gulf 
ದಕ್ಷಿಣ ಕನ್ನಡ

ಕಾಸರಗೋಡಿಗೆ ಗಲ್ಫ್ ಸಂಘರ್ಷದ ಹೊಡೆತ

ವ್ಯಾಪಾರ ವಲಯದಲ್ಲಿ ಭಾರಿ ಆರ್ಥಿಕ ಹಿಂಜರಿತ

ಮಂಜೇಶ್ವರ: ಗಲ್ಫ್ ರಾಷ್ಟ್ರಗಳಲ್ಲಿ ಉದ್ಯೋಗದಲ್ಲಿರುವ ಅನಿವಾಸಿ ಭಾರತೀಯರು(ಎನ್‌ಆರ್‌ಐ) ಕಳುಹಿಸುವ ಹಣವನ್ನೇ ಪ್ರಮುಖವಾಗಿ ನೆಚ್ಚಿಕೊಂಡಿರುವ ಗಡಿನಾಡು ಕಾಸರಗೋಡಿನ ಆರ್ಥಿಕತೆ ತೀವ್ರ ಸಂಕಷ್ಟಕ್ಕೆ ಸಿಲುಕಿದೆ.

ಗಲ್ಫ್ ರಾಷ್ಟ್ರಗಳಲ್ಲಿ ಹಲವು ತಿಂಗಳುಗಳಿಂದ ನಿರಂತರ ಮುಂದುವರಿದಿರುವ ಸಂಘರ್ಷ ಹಾಗೂ ಉದ್ಯೋಗ ನಷ್ಟದ ಬಿಕ್ಕಟ್ಟು ಕಾಸರಗೋಡು ನಗರದ ಮಾರುಕಟ್ಟೆ ಮೇಲೆ ನೇರ ಪರಿಣಾಮ ಬೀರಿದ್ದು, ವ್ಯಾಪಾರ ವಲಯದಲ್ಲಿ ಹಿಂದೆಂದೂ ಕಾಣದ ಆರ್ಥಿಕ ಹಿಂಜರಿತ ತಲೆದೋರಿದೆ.

ಸಾಲದ ಸುಳಿಯಲ್ಲಿ ವ್ಯಾಪಾರಿಗಳು

ಬ್ಯಾಂಕ್‌ಗಳಿಂದ ಲಕ್ಷಾಂತರ ರೂ. ಸಾಲ ಪಡೆದು ವ್ಯವಹಾರ ನಡೆಸುತ್ತಿರುವ ಸಣ್ಣ ಮತ್ತು ಮಧ್ಯಮ ವ್ಯಾಪಾರಿಗಳು ತೀವ್ರ ನಷ್ಟ ಅನುಭವಿಸುತ್ತಿದ್ದಾರೆ. ತಿಂಗಳುಗಳಿಂದ ವ್ಯಾಪಾರವಿಲ್ಲದೆ ನೌಕರರಿಗೆ ವೇತನ ನೀಡಲು ಹಾಗೂ ಬ್ಯಾಂಕ್ ಸಾಲ ಮರುಪಾವತಿಸಲು ಸಾಧ್ಯವಾಗುತ್ತಿಲ್ಲ. ಸಾಲ ಮರುಪಾವತಿ ವಿಳಂಬದಿಂದಾಗಿ ಬ್ಯಾಂಕ್‌ಗಳು ಜಪ್ತಿ ಕ್ರಮಗಳಿಗೆ ಮುಂದಾಗುತ್ತಿರುವುದು ವ್ಯಾಪಾರಿಗಳನ್ನು ಕಂಗಾಲಾಗಿಸಿದೆ. ಸರ್ಕಾರ ತುರ್ತು ಆರ್ಥಿಕ ಪ್ಯಾಕೇಜ್ ಘೋಷಿಸದಿದ್ದರೆ ನೂರಾರು ಮಳಿಗೆಗಳನ್ನು ಶಾಶ್ವತವಾಗಿ ಮುಚ್ಚಬೇಕಾದ ದುಸ್ಥಿತಿ ಎದುರಾಗಲಿದೆ.

ರಿಯಲ್ ಎಸ್ಟೇಟ್, ಚಿನ್ನ, ಬಟ್ಟೆ ಮಾರುಕಟ್ಟೆ ಕಂಗಾಲು

ಗಲ್ಫ್ ರಾಷ್ಟ್ರಗಳಿಂದ ಹಣದ ಹರಿವು ಗಣನೀಯವಾಗಿ ತಗ್ಗಿರುವ ಪರಿಣಾಮ ರಿಯಲ್ ಎಸ್ಟೇಟ್, ಜವುಳಿ ಹಾಗೂ ಚಿನ್ನಾಭರಣ ವಹಿವಾಟು ಸಂಪೂರ್ಣ ಕುಸಿದುಬಿದ್ದಿದೆ. ಸೌದಿ ಅರೇಬಿಯಾ ಸೇರಿದಂತೆ ಗಲ್ಫ್ ರಾಷ್ಟ್ರಗಳಲ್ಲಿ ಕೆಲಸ ಕಳೆದುಕೊಂಡಿರುವ ಅನೇಕ ಅನಿವಾಸಿ ಕನ್ನಡಿಗರು ಮತ್ತು ಮಲಯಾಳಿಗಳು ತವರಿಗೆ ಮರಳಲು ವಿಮಾನ ಟಿಕೆಟ್‌ಗೂ ಹಣವಿಲ್ಲದೆ ಪರದಾಡುವ ದಯನೀಯ ಸ್ಥಿತಿ ನಿರ್ಮಾಣವಾಗಿದೆ. ಸಂಕಷ್ಟದಲ್ಲಿರುವ ಅನಿವಾಸಿಗಳ ನೆರವಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮುಂದಾಗುತ್ತಿಲ್ಲ ಎಂಬ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಉದ್ಯೋಗ ಕಳೆದುಕೊಂಡವರನ್ನು ರಕ್ಷಿಸಿ ತವರಿಗೆ ಕರೆತರಲು ನೋರ್ಕಾ ಮೂಲಕ ವಿಶೇಷ ಪುನರ್ವಸತಿ ಪ್ಯಾಕೇಜ್ ಮತ್ತು ರಾಜತಾಂತ್ರಿಕ ಮಧ್ಯಪ್ರವೇಶ ಅನಿವಾರ್ಯ ಎಂದು ಪ್ರವಾಸಿ ಸಂಘಟನೆಗಳು ಒತ್ತಾಯಿಸಿವೆ.

ಬಿಕೋ ಎನ್ನುತ್ತಿರುವ ಎಂ.ಜಿ.ರಸ್ತೆ

ಕಾಸರಗೋಡು ನಗರದ ಪ್ರಮುಖ ವಾಣಿಜ್ಯ ಕೇಂದ್ರವಾದ ಎಂ.ಜಿ.ರಸ್ತೆಯು ಹರತಾಳದ ದಿನದಂತೆ ಜನರಿಲ್ಲದೆ ಬಿಕೋ ಎನ್ನುತ್ತಿದೆ. ರಸ್ತೆಯಲ್ಲಿ ಜನಸಂಚಾರವಿಲ್ಲದೆ ವ್ಯಾಪಾರಸ್ಥರು ಗ್ರಾಹಕರಿಗಾಗಿ ಕಾಯುತ್ತಿರುವ ದೃಶ್ಯಗಳು ಜಿಲ್ಲೆಯ ಆರ್ಥಿಕ ಕುಸಿತದ ನೈಜ ಚಿತ್ರಣವನ್ನು ಬಿಂಬಿಸುತ್ತಿವೆ.