ಉಜಿರೆ ಗ್ರಾಮ ಪಂಚಾಯಿತಿಯ ಗ್ರಾಮಸಭೆ ನಡೆಯಿತು. ಆಡಳಿತಾಧಿಕಾರಿ ಮಹಾವೀರ ಶೇಬಣ್ಣವರ್, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಜೋಸೆಫ್ ಮೊದಲಾದವರಿದ್ದರು. 
ದಕ್ಷಿಣ ಕನ್ನಡ

ಸರ್ಕಾರಿ ಜಾಗ ಪಂಚಾಯಿತಿಗೆ ಹಸ್ತಾಂತರ

ಉಜಿರೆ ಗ್ರಾಪಂ ಗ್ರಾಮ ಸಭೆಯಲ್ಲಿ ಗ್ರಾಮಸ್ಥರ ಆಗ್ರಹ

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ಉಜಿರೆಯಲ್ಲಿ ಎರ್ನೋಡಿಯಿಂದ ಚಾರ್ಮಾಡಿ ರಸ್ತೆಯಲ್ಲಿರುವ ಪೆಟ್ರೋಲ್ ಬಂಕ್ ತನಕ 13 ಎಕರೆ ಸರ್ಕಾರಿ ಜಾಗವಿದ್ದು ಇದನ್ನು ಕಂದಾಯ ಇಲಾಖೆ ಗುರುತಿಸಿ ಪಂಚಾಯಿತಿಗೆ ಹಸ್ತಾಂತರಿಸಬೇಕು ಎಂದು ಗ್ರಾಮಸ್ಥರು ಉಜಿರೆ ಗ್ರಾಮ ಪಂಚಾಯಿತಿ ಗ್ರಾಮಸಭೆಯಲ್ಲಿ ಆಗ್ರಹಿಸಿದರು.

ಉಜಿರೆ ಗ್ರಾ.ಪಂ. ಗ್ರಾಮಸಭೆ ಆಡಳಿತಾಧಿಕಾರಿ ಮಹಾವೀರ ಶೇಬಣ್ಣವರ್ ಅಧ್ಯಕ್ಷತೆಯಲ್ಲಿ ಗ್ರಾ.ಪಂ. ಸಭಾಭವನದಲ್ಲಿ ನಡೆಯಿತು.

ಕಂದಾಯ ಜಾಗ ಗುರುತಿಸಿ ಪಂಚಾಯಿತಿಗೆ ಹಸ್ತಾಂತರಿಸಿದರೆ ಹಲವಾರು ಸಮಸ್ಯೆಗಳಿಗೆ ಪರಿಹಾರ ದೊರಕಲಿದೆ ಎಂದು ಗ್ರಾಮಸ್ಥರು ಹೇಳಿದರು. ಉಜಿರೆಯಲ್ಲಿ ಫುಟ್‌ಪಾತ್ ಇದ್ದರೂ ವಾಹನಗಳನ್ನು ಅಲ್ಲಿ ನಿಲ್ಲಿಸುವುದರಿಂದ ಜನಸಾಮಾನ್ಯರು ನಡೆದಾಡಲು ಪರದಾಡುವ ಸ್ಥಿತಿ ಇದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥ ಜಗದೀಶ್ ಪ್ರಸಾದ್ ಆಗ್ರಹಿಸಿದರು. ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪೂರ್ಣಗೊಂಡ ಕೂಡಲೇ ಸೂಕ್ತ ವ್ಯವಸ್ಥೆ ಕೈಗೊಳ್ಳುವುದಾಗಿ ಸಭೆಗೆ ತಿಳಿಸಲಾಯಿತು. ಪಂಚಾಯಿತಿ ನಿಗದಿಪಡಿಸಿರುವ ರಸ್ತೆ ವ್ಯಾಪ್ತಿಗೆ ಜಾಗವನ್ನು ಬಿಡದೆ ಹಲವೆಡೆ ಸೈಟ್‌ಗಳನ್ನು ಮಾರಾಟ ಮಾಡಲಾಗುತ್ತಿದೆ. ಕಾನೂನು ಪಾಲಿಸದೆ ಈ ರೀತಿ ಮಾಡುತ್ತಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವ ಕುರಿತಂತೆ ಚರ್ಚೆ ನಡೆಯಿತು.

ಬೆಳ್ತಂಗಡಿ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಜೋಸೆಫ್ ಮಾರ್ಗದರ್ಶಿ ಅಧಿಕಾರಿಯಾಗಿದ್ದರು. ಪಂಚಾಯಿತಿ ಮಾಜಿ ಸದಸ್ಯರು, ಸಂಘ-ಸಂಸ್ಥೆಗಳ ಮುಖಂಡರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಸಂಜೀವಿನಿ ಒಕ್ಕೂಟದ ಸದಸ್ಯರು ಉಪಸ್ಥಿತರಿದ್ದರು.

ಪಿಡಿಒ ರಾಘವೇಂದ್ರ ಪಾಟೀಲ್ ಸ್ವಾಗತಿಸಿದರು. ದ್ವಿತೀಯ ದರ್ಜೆ ಲೆಕ್ಕ ಸಹಾಯಕಿ ಮಮತಾ ಜಮಾ ಖರ್ಚು ವಾಚಿಸಿದರು. ಸಿಬ್ಬಂದಿ ರಮೇಶ್ ನಾಯ್ಕ ಅನುಪಾಲನಾ ವರದಿ ವಾಚಿಸಿದರು.

ಗೈರಾದ ಅಧಿಕಾರಿಗಳಿಗೆ ನೋಟಿಸ್

ಪಂಚಾಯಿತಿ ವ್ಯಾಪ್ತಿಯಲ್ಲಿ ತೆರಿಗೆ ಸಂಗ್ರಹಕ್ಕೆ ಸೂಕ್ತ ಕ್ರಮ ಕೈಗೊಳ್ಳಲು ಆಗ್ರಹ ವ್ಯಕ್ತವಾಯಿತು. ಇಲಾಖಾಧಿಕಾರಿಗಳ ಗೈರು ಹಾಜರಾಗಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಗ್ರಾಮಸ್ಥರು, ನೋಟಿಸ್ ನೀಡುವಂತೆ ಪಟ್ಟು ಹಿಡಿದರು. ಕಂದಾಯ ಇಲಾಖೆ ಕಾರ್ಯವೈಖರಿಗೆ ತೀವ್ರ ಅಸಮಾಧಾನ ವ್ಯಕ್ತವಾಯಿತು.

ನಿವೇಶನ ಹಂಚಿಕೆಗೆ ಅರಣ್ಯ ನೀತಿ ಅಡ್ಡಿ

ಗ್ರಾಮದ ಅರಳು ಎಂಬಲ್ಲಿ 8 ಎಕರೆ ಜಾಗವನ್ನು ನಿವೇಶನರಹಿತರಿಗೆ ಗುರುತಿಸಲಾಗಿದೆ. ಇಲ್ಲಿ 600ಕ್ಕಿಂತ ಅಧಿಕ ಮರಗಳಿದ್ದು ಅವುಗಳ ತೆರವಿಗೆ ಅರಣ್ಯ ಇಲಾಖೆ ಅನುಮತಿ ನೀಡದೆ ನಿವೇಶನ ಹಂಚಿಕೆ ಪ್ರಕ್ರಿಯೆಗೆ ಸಮಸ್ಯೆ ಉಂಟಾಗಿದೆ. 2012ರಲ್ಲಿ ನಿವೇಶನ ಜಾಗ ಗುರುತಿಸಲಾಗಿದ್ದು ಅದರ ಪ್ರಕ್ರಿಯೆ ಮುಂದುವರಿದಿಲ್ಲ ಎಂದು ಗ್ರಾಮಸ್ಥರಿಗೆ ತಿಳಿಸಲಾಯಿತು.