟು ನಿರ್ಮಿಸಿ ಕುಡಿಯುವ ನೀರು ಹಾಗೂ ಕೃಷಿಗೆ ಉಪಯೋಗಿಸುವ ಕಾರಣ ನದಿಯನ್ನು ರಕ್ಷಿಸುವ ಹೊಣೆ ಸಾರ್ವಜನಿಕರದ್ದು ಕೂಡ ಆಗಿದ್ದು, ವಿದ್ಯಾವಂತ ಜನ ಈ ಬಗ್ಗೆ ತಿಳಿದುಕೊಳ್ಳುವುದು ಬಹಳ ಅಗತ್ಯವಾಗಿದೆ.
ಕೊಪ್ಪಲ ಅಣೆಕಟ್ಟು ಬಳಿಯಿಂದ ಕೊಂಕಣ ರೈಲ್ವೆ ಸೇತುವೆಯಡಿ ಮೂಲಕ ಇಂದಿರಾ ನಗರ ಸಂಪರ್ಕ ಕಲ್ಪಿಸುವ ಸುವಾರು 150 ಮೀಟರ್ ರಸ್ತೆ ಕಾಂಕ್ರಿಟೀಕರಣಕ್ಕೆ ಬಾಕಿ ಇದೆ. ಇದು ಕೊಂಕಣ ರೈಲ್ವೆ ಹಳಿಯ ಬದಿಯಲ್ಲಿ ಸಾಗುವ ಕಾರಣ ಇಲಾಖೆ ಅಡ್ಡಿಪಡಿಸಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ರಸ್ತೆಯಲ್ಲಿ ಸಾವಿರಾರು ವಾಹನಗಳು ಓಡಾಡುತ್ತಿದ್ದು, ಮಳೆಗಾಲದಲ್ಲಿ ರಸ್ತೆ ಕೆರೆಯಂತಾಗುತ್ತಿದೆ. ಅನೇಕ ಆಟೋ ಚಾಲಕರು ರಸ್ತೆಯನ್ನು ಕಲ್ಲು-ಮಣ್ಣು ತುಂಬಿಸಿ ತಾತ್ಕಾಲಿಕ ನೆಲೆಯಲ್ಲಿ ದುರಸ್ತಿ ಮಾಡಿದ್ದಾರೆ. ಸೇತುವೆಯಡಿ ರಸ್ತೆಗೆ ಕಾಂಕ್ರೀಟೀಕರಣ ವಾಡಿದರೆ ಸಾರ್ವಜನಿಕ ಸಂಚಾರಕ್ಕೆ ಅನುಕೂಲವಾಗುತ್ತದೆ ಎಂದು ಸ್ಥಳೀಯರು ಹೇಳಿದ್ದಾರೆ.
ಕೊಂಕಣ ರೈಲ್ವೆ ಹಳಿ ಬದಿಯಲ್ಲಿ ಬೆಳೆದಿರುವ ಗಿಡಬಳ್ಳಿಗಳನ್ನು ಕೊಂಕಣ ರೈಲ್ವೆ ಇಲಾಖೆ ಪೂರ್ತಿ ತೆಗೆಯದ ಕಾರಣ ಪೊದೆಗಳಲ್ಲಿರುವ ಹಾವುಗಳಿಂದ ನಡೆದಾಡಲು ಕೂಡ ಸಮಸ್ಯೆ ಇದೆ. ಕೂಡಲೇ ಹಳೆಯಂಗಡಿ ಗ್ರಾಮ ಪಂಚಾಯಿತಿ ಹಾಗೂ ಕೊಂಕಣ ರೈಲ್ವೆ ಇಲಾಖೆಯ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿ ತ್ಯಾಜ್ಯ ರಾಶಿ ತೆರವುಗೊಳಿಸುವುದೆಸಮಸ್ಯೆಗಳನ್ನು ಬಗೆಹರಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಹಳೆಯಂಗಡಿ ಪಂಚಾಯಿತಿಯಲ್ಲಿ ಹಸಿ ಹಾಗೂ ಒಣಕಸ ಸಂಗ್ರಹ ವ್ಯವಸ್ಥೆ ಇದೆ. ಆದರೂ ಇಲ್ಲಿನ ಜನರು ಕಸವನ್ನು ತಂದು ಬಿಸಾಡುವುದು ಅಕ್ಷಮ್ಯ ಅಪರಾಧವಾಗಿದೆ. ಈ ಬಗ್ಗೆ ಜನರೇ ತಿಳಿದುಕೊಳ್ಳಬೇಕು.ಧರ್ಮಾನಂದ ಶೆಟ್ಟಗಾರ್ ಮೆಸ್ಕಾಂ ಸಲಹಾ ಸಮಿತಿ ಸದಸ್ಯ
ಸಾರ್ವಜನಿಕರ ದೂರಿನಂತೆ ಸಿ.ಸಿ.ಕ್ಯಾಮರಾ ಸರಿಪಡಿಸಿದ ಬಳಿಕ ತ್ಯಾಜ್ಯ ವಸ್ತುಗಳನ್ನು ತೆಗೆಯಲಾಗುವುದು. ಬಳಿಕ ಕಸ ತಂದು ಹಾಕುವ ವ್ಯಕ್ತಿಗಳಿಗೆ ದೊಡ್ಡ ಮೊತ್ತದ ದಂಡ ವಿಧಿಸಲಾಗುವುದು.ಸಾಯೀಶ ಚೌಟ ಹಳೆಯಂಗಡಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