crime 
ದಕ್ಷಿಣ ಕನ್ನಡ

ಚಿನ್ನದ ಸರ ಕಸಿದು ಪರಾರಿ

ಬೇಡಡ್ಕ ಪೊಲೀಸ್ ಠಾಣೆ ವ್ಯಾಪ್ತಿ

ಕಾಸರಗೋಡು: ಬೇಡಡ್ಕ ಪೊಲೀಸ್ ಠಾಣೆ ವ್ಯಾಪ್ತಿಯ ಕೊಳತ್ತೂರಿನಲ್ಲಿ ವಿದ್ಯುತ್ ಕಚೇರಿ ನೌಕರನ ಸೋಗಿನಲ್ಲಿ ಬಂದ ಯುವಕನೊಬ್ಬ ಗೃಹಿಣಿಯ ಕುತ್ತಿಗೆಯಿಂದ ಐದು ಪವನ್‌ನ ಚಿನ್ನದ ಸರ ಕಸಿದು ಪರಾರಿಯಾಗಿದ್ದಾನೆ. ಕೊಳತ್ತೂರು ಅರಮನಪ್ಪಡಿ ಬಾವಿಕ್ಕರಯಡ್ಕ ಅರಿಯಿಲ್ ಹೌಸ್‌ನ ಬಿ.ಕೆ.ಕೃಷ್ಣನ್ ನಾಯರ್ ಎಂಬವರ ಪತ್ನಿ ಕೆ.ಶುಭಾ ನೀಡಿದ ದೂರಿನಂತೆ ಬೇಡಡ್ಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಾನು ವಿದ್ಯುತ್ ಕಚೇರಿ ನೌಕರನೆಂದು ಹೇಳಿಕೊಂಡ ಬಂದ ಯುವಕನೊಬ್ಬ ಕೊಳವೆ ಬಾವಿ ಸಮೀಪ ಹೋಗಿ ವೈರ್‌ಗಳನ್ನು ಪರಿಶೀಲಿಸಿದ್ದಾನೆ. ಈ ವೇಳೆ ಅಲ್ಲಿಗೆ ಹೋದ ಶುಭಾ ಅವರ ಕುತ್ತಿಗೆಯಿಂದ ಐದು ಪವನ್‌ನ ಸರ ಕಸಿಯಲು ಯತ್ನಿಸಿದ್ದಾನೆ. ಶುಭಾ ಸರವನ್ನು ಬಲವಾಗಿ ಹಿಡಿದುಕೊಂಡರೂ ಸರ ತುಂಡಾಗಿ ಮುಕ್ಕಾಲು ಪಾಲು ಆರೋಪಿ ಕೈಸೇರಿದ್ದು, ಪರಾರಿಯಾಗಿದ್ದಾನೆ. ಪೊಲೀಸರು ಆರೋಪಿ ಪತ್ತೆಗೆ ತನಿಖೆ ಮುಂದುವರಿಸಿದ್ದಾರೆ.

ಸಿವಿಲ್ ಪೊಲೀಸ್ ಅಧಿಕಾರಿ ಬಂಧನ

ಕಾಸರಗೋಡು: ಚಂದೇರ ಪೊಲೀಸ್ ಠಾಣೆಯಲ್ಲಿ ಇರಿಸಿದ್ದ ಮೊಬೈಲ್ ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿ ಸೀನಿಯರ್ ಸಿವಿಲ್ ಪೊಲೀಸ್ ಆಫೀಸರ್ ಬದಿಯಡ್ಕ ನೀರ್ಚಾಲು ನಿವಾಸಿ ವೈ.ಬೈಜು (41) ಎಂಬುವರನ್ನು ಚಂದೇರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಹೊಸದುರ್ಗ ನ್ಯಾಯಾಲಯ ಅವರಿಗೆ ರಿಮಾಂಡ್ ವಿಧಿಸಿದೆ. ಪ್ರಕರಣದ ತನಿಖೆ ಹಿನ್ನೆಲೆ ಬೈಜು ಅವರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿತಿನ್‌ರಾಜ್ ಸೇವೆಯಿಂದ ಅಮಾನತುಗೊಳಿಸಿದ್ದರು. ಕಾರ್ಮಿಕರೊಬ್ಬರು ತಮಗೆ ಸಿಕ್ಕಿದ್ದ ಮೊಬೈಲನ್ನು ಪೊಲೀಸ್ ಠಾಣೆಗೆ ಒಪ್ಪಿಸಿದ್ದರು. ವಾರದ ನಂತರ ಮೊಬೈಲ್ ನಾಪತ್ತೆಯಾಗಿತ್ತು. ಠಾಣೆಯಲ್ಲಿ ರಾತ್ರಿ ಕರ್ತವ್ಯದಲ್ಲಿದ್ದ ಬೈಜು ಮೊಬೈಲ್ ಕದ್ದು ಬದಿಯಡ್ಕದ ಓರ್ವನಿಗೆ ಮಾರಾಟ ಮಾಡಿದ್ದು, ಆತನನ್ನು ಠಾಣೆಗೆ ಕರೆಸಿ ತನಿಖೆಗೊಳಪಡಿಸಿದಾಗ ಘಟನೆ ಬೆಳಕಿಗೆ ಬಂದಿತ್ತು.

