ದ.ಕ. ಜಿಲ್ಲಾ ಗಮಕ ಸಮ್ಮೇಳನವನ್ನು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಉದ್ಘಾಟಿಸಿದರು. ಪ್ರದೀಪ್ ಕುಮಾರ್ ಕಲ್ಕೂರ, ಶ್ರೀಪತಿ ಭಟ್, ಭುವನಾಭಿರಾಮ ಉಡುಪ, ವಿದ್ಯಾಕಿರಣ್ ಮತ್ತಿತರರು ಇದ್ದರು. 
ದಕ್ಷಿಣ ಕನ್ನಡ

ಗಮಕ ಕಲೆ ಉಳಿವಿಗೆ ಸರ್ಕಾರದ ಪ್ರೋತ್ಸಾಹ ಅಗತ್ಯ

ದಕ್ಷಿಣ ಕನ್ನಡ ಜಿಲ್ಲಾ 12ನೇ ಗಮಕ ಸಮ್ಮೇಳನ

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ಶುದ್ಧ ಸಾಹಿತ್ಯ ಮತ್ತು ಸಂಗೀತವನ್ನು ಒಳಗೊಂಡ ಗಮಕ ಕಲೆಯ ಮೂಲಕ ಪುರಾಣದ ಸಂದೇಶವನ್ನು ಯುವಜನರಿಗೆ ತಲುಪಿಸಲು ಸರ್ಕಾರದ ಪ್ರೋತ್ಸಾಹ ಅಗತ್ಯ. ಕರ್ನಾಟಕದ ಶಾಲಾ-ಕಾಲೇಜುಗಳ ಪ್ರತಿಭಾ ಕಾರಂಜಿಯಲ್ಲಿ ಗಮಕ ಕಲೆಯನ್ನು ಸೇರಿಸಿದರೆ ಮುಂದಿನ ಪೀಳಿಗೆಗೆ ಕಲೆಯನ್ನು ಉಳಿಸಲು ಸಾಧ್ಯ ಎಂದು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಹೇಳಿದರು.

ಕರ್ನಾಟಕ ಗಮಕ ಕಲಾ ಪರಿಷತ್ ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಬೆಳ್ತಂಗಡಿ ತಾಲೂಕು ಘಟಕಗಳ ಸಹಯೋಗದಲ್ಲಿ ಉಜಿರೆಯ ಎಸ್‌ಡಿಎಂ ಅನುದಾನಿತ ಸೆಕೆಂಡರಿ ಶಾಲೆಯ ಕೀರ್ತಿಶೇಷ ಮಂಜಯ್ಯ ಹೆಗ್ಗಡೆ ಸಭಾಭವನದ ವಿಜಯರಾಘವ ವೇದಿಕೆಯಲ್ಲಿ ಶನಿವಾರ ದಕ್ಷಿಣ ಕನ್ನಡ ಜಿಲ್ಲಾ 12ನೇ ಗಮಕ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

ಯಕ್ಷಗಾನ, ಗಮಕ, ಹರಿಕಥೆ ಮೊದಲಾದ ಕಲೆಗಳಿಗೆ ಪ್ರೋತ್ಸಾಹ ನೀಡಿದರೆ ಯುವಜನರು ಸನ್ಮಾರ್ಗದಲ್ಲಿ ಮುನ್ನಡೆಯಲು ಸಾಧ್ಯ ಎಂದರು.

ಹಿರಿಯ ಗಮಕಿ ಧರ್ಮಸ್ಥಳದ ಜಯರಾಮ ಕುದ್ರೆತ್ತಾಯ ಮಾತನಾಡಿ, ಪಂಪನ ಕಾವ್ಯದಿಂದ ಮುದ್ದಣ ಕಾವ್ಯದವರೆಗೆ ಗಮಕ ಕಲೆ ಬೆಳೆದು ಬಂದಿದೆ. ಶಾಲಾ-ಕಾಲೇಜುಗಳಲ್ಲಿ ಗಮಕ ಕಲಿಕೆಗೆ ಅವಕಾಶ ಕಲ್ಪಿಸಿ ಯುವಜನರನ್ನು ಆಕರ್ಷಿಸಬೇಕು ಎಂದರು.

ದ.ಕ. ಜಿಲ್ಲಾ ಗಮಕ ಕಲಾ ಪರಿಷತ್ ಅಧ್ಯಕ್ಷ ಪ್ರೊ.ಮಧೂರು ಮೋಹನ ಕಲ್ಲೂರಾಯ ಅಧ್ಯಕ್ಷತೆ ವಹಿಸಿದ್ದರು.

