ಐಕಳ ಕಂಬಳ ಹಾಗೂ ಐಕಳೋತ್ಸವದ ಸುವರ್ಣ ಸಂಭ್ರಮದ ಸಂದರ್ಭ ಚಂದ್ರಶೇಖರ ಸ್ವಾಮೀಜಿ ಅವರನ್ನು ಸನ್ಮಾನಿಸಲಾಯಿತು. ಕೃಷ್ಣ ದೀಕ್ಷಿತ್ ಶ್ರೀಪಾದ್, ಡಾ.ಕೆ.ಪಿಕೆ.ಹೆಗ್ಡೆ, ಐಕಳ ಹರೀಶ್ ಶೆಟ್ಟಿ, ದಿವಾಕರ ಚೌಟ, ಕೃಷ್ಣ ದೀಕ್ಷಿತ್, ರಜನಿ ಸಿ.ಭಟ್, ರಾಹುಲ್ ಚಂದ್ರಶೇಖರ್, ರಾಘವ ಸೂರ್ಯ, ಪುನೀತ್ ಕೃಷ್ಣ ಇದ್ದರು.
ಕಂಬಳ ತುಳುನಾಡಿನ ಸಾಂಸ್ಕೃತಿಕ ಕ್ರೀಡೆಯಾಗಿದ್ದು, ಪಶು ಮತ್ತು ಮಾನವನ ನಡುವಿನ ಅವಿನಾಭಾವ ಸಂಬಂಧ ತೋರಿಸುತ್ತದೆ ಎಂದು ಒಡಿಶಾ ಹೈಕೋರ್ಟ್ ನ್ಯಾಯಮೂರ್ತಿ ಜಸ್ಟೀಸ್ ಕೃಷ್ಣ ದೀಕ್ಷಿತ್ ಶ್ರೀಪಾದ್ ಹೇಳಿದರು.
ಕರಾವಳಿಯ ಕಾರ್ಣಿಕ ಪುರುಷರಾದ ಕಾಂತಾಬಾರೆ-ಬೂದಾಬಾರೆ ನಾಮಾಂಕಿತ ಇತಿಹಾಸ ಪ್ರಸಿದ್ಧ ಐಕಳ ಕಂಬಳ ಹಾಗೂ ಐಕಳೋತ್ಸವದ ಸುವರ್ಣ ಸಂಭ್ರಮದ ಕಂಬಳದ ಕರೆಯನ್ನು ಉದ್ಘಾಟಿಸಿ ಮಾತನಾಡಿದರು.
ಬೆಂಗಳೂರಿನ ಆಧ್ಯಾತ್ಮಿಕ ವಿಶ್ವಗುರು ಶ್ರೀ ಚಂದ್ರಶೇಖರ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿದರು. ಐಕಳ ಬಾವ ಕುಟುಂಬ ಕಡೆ ಕ್ಷೇಮಾಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಡಾ.ಕೆ.ಪಿಕೆ.ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಏಳಿಂಜೆ ದೇವಸ್ಥಾನದ ಅರ್ಚಕರಾದ ಗಣೇಶ್ ಭಟ್ ಹಾಗೂ ವರುಣ್ ಭಟ್ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಕಟೀಲು ಕ್ಷೇತ್ರದ ಅರ್ಚಕ ಕಮಲಾದೇವಿ ಪ್ರಸಾದ್ ಆಸ್ರಣ್ಣ, ಕಿರೆಂ ರೆಮೆದಿ ಅಮ್ಮನವರ ದೇವಾಲಯದ ಪ್ರಧಾನ ಧರ್ಮಗುರು ಫಾ.ಒಸ್ವಾಲ್ಡ್ ಮೊಂತೆರೋ ಆಶೀರ್ವಚನ ನೀಡಿದರು.
ಕಂಬಳ ಪರಂಪರೆ ಮಾತ್ರವಲ್ಲ, ತುಳುನಾಡಿನ ಆರಾದನೆ. ಕಂಬಳದ ಹಿಂದಿನ ಮೌಲ್ಯಗಳು, ವೈವಿಧ್ಯತೆ, ಸಂಸ್ಕೃತಿಯ ಶ್ರೀಮಂತಿಕೆ, ಆಳವಾದ ಧಾರ್ಮಿಕ ನಂಬಿಕೆಗಳು ಕಂಬಳವನ್ನು ತುಳುನಾಡಿನ ಹೆಮ್ಮೆ ಮತ್ತು ಗೌರವದ ಶಿಖರಕ್ಕೆ ಏರಿಸಿವೆ. ಜಾತಿ, ಮತ, ಧರ್ಮಗಳ ಎಲ್ಲ ಗಡಿಗಳನ್ನು ಮೀರಿ, ಸೌಹಾರ್ದತೆ ಹರಿವಿನಂತೆ ಬೆಳೆದಿರುವ ಕಂಬಳ ಸಮಾನತೆ ಮತ್ತು ಸಹಬಾಳ್ವೆಯ ಜೀವಂತ ಸಂಕೇತ.