ಎಂಡಿಎಂಎ ವಶ, ಜೋಡಿ ಸೆರೆ

ಕಾಸರಗೋಡು: ನಗರದ ವಸತಿಗೃಹವೊಂದರಲ್ಲಿ ಮಾರಕ ಎಂಡಿಎಂಎ ವಶಪಡಿಸಿಕೊಂಡಿರುವ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿ ಬೇಳ ಸಮೀಪದ ಕಡಂಬಳ ನಿವಾಸಿ ಶೆರೀಫಾ(35) ಹಾಗೂ ಕಾಞಂಗಾಡು ಕರುವಳಂ ನಿವಾಸಿ ಮುಹಮ್ಮದ್ ರಾಫಿ (31)ಎಂಬುವರನ್ನು ಬಂಧಿಸಿದ್ದಾರೆ. ಎಂಡಿಎಂಎ ನಾರ್ಕೋಟಿಕ್ ಸೆಲ್, ಡಾನ್ಸಾಫ್ ತಂಡದ ಸಹಾಯದೊಂದಿಗೆ ನಗರಾಣೆ ಎಸ್‌ಐ ಪಿ.ವಿ.ಮನು ನೇತೃತ್ವದ ಪೊಲೀಸರ ತಂಡ ಖಚಿತ ಮಾಹಿತಿ ಮೇರೆಗೆ ವಸತಿಗೃಹಕ್ಕೆ ದಾಳಿ ನಡೆಸಿತು. ಯುವತಿಯ ಪ್ಯಾಂಟ್ ಜೇಬಿನಲ್ಲಿ ಸಿಪ್ ಲಾಕ್ ಕವರಿನಲ್ಲಿರಿಸಿದ್ದ 0.53 ಗ್ರಾಂ ಎಂಡಿಎಂಎ ಪತ್ತೆಯಾಗಿದ್ದು ಅನಸ್ ಎಂಬಾತನಿಂದ 3000 ರೂ.ಗೆ ಖರೀದಿಸಿರುವುದಾಗಿ ರಾಫಿ ತಿಳಿಸಿದ್ದಾನೆ. ಕೊಠಡಿಯೊಳಗಿದ್ದ ಪಾಸ್‌ಪೋರ್ಟ್, ಐದು ಮೊಬೈಲ್, ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಕೊಲೆ ಯತ್ನ ಪ್ರಕರಣ ಆರೋಪಿ ಠಾಣೆಗೆ ಶರಣು

ಕಾಸರಗೋಡು: ಅನಿವಾಸಿ ಉದ್ಯಮಿಯೊಬ್ಬರ ಕೊಲೆಗೆ ಯತ್ನಿಸಿದ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ, ಯುಟ್ಯೂಬರ್ ಖಾದರ್ ಕರಿಪ್ಪೊಡಿ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದ್ದು, ಆರೋಪಿ ನಗರ ಠಾಣೆ ಪೊಲೀಸರಿಗೆ ಶರಣಾಗಿದ್ದಾನೆ. ಕಾಸರಗೋಡು ಜಿಲ್ಲಾ ಸೆಷನ್ಸ್ ನ್ಯಾಯಾಲಯ ಹಾಗೂ ಕೇರಳ ಹೈಕೋರ್ಟ್‌ನಲ್ಲೂ ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕೃತಗೊಂಡಿದ್ದರಿಂದ ಆರೋಪಿ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿದ್ದ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಪ್ರಕರಣದ ವಿವರ: ಪಳ್ಳಿಕೆರೆ ನಿವಾಸಿ, ಅನಿವಾಸಿ ಉದ್ಯಮಿ ಅಬ್ದುಲ್ ಅಹದ್ ಎಂಬುವರಿಗೆ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಖಾದರ್ ಕರಿಪ್ಪೊಡಿ, ರಾಶಿದ್ ಯಾನೆ ಸಾಕಿ, ಅಶ್ರಫ್ ಎಂಬುವರ ಮೇಲೆ ಕಾಸರಗೋಡು ನಗರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು. ವಿದೇಶದ ಆರ್ಥಿಕ ವ್ಯವಹಾರದ ದ್ವೇಷದಲ್ಲಿ ಕೊಲೆ ಯತ್ನ ನಡೆದಿತ್ತು.

182 ಗ್ರಾಂ ಎಂಡಿಎಂಎ ವಶ, ಮೂವರ ಬಂಧನ

ಕಾಸರಗೋಡು: ಮಂಜೇಶ್ವರ ಠಾಣೆ ಪೊಲೀಸರು ಬಟ್ಟಪದವಿನ ಕಾಟೇಜ್ ಒಂದರಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ 182.12 ಗ್ರಾಂ ಎಂಡಿಎಂಎ ವಶಪಡಿಸಿಕೊಂಡಿದ್ದು ಆರೋಪಿಗಳನ್ನು ಬಂಧಿಸಿದ್ದಾರೆ. ಉಪ್ಪಳದ ಬಟ್ಟಪದವು ಅಲ್ತಾಫ್ ಕಾಟೇಜ್‌ನಲ್ಲಿ ವಾಸಿಸುವ ಉದ್ಯಾವರ ಕುಂಡುಕೊಳಕೆ ನಿವಾಸಿ ಮಹಮ್ಮದ್ ಶಿಹಾಬ್(33), ಮುಹಮ್ಮದ್ ಶಿಯಾಝ್(33), ದಕ್ಷಿಣ ಕನ್ನಡ ಜಿಲ್ಲೆಯ ಗಂಜಿಮಠ ನಿವಾಸಿ ಮಹಮ್ಮದ್ ಸಫ್ವಾನ್(23) ಹಾಗೂ ಕೈಕಂಬ ಗುರುಪುರ ಫಾತಿಮಾ ಅಪಾರ್ಟ್‌ಮೆಂಟ್‌ನ ಮಹಮ್ಮದ್ ರಸಲ್ ಅಲಿ(21) ಬಂಧಿತರು. ಆರೋಪಿಗಳಿಂದ ನಾಲ್ಕು ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ.

ಹೋಟೆಲ್ ನೌಕರನಿಗೆ ಹಲ್ಲೆ

ಕಾಸರಗೋಡು: ಕೂಡ್ಲು ಮೀಪುಗುರಿಯಲ್ಲಿ ಹೋಟೆಲ್ ನೌಕರನಿಗೆ ಹಲ್ಲೆಗೈದಿದ್ದು, ತಡೆಯಲು ಬಂದ ಹೋಟೆಲ್ ಮಾಲಕಿಯನ್ನು ಅಸಭ್ಯವಾಗಿ ನಿಂದಿಸಿ ಕೈಹಿಡಿದು ತಿರುಚಿದ ಪ್ರಕರಣಕ್ಕೆ ಸಂಬಂಧಿಸಿ ಕೂಡ್ಲು ಗ್ರಾಮ ವ್ಯಾಪ್ತಿಯಲ್ಲಿ ವಾಸಿಸುವ ಶಾನು ಎಂಬಾತನ ವಿರುದ್ಧ ನಗರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಕೂಡ್ಲು ಮೀಪುಗುರಿಯ ಹೋಟೆಲೊಂದರಲ್ಲಿ ಕೆಲಸ ನಿರ್ವಹಿಸುವ ಕರಂದಕ್ಕಾಡ್ ನಿವಾಸಿ ಮಂಜುನಾಥ ಎಂಬುವರು ನೀಡಿದ ದೂರಿನನ್ವಯ ಕೇಸು ದಾಖಲಿಸಿಕೊಂಡಿದ್ದಾರೆ.