ಕಸಾಪ ಮಾಜಿ ಅಧ್ಯಕ್ಷ ಡಾ.ಹರಿಕೃಷ್ಣ ಪುನರೂರು ‘ಗಮಕ ಜನಾರ್ದನ’ ಸ್ಮರಣ ಸಂಚಿಕೆ ಅನಾವರಣಗೊಳಿಸಿದರು. ಸಂಚಿಕೆ ಸಂಪಾದಕ ಡಾ.ಶ್ರೀಧರ ಭಟ್, ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಮುಳಿಯ ಶಂಕರ ಭಟ್ ಮಾತನಾಡಿದರು.

ಕಸಾಪ ಮಾಜಿ ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಗಮಕ ಕಲಾ ಪರಿಷತ್ ಮೂಡುಬಿದಿರೆ ತಾಲೂಕು ಗೌರವಾಧ್ಯಕ್ಷ ಶ್ರೀಪತಿ ಭಟ್, ಕಿನ್ನಿಗೋಳಿ ಯುಗಪುರುಷದ ಸಂಪಾದಕ ಭುವನಾಭಿರಾಮ ಉಡುಪ, ಉಜಿರೆ ಜನಾರ್ದನ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ಶರತ್‌ಕೃಷ್ಣ ಪಡುವೆಟ್ನಾಯ, ಉಜಿರೆ ಎಸ್‌ಡಿಎಂ ಸೆಕೆಂಡರಿ ಶಾಲೆಯ ಮುಖ್ಯಶಿಕ್ಷಕಿ ವಿದ್ಯಾ ಕಿರಣ್ ಉಪಸ್ಥಿತರಿದ್ದರು.

ಪರಿಷತ್‌ನ ಬೆಳ್ತಂಗಡಿ ತಾಲೂಕು ಅಧ್ಯಕ್ಷ ರಾಮಕೃಷ್ಣ ಭಟ್ ಉಜಿರೆ ಸ್ವಾಗತಿಸಿದರು. ಶಿಕ್ಷಕಿ ತ್ರಿವೇಣಿ ವಂದಿಸಿದರು. ಪ್ರಾಂಶಉಪಾಲ ಸುನೀಲ್ ಪಂಡಿತ್ ನಿರೂಪಿಸಿದರು.

ಮೊದಲ ಗೋಷ್ಠಿಯಲ್ಲಿ ಗಮಕಿ ತೆಕ್ಕೆಕೆರೆ ಸುಬ್ರಹ್ಮಣ್ಯ ಭಟ್ ಅಧ್ಯಕ್ಷತೆಯಲ್ಲಿ ಜಿಲ್ಲೆಯ ಗಮಕಿಗಳು ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು. ನಿವೃತ್ತ ಶಿಕ್ಷಕ ಪದ್ಮರಾಜ ಜೈನ್ ಸಂಗ್ರಹಿಸಿದ ಅಂಚೆಚೀಟಿ, ನಾಣ್ಯ, ಹಳೆಯ ಕರೆನ್ಸಿ ನೋಟು ಹಾಗೂ ಬೆಂಕಿಪೆಟ್ಟಿಗೆಗಳ ವಸ್ತುಪ್ರದರ್ಶನವನ್ನು ಎಡನೀರು ಸ್ವಾಮೀಜಿ ಉದ್ಘಾಟಿಸಿದರು. ಭಾನುವಾರ ಮಧ್ಯಾಹ್ನ ಸಮಾರೋಪ ಸಮಾರಂಭ ನಡೆಯಲಿದೆ.

ಪ್ರಶಸ್ತಿ ಪ್ರದಾನ

ಗಮಕ ಕ್ಷೇತ್ರದ ಕೊಡುಗೆಗಾಗಿ ಕೆ.ಸುರೇಶ್ ಕುದ್ರೆಂತಾಯ, ಪ್ರೊ.ವೇದವ್ಯಾಸ ರಾಮಕುಂಜ, ಹರಿದಾಸ ತೋನ್ಸೆ ಪುಷ್ಕಳ ಚಿ. ಕುಮಾರ್, ಕೆಯ್ಯೂರು ನಾರಾಯಣ ಭಟ್, ಗಮಕಿ ಸುವರ್ಣಾ ಕುಮಾರಿ ಕೆ.ಆರ್. ಹಾಗೂ ಗಮಕಿ ಎ.ಡಿ.ಸುರೇಶ್ ಅವರಿಗೆ ಮಂಗಳೂರಿನ ಕಲ್ಕೂರ ಪ್ರತಿಷ್ಠಾನದ ಪ್ರಾಯೋಜಕತ್ವದಲ್ಲಿ ಪಾವಂಜೆ ಹರಿದಾಸ ಲಕ್ಷ್ಮೀನಾರ್ಣಪ್ಪಯ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು. ಡಾ.ದಿವಾ ಕೊಕ್ಕಡ ಸನ್ಮಾನಿತರು ಹಾಗೂ ಸಮ್ಮೇಳನದ ಸರ್ವಾಧ್ಯಕ್ಷೆ ರಾಜೇಶ್ವರಿ ಅವರನ್ನು ಪರಿಚಯಿಸಿದರು.