ದುರಸ್ತಿಗೊಳ್ಳದೆ ಸಂಚಾರಕ್ಕೆ ಅಯೋಗ್ಯವಾಗಿರುವ ಗೋಳಿಪಡ್ಪು 4ನೇ ವಾರ್ಡ್ ರಸ್ತೆ
ವಿಜಯವಾಣಿ ಸುದ್ದಿಜಾಲ ಬಂಟ್ವಾಳ
ಸಜೀಪನಡು ಗ್ರಾಮದ ಗೋಳಿಪಡ್ಪು 4ನೇ ವಾರ್ಡಿಗೆ ಸಂಪರ್ಕಿಸುವ ರಸೆ ಅಭಿವೃದ್ಧಿ ಹಲವು ವರ್ಷಗಳಿಂದ ಮರೀಚಿಕೆಯಾಗಿದ್ದು, ಈ ಭಾಗದ ಜನರಿಗೆ ಸಂಚಾರದ ಗೋಳು ಮಾಮೂಲಾಗಿದೆ.
ವಿಧಾನಸಭಾಧ್ಯಕ್ಷ, ಉಳ್ಳಾಲ ಕ್ಷೇತ್ರದ ಶಾಸಕ ಯು.ಟಿ.ಖಾದರ್ ಪ್ರತಿನಿಧಿಸುವ ಕ್ಷೇತ್ರವಾಗಿರುವ ಇಲ್ಲಿನ ಸಮಸ್ಯೆ ನಿವಾರಣೆಗೆ ಹಲವು ಬಾರಿ ಮನವಿ ನೀಡಿದ್ದರೂ ಅಧಿಕಾರಿಗಳು, ಜನಪ್ರತಿನಿಧಿಗಳ ಪ್ರತಿಕ್ರಿಯೆ ಮಾತ್ರ ಶೂನ್ಯ. ರಸ್ತೆ ಪಕ್ಕದಲ್ಲೇ ಇರುವ ಆಳವಾದ ತೊರೆಯ ಎರಡು ಬದಿಗಳಲ್ಲೂ ಕಾಂಕ್ರೀಟ್ ತಡೆಗೋಡೆ ಅಗತ್ಯವಿದೆ. ಮಳೆಗಾಲದಲ್ಲಿ ತೊರೆ ತುಂಬಿ ಹರಿಯುವುದರ ಜತೆಗೆ ಸುರಕ್ಷತೆ ಕ್ರಮಗಳೂ ಇಲ್ಲದಿರುವುದರಿಂದ ವಾಹನ ಸವಾರರಿಗೆ, ಪಾದಚಾರಿಗಳಿಗೆ ಅಪಾಯ ಕಟ್ಟಿಟ್ಟಬುತ್ತಿ.
*20 ವರ್ಷ ಹಿಂದೆ ಅವಘಡ: ಗೋಳಿಪಡ್ಪು 4ನೇ ವಾರ್ಡಿನಲ್ಲಿರುವ ಈ ತೊರೆಗೆ 20 ವರ್ಷಗಳ ಹಿಂದೆ ಬಾಲಕಿಯೊಬ್ಬಳು ಬಿದ್ದು ಮೃತಪಟ್ಟಿದ್ದು, ಮತ್ತಷ್ಟು ಅವಘಡಗಳಾಗುವ ಮೊದಲೇ ಸ್ಥಳೀಯಾಡಳಿತ ಎಚ್ಚೆತ್ತುಕೊಳ್ಳಬೇಕಿದೆ. ಚರಂಡಿಗೆ ತಡೆಗೋಡೆ, ಬೀದಿದೀಪ ಅಳವಡಿಸದಿದ್ದರೆ ್ಲ ಮುಂದಿನ ಚುನಾವಣೆ ಬಹಿಷ್ಕರಿಸುವುದಾಗಿ ಸಾರ್ವಜನಿಕರು ಎಚ್ಚರಿಕೆ ನೀಡಿದ್ದಾರೆ.
ಈ ಪರಿಸರದಲ್ಲಿ 60ಕ್ಕಿಂತಲೂ ಅಧಿಕ ಮನೆಗಳಿವೆ. ನಾಗರಿಕರ ಸಹಿತ ಶಾಲಾ ಮಕ್ಕಳು ಈ ರಸ್ತೆಯನ್ನೇ ನಿತ್ಯ ಸಂಚಾರಕ್ಕೆ ಅವಲಂಬಿಸಿದ್ದಾರೆ. 26 ವರ್ಷಗಳಿಂದ ಈ ಭಾಗದ ಶಾಸಕರಿಗೆ ನಾವು ಮನವಿ ಸಲ್ಲಿಸುತ್ತಿದ್ದು, ಶಾಸಕರು ಅಭಿವೃದ್ಧಿಯ ಭರವಸೆಯಷ್ಟೇ ನಿಡುತ್ತಿದ್ದಾರೆ. ಬೇಡಿಕೆ ಈಡೇರದಿದ್ದರೆ ಮುಂದಿನ ಚುನಾವಣೆ ಬಹಿಷ್ಕರಿಸುತ್ತೇವೆ. ಸುಸಜ್ಜಿತ ರಸ್ತೆ, ಚರಂಡಿ ವ್ಯವಸ್ಥೆ, ತಡೆಗೋಡೆ ನಿರ್ವಾಣ ಹಾಗೂ ದಾರಿದೀಪ ವ್ಯವಸ್ಥೆ ಶೀಘ್ರವೆ ಕಲ್ಪಿಸಿಕೊಡಬೇಕು.
ಕೆಲವು ವರ್ಷಗಳ ಹಿಂದೆ ಈ ರಸ್ತೆಯಲ್ಲಿರುವ ತೊರೆಗೆ ಮಳೆಗಾಲದಲ್ಲಿ ಶಾಲಾ ಬಾಲಕಿಯೊಬ್ಬಳು ಬಿದ್ದು ಮೃತಪಟ್ಟಿದ್ದಳು. ನಮ್ಮ ಬೇಡಿಕೆ ಮುಂದಿಟ್ಟಾಗ ಕೇವಲ ಅಳತೆ ವಾಡಿ ಹೋಗಿದ್ದಾರೆ. ಆದರೆ ಯಾವುದೇ ಅಭಿವೃದ್ದಿ ಕೆಲಸ ಇದುವರೆಗೆ ನಡೆದಿಲ್ಲ.