ಮಂಗಳೂರು: ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಚಿನ್ನ ಕಳ್ಳಸಾಗಣೆ ಮಾಡುತ್ತಿದ್ದ ಜಾಲವೊಂದನ್ನು ಕಂದಾಯ ಗುಪ್ತಚರ ನಿರ್ದೇಶನಾಲಯದ (ಡಿಆರ್ಐ) ಮಂಗಳೂರು ಪ್ರಾದೇಶಿಕ ಘಟಕ ಭೇದಿಸಿದೆ. ವಿಮಾನ ನಿಲ್ದಾಣದಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಸಿಬ್ಬಂದಿ ಸೇರಿದಂತೆ ಮೂವರನ್ನು ಬಂಧಿಸಲಾಗಿದ್ದು, ಸುಮಾರು 3.77 ಕೋಟಿ ರೂ. ಮೌಲ್ಯದ 2.95 ಕೆ.ಜಿ. ವಿದೇಶಿ ಮೂಲದ ಚಿನ್ನ ಹಾಗೂ 73 ಲಕ್ಷ ರೂ. ನಗದನ್ನು ವಶಪಡಿಸಿಕೊಳ್ಳಲಾಗಿದೆ.
ದುಬೈ ಮತ್ತು ಕಾಸರಗೋಡು ಮೂಲದ ಕಳ್ಳಸಾಗಣೆದಾರರೊಂದಿಗೆ ಕೈಜೋಡಿಸಿದ್ದ ವಿಮಾನ ನಿಲ್ದಾಣದ ಇಬ್ಬರು ಸಿಬ್ಬಂದಿ, ವಿದೇಶದಿಂದ ಬರುವ ಪ್ರಯಾಣಿಕರು ಶೌಚಗೃಹದಲ್ಲಿ ಬಚ್ಚಿಡುತ್ತಿದ್ದ ಚಿನ್ನವನ್ನು ಹೊರತೆಗೆದು ಸಾಗಿಸುವ ಕೆಲಸ ಮಾಡುತ್ತಿದ್ದರು.
ನ.23ರ ಬೆಳಗ್ಗೆ ವಲಸೆ ತಪಾಸಣಾ ಕೌಂಟರ್ ಬಳಿಯ ಶೌಚಗೃಹದಿಂದ ಚಿನ್ನದ ಪೇಸ್ಟ್ ರೂಪದ ಎರಡು ಆಯತಾಕಾರದ ಬಾರ್ಗಳನ್ನು ಹೊರತೆಗೆಯುತ್ತಿದ್ದ ಮಂಗಳೂರು ಮೂಲದ ಹೊರಗುತ್ತಿಗೆ ಸಿಬ್ಬಂದಿಯನ್ನು ಡಿಆರ್ಐ ಅಧಿಕಾರಿಗಳು ವಶಕ್ಕೆ ಪಡೆದರು. ಈತ ಚಿನ್ನವನ್ನು ಕಾಸರಗೋಡು ಮೂಲದ ಮತ್ತೊಬ್ಬ ಸಿಬ್ಬಂದಿಗೆ ಹಸ್ತಾಂತರಿಸಬೇಕಿತ್ತು. ಆತ ವಿಮಾನ ನಿಲ್ದಾಣದಿಂದ ಸುಮಾರು ಎರಡು ಕಿ.ಮೀ. ದೂರದಲ್ಲಿರುವ ಮತ್ತೊಬ್ಬ ವ್ಯಕ್ತಿಗೆ ಚಿನ್ನ ತಲುಪಿಸಲು ಸಿದ್ಧತೆ ನಡೆಸಿದ್ದ.
ತಕ್ಷಣ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು ಉಳಿದ ಇಬ್ಬರನ್ನೂ ಬಂಧಿಸಿ, ಶೋಧ ನಡೆಸಿದಾಗ 73 ಲಕ್ಷ ರೂ. ನಗದು ಪತ್ತೆಯಾಗಿದೆ. ಇದು ಕಳ್ಳಸಾಗಣೆಯಿಂದ ಬಂದ ಹಣವೆಂದು ಶಂಕಿಸಲಾಗಿದೆ. ಕಳ್ಳಸಾಗಣೆಗೆ ಬಳಸಿದ್ದ ಒಂದು ಕಾರು ಮತ್ತು ದ್ವಿಚಕ್ರ ವಾಹನವನ್ನೂ ಜಪ್ತಿ ಮಾಡಲಾಗಿದೆ. ಮೂವರ ವಿರುದ್ಧ ಕಸ್ಟಮ್ಸ್ ಕಾಯ್ದೆ 1962ರ ಅಡಿ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ. ನ್ಯಾಯಾಲಯವು ಆರೋಪಿಗಳನ್ನು ಡಿ.7ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ ಎಂದು ಡಿಆರ್ಐ ಉಪನಿರ್ದೇಶಕ ಕಂಕನಾಲ ಅನಿಲ್ ಕುಮಾರ್ ತಿಳಿಸಿದ್ದಾರೆ.
ದೇಹದೊಳಗೆ ಚಿನ್ನದ ಕ್ಯಾಪ್ಸೂಲ್!
ನ.14ರಂದು ದುಬೈನಿಂದ ಮಂಗಳೂರಿಗೆ ಬಂದಿದ್ದ ಕಾಸರಗೋಡು ಮೂಲದ ಇಬ್ಬರು ಪ್ರಯಾಣಿಕರನ್ನು ತಪಾಸಣೆ ನಡೆಸಿದಾಗ, ಅವರ ಗುದನಾಳದಲ್ಲಿ ಅಡಗಿಸಿಟ್ಟಿದ್ದ ಐದು ಕ್ಯಾಪ್ಸೂಲ್ಗಳು ಪತ್ತೆಯಾಗಿದ್ದವು. ಅವುಗಳಿಂದ 1,306 ಗ್ರಾಂ ವಿದೇಶಿ ಮೂಲದ ಚಿನ್ನವನ್ನು ಹೊರತೆಗೆಯಲಾಗಿದ್ದು, ಇದರ ಮೌಲ್ಯ ಸುಮಾರು 1.77 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಇಬ್ಬರನ್ನೂ ಬಂಧಿಸಲಾಗಿತ್ತು.
ಚಿಪ್ಸ್ ಪ್ಯಾಕೆಟ್ನಲ್ಲಿ ಮಾದಕ ವಸ್ತು!
ಮತ್ತೊಂದು ಪ್ರಕರಣದಲ್ಲಿ ಮಸ್ಕತ್ನಿಂದ ಮಂಗಳೂರಿಗೆ ಬಂದಿದ್ದ ಕಾಸರಗೋಡು ಮೂಲದ ಭಾರತೀಯ ಪ್ರಯಾಣಿಕನ ಚೆಕ್ಇನ್ ಬ್ಯಾಗ್ ತಪಾಸಣೆ ವೇಳೆ ಚಿಪ್ಸ್ ಪ್ಯಾಕೆಟ್ಗಳಲ್ಲಿ ಅಡಗಿಸಿಟ್ಟಿದ್ದ 14 ಪ್ಯಾಕೆಟ್ಗಳಲ್ಲಿನ 1,333 ಗ್ರಾಂ ಸ್ಫಟಿಕದಂತಹ ವಸ್ತು ಪತ್ತೆಯಾಗಿದೆ. ಪರೀಕ್ಷಿಸಿದಾಗ ಅದು ಆಂಫೆಟಮೈನ್ ಎಂಬ ಸಿಂಥೆಟಿಕ್ ಮಾದಕ ವಸ್ತು ಎಂಬುದು ದೃಢಪಟ್ಟಿದೆ.
ಡಿಆರ್ಐ ನೀಡಿದ ಮಾಹಿತಿ ಆಧರಿಸಿ ಮಂಗಳೂರು ಕಸ್ಟಮ್ಸ್ ಮತ್ತು ಡಿಆರ್ಐ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿದ್ದರು. ತಕ್ಷಣದ ಮುಂದುವರಿದ ಕಾರ್ಯಾಚರಣೆಯಲ್ಲಿ ಮಾದಕ ವಸ್ತು ಹಸ್ತಾಂತರಿಸಿದ್ದ ಕೇರಳದ ಮುನ್ನಾರ್ ಮೂಲದ ವ್ಯಕ್ತಿಯನ್ನೂ ಬಂಧಿಸಲಾಗಿದೆ. ಇಬ್ಬರ ವಿರುದ್ಧ ಎನ್ಡಿಪಿಎಸ್ ಕಾಯ್ದೆ 1985ರ ಅಡಿ ಪ್ರಕರಣ ದಾಖಲಿಸಲಾಗಿದೆ.
ವಿದೇಶದಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದ ಪ್ರಯಾಣಿಕನ ಮೂಲಕ ಸಿಂಥೆಟಿಕ್ ಮಾದಕ ವಸ್ತು ಪತ್ತೆಯಾದ ಮೊದಲ ಪ್ರಕರಣ ಇದಾಗಿದೆ. ಈ ಎಲ್ಲ ಪ್ರಕರಣಗಳ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ ಎಂದು ಡಿಆರ್ಐ ತಿಳಿಸಿದೆ.