ಸಂತೋಷ್ ಸಿ.ಜೆ 
ದಕ್ಷಿಣ ಕನ್ನಡ

ಮಹಿಳೆಗೆ ಕಿರುಕುಳ ಆರೋಪ ಹೆಡ್‌ಕಾನ್‌ಸ್ಟೇಬಲ್ ಅಮಾನತು

ಮಂಗಳೂರು: ಮಹಿಳೆಯೊಬ್ಬರಿಗೆ ಕಿರುಕುಳ ನೀಡಿದ ಆರೋಪದಲ್ಲಿ ಪ್ರಕರಣ ದಾಖಲಾಗಿರುವ ಹಿನ್ನೆಲೆಯಲ್ಲಿ ಮತ್ತು ಮಾಹಿತಿ ನೀಡದೆ ಅನಧಿಕೃತವಾಗಿ ಕರ್ತವ್ಯಕ್ಕೆ ಗೈರು ಹಾಜರಾಗಿರುವ ಹಿನ್ನೆಲೆಯಲ್ಲಿ ಉಳ್ಳಾಲ ಠಾಣೆಯಲ್ಲಿ ಹೆಡ್ ಕಾನ್ ಸ್ಟೇಬಲ್ ಆಗಿರುವ ಸಂತೋಷ್ ಸಿ.ಜೆ ಎಂಬವರನ್ನು ಪೊಲೀಸ್ ಆಯಕ್ತ ಸುಧೀರ್ ಕುಮಾರ್ ರೆಡ್ಡಿ ಅವರು ಕರ್ತವ್ಯದಿಂದ ಅಮಾನತು ಮಾಡಿದ್ದಾರೆ.
2023ರಲ್ಲಿ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಕಾವೂರು ಠಾಣೆಗೆ ದೂರು ನೀಡಲು ಹೋಗಿದ್ದಾಗ ಮಹಿಳೆಗೆ ಸಂತೋಷ್ ಅವರ ಪರಿಚಯವಾಗಿದೆ. ಮುಂದೆ ಆತನ ನಡವಳಿಕೆ ಬಗ್ಗೆ ಬೇಸರಗೊಂಡು ಕಮಿಷನರ್ ಗೆ ದೂರು ನೀಡಿದ್ದರು. ಆರೋಪಿ ಆ ಬಗ್ಗೆ ಕ್ಷಮೆ ಕೇಳಿದ ಹಿನ್ನೆಲೆಯಲ್ಲಿ ದೂರನ್ನು ಹಿಂಪಡೆದಿದ್ದರು. ಆದರೆ ಆ ಬಳಿಕ ಸುಮ್ಮನಿರದೆ ನಿರಂತರವಾಗಿ ಕಿರುಕುಳ ನೀಡಲು ಆರಂಭಿಸಿದ ಹಿನ್ನೆಲೆಯಲ್ಲಿ ಮತ್ತೆ ಮೇಲಾಧಿಕಾರಿಗಳಿಗೆ ತಿಳಿಸಿ, ಸಂತೋಷ್ ವಿರುದ್ಧ ಡಿ.17ರಂದು ಕಾವೂರು ಠಾಣೆಗೆ ದೂರು ನೀಡಿದ್ದರು. ಇದು ತಿಳಿಯುತ್ತಿದ್ದಂತೆ ಸಂತೋಷ್ ಡಿ.18ರಿಂದ ಮೇಲಾಧಿಕಾರಿಗಳಿಗೆ ಅಥವಾ ಠಾಣೆಗೆ ಯಾವುದೇ ಮಾಹಿತಿ ನೀಡದೆ ಕರ್ತವ್ಯಕ್ಕೆ ಅನಧಿಕೃತವಾಗಿ ಗೈರು ಹಾಜರಾಗಿದ್ದಾರೆ. ಈ ಪ್ರಕರಣದಲ್ಲಿ ವಿಚಾರಣೆಯ ಅವಶ್ಯಕತೆ ಇರುವ ಕಾರಣ, ಇಲಾಖಾ ಶಿಸ್ತು ಕ್ರಮ / ವಿಚಾರಣೆ ಬಾಕಿ ಇರಿಸಿ ಮಂಗಳೂರು ನಗರ ಪೊಲೀಸ್ ಆಯುಕ್ತರು ಸೇವೆಯಿಂದ ಅಮಾನತುಗೊಳಿಸಿದ್ದಾರೆ.