ದಿನೇಶ್ ಗುಂಡೂರಾವ್ 
ದಕ್ಷಿಣ ಕನ್ನಡ

ರಾಜ್ಯಪಾಲರು ಕೇಂದ್ರದ ಕಪಿಮುಷ್ಟಿಯಲ್ಲಿ ದಿನೇಶ್ ಗುಂಡೂರಾವ್ ಆರೋಪ

ಮಂಗಳೂರು : ರಾಜ್ಯಪಾಲರು ರಾಜ್ಯ ಸರ್ಕಾರದ ಪ್ರತಿನಿಧಿ. ಅವರ ಭಾಷಣ ಎಂದಾಗ ಅದು ಸರ್ಕಾರದ ಅಭಿಪ್ರಾಯಗಳೇನು, ರಾಜ್ಯದ ಪರವಾಗಿ ಏನು ಮಾಡಬೇಕಿದೆ ಮತ್ತು ರಾಜ್ಯಕ್ಕೆ ಆಗುವ ಸಮಸ್ಯೆ, ಬೆಳವಣಿಗೆಗಳ ಬಗ್ಗೆ ಪ್ರಸ್ತಾವವಾಗಿರುತ್ತದೆ. ಆದರೆ ಬಿಜೆಪಿಯೇತರ ರಾಜ್ಯಗಳಲ್ಲಿ ರಾಜ್ಯಪಾಲರು ಕೇಂದ್ರದ ಕಪಿಮುಷ್ಟಿಯಲ್ಲಿದ್ದಾರೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ.
ನಗರದಲ್ಲಿ ಸೋಮವಾರ ನಡೆದ ಜಿಲ್ಲಾ ಮಟ್ಟದ ಗಣರಾಜ್ಯೋತ್ಸವದ ಸಂದರ್ಭ ಅವರನ್ನು ಭೇಟಿಯಾದ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ರಾಜ್ಯಪಾಲರ ಕೆಲಸ ಕಾರ್ಯಗಳ ಬಗ್ಗೆ ನಮ್ಮ ಆಕ್ಷೇಪವಿಲ್ಲ. ರಾಜ್ಯಪಾಲರ ಭಾಷಣಕ್ಕೆ ಸಂವಿಧಾನದಲ್ಲಿ ಅವಕಾಶ ನೀಡಲಾಗಿದೆ. ಆದರೆ ಅವರ ನಡೆ ಕಂಡಾಗ ಸಂವಿಧಾನದ ಆಶೋತ್ತರಗಳನ್ನು ಧಿಕ್ಕರಿಸಿ ಬಿಜೆಪಿ ನಿರ್ದೇಶನದಂತೆ ಕಾರ್ಯ ನಿರ್ವಹಿಸುತ್ತಿರುವುದು ಕಂಡು ಬರುತ್ತಿದ್ದು, ಇದು ರಾಜ್ಯಗಳ ಒಕ್ಕೂಟ ವ್ಯವಸ್ಥೆಗೆ ಒಳ್ಳೆಯದಲ್ಲ ಎಂದು ಹೇಳಿದ್ದಾರೆ.
ದ್ವೇಷ ಭಾಷಣ ಮಸೂದೆ ಜಾರಿಯಾಗದಿದ್ದರೂ ನೋಟೀಸು ಜಾರಿ ಮಾಡಲಾಗುತ್ತಿದೆ ಎಂಬ ಬಿಜೆಪಿ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ದಿನೇಶ್ ಗುಂಡೂರಾವ್, ಬಿಜೆಪಿಯವರು ದ್ವೇಷ ಭಾಷಣ ಮಾಡುತ್ತಿದ್ದಾರೆಯೇ, ಅವರಿಗೇಕೆ ಆತಂಕ ಎಂದು ಪ್ರಶ್ನಿಸಿದರು.
ಯಾವುದೇ ಪಕ್ಷ, ಸಂಘಟನೆ, ವ್ಯಕ್ತಿ ಎಲ್ಲರಿಗೂ ಈ ಕಾನೂನು ಅನ್ವಯವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಮಾತುಗಳು, ಸುಳ್ಳಿನ ಮಾತು, ಸುಳ್ಳು ಆಧಾರದ ಮೇಲೆ ಸೃಷ್ಟಿ ಮಾಡುವ ಸುದ್ದಿಗಳು, ವಾಸ್ತವಾಂಶಕ್ಕಿಂತ ಮುಂಚಿತವಾಗಿ ಅಭಿಪ್ರಾಯ ನೀಡುವ ಮೂಲಕ ಸಮಾಜದಲ್ಲಿ ಗೊಂದಲ ಸೃಷ್ಟಿಸುವ ಪ್ರಕ್ರಿಯೆಗಳು ನಡೆಯುತ್ತಿವೆ. ಇದು ಸಮಾಜವನ್ನು ಒಡೆಯುವ ಕೆಲಸವಾಗುತ್ತಿದ್ದು, ಅದನ್ನು ನಿಯಂತ್ರಿಸುವುದು ಸರ್ಕಾರದ ಕೆಲಸ. ಬಿಜೆಪಿಯವರಿಗೆ ಯಾಕೆ ಭಯ, ಕೇಂದ್ರದಲ್ಲಿ ಬಿಜೆಪಿಯವರು ಕಾನೂನು ಮೂಲಕ ಯಾವ ರೀತಿ ದಬ್ಬಾಳಿಕೆ ಮಾಡುತ್ತಿದ್ದಾರೆ ಎಂಬುದನ್ನು ನೋಡುತ್ತಿದ್ದೇವೆ. ಕೇಂದ್ರದ ವಿರುದ್ಧ ಮಾತನಾಡಿದರೆ ಉಸಿರುಗಟ್ಟಿಸುವ ವಾತಾವರಣ ಇದೆ. ಪ್ರಧಾನಿ ಮೋದಿ, ಅಮಿತ್ ಶಾ ರೀತಿ ನಾವು ಮಾಡಿಲ್ಲ ಎಂದು ಹೇಳಿದರು.