ಅನ್ಸಾರ್ ಇನೋಳಿ ಉಳ್ಳಾಲ
ನಾಟೆಕಲ್ ಸಮೀಪ ರಸ್ತೆ ಬದಿಯಲ್ಲಿ ಮತ್ತೆ ತ್ಯಾಜ್ಯದ ರಾಶಿ ಜಮಾವಣೆಗೊಂಡಿದ್ದು, ಸ್ಥಳೀಯ ಪರಿಸರದ ನೈರ್ಮಲ್ಯಕ್ಕೆ ಕಪ್ಪುಚುಕ್ಕೆಯಾಗಿದೆ. ಆಸ್ಪತ್ರೆ ಹಾಗೂ ಶಿಕ್ಷಣ ಸಂಸ್ಥೆಗಳ ಆಸುಪಾಸಿನಲ್ಲಿದ್ದ ಕಸದ ಸಮಸ್ಯೆಗೆ ಇತ್ತೀಚೆಗಷ್ಟೇ ಪರಿಹಾರ ಸಿಕ್ಕಿತ್ತು. ಆದರೆ, ಆ ನೆಮ್ಮದಿ ಮಾಸುವ ಮುನ್ನವೇ ಅದೇ ಭಾಗದಲ್ಲಿ ಮತ್ತೊಂದು ಕಸದ ಗುಡ