ರೋಟರಿ ಸೆಂಟ್ರಲ್‌ನಿಂದ ಡಾ.ಗುರುದತ್ ಕಾಮತ್, ಜಗನ್ನಾಥ್ ಶೆಟ್ಟಿ,ಪ್ರವೀಣ್ ಕುಟಿನ್ಹೊ, ಸುಭದ್ರಾ ಶೇಟ್ ಅವರಿಗೆ ಗುರುವಂದನಾ ಪ್ರಶಸ್ತಿ ಪ್ರದಾನ ಮಾಡಲಾಯಿತು.  
ದಕ್ಷಿಣ ಕನ್ನಡ

ರೋಟರಿ ಸೆಂಟ್ರಲ್‌ನಿಂದ ಗುರುವಂದನಾ ಪ್ರಶಸ್ತಿ ಪ್ರದಾನ

ಮಂಗಳೂರು : ರೋಟರಿ ಮಂಗಳೂರು ಸೆಂಟ್ರಲ್ ಸಂಸ್ಥೆಯ ಆಶ್ರಯದಲ್ಲಿ ಗುರುವಂದನಾ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ ನಗರದ ಹೊಟೇಲ್ ಸೀ ವ್ಯೆ ಸಭಾಂಗಣದಲ್ಲಿ ಶುಕ್ರವಾರ ಸಂಸ್ಥೆಯ ಅಧ್ಯಕ್ಷ ಬಿ.ಎನ್. ರವೀಂದ್ರ ಅವರ ಅಧ್ಯಕ್ಷತೆಯಲ್ಲಿ ಜರುಗಿತು.

ಕೆಎಂಸಿ ವೈದ್ಯಕೀಯ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಡಾ.ಗುರುದತ್ ಕಾಮತ್, ಕರಂಬಾರು ದ.ಕ. ಜಿಲ್ಲಾ ಸರ್ಕಾರಿ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ಜಗನ್ನಾಥ್ ಶೆಟ್ಟಿ, ನಗರದ ಸಂತ ಅಲೋಶಿಯಸ್ ಶಾಲೆಯ ಶಿಕ್ಷಕ ಪ್ರವೀಣ್ ಕುಟಿನ್ಹೊ, ಕೇರಳ ಸಮಾಜಂ ಶಾಲೆಯ ನಿವೃತ್ತ ಶಿಕ್ಷಕಿ ಸುಭದ್ರಾ ಶೇಟ್ ಅವರು ಶೈಕ್ಷಣಿಕ ಕ್ಷೇತ್ರಕ್ಕೆ ಸಲ್ಲಿಸಿದ ಸುದೀರ್ಘ, ಅನುಪಮ ಸೇವೆ ಪರಿಗಣಿಸಿ ಗುರುವಂದನಾ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಈ ಸಂದರ್ಭದಲ್ಲಿ ಸಂಸ್ಥೆಯ ಸಮಾಜಸೇವಾ ಯೋಜನೆಯ ಅಂಗವಾಗಿ ವಾಮಂಜೂರು ನಿವಾಸಿ, ಸೌಂದರ್ಯ ತಜ್ಞೆ ಸುಪ್ರೀತಾ ಅವರಿಗೆ ಸ್ವಉದ್ಯೋಗವಾಗಿ ಸೌಂದರ್ಯ ಮಳಿಗೆ ಆರಂಭಿಸಲು 15,000 ರೂ. ಆರ್ಥಿಕ ಸಹಾಯವನ್ನು ರೋಟರಿ ಸಂಸ್ಥೆಯ ಮಾಜಿ ಜಿಲ್ಲಾ ಗವರ್ನರ್ ಡಾ.ದೇವದಾಸ್ ರೈ ಅವರು ಹಸ್ತಾಂತರಿಸಿದರು. ಈ ಉದಾರ ಕೊಡುಗೆಯನ್ನು ಸಂಸ್ಥೆಯ ಸದಸ್ಯ ಎಂ.ವಿ. ಮಲ್ಯ ಅವರು ಪ್ರಾಯೋಜಿಸಿದ್ದರು.

ಬಳಿಕ ಡಾ.ದೇವದಾಸ್ ರೈ ಅವರ ಸಂಪಾದಕತ್ವದ ಸಂಸ್ಥೆಯ ಗೃಹವಾರ್ತಾ ಪತ್ರಿಕೆ ಸೆಂಟೋರ್‌ನ್ನು ಸಂಸ್ಥೆಯ ಹಿರಿಯ ಸದಸ್ಯ ಶ್ರೀನಿವಾಸ್ ಶೆಟ್ಟಿ ಬಿಡುಗಡೆಗೊಳಿಸಿದರು. ಸಂಸ್ಥೆಯ ಪ್ರಾಯೋಜಕತ್ವದಲ್ಲಿ ಅ.2, 3, 4ರಂದು ನಗರದ ಕುಲಶೇಖರದಲ್ಲಿರುವ ಕೋರ್ಡೆಲ್ ಚರ್ಚ್ ಪ್ರಾಂಗಣದಲ್ಲಿ ಜರುಗಲಿರುವ ಕೃಷಿ ಹಬ್ಬದ ಬಿತ್ತಿಪತ್ರವನ್ನು ಅನಾವರಣಗೊಳಿಸಲಾಯಿತು.

ಮಾಜಿ ಅಧ್ಯಕ್ಷ ಭಾಸ್ಕರ ರೈ ಉಪಸ್ಥಿತರಿದ್ದರು. ಸಂಸ್ಥೆಯ ಅಧ್ಯಕ್ಷ ಬಿ.ಎನ್. ರವೀಂದ್ರ ಸ್ವಾಗತಿಸಿದರು. ಕಾರ್ಯದರ್ಶಿ ಜಾಕ್ಸನ್ ಸಲ್ದಾನಾ ಸಂಸ್ಥೆಯ ವರದಿ ಮಂಡಿಸಿದರು. ಶೆಲ್ಡನ್ ಕ್ರಾಸ್ತಾ ನಿರೂಪಿಸಿದ ಕಾರ್ಯಕ್ರಮದಲ್ಲಿ ರವಿ ಜಲನ್ ವಂದಿಸಿದರು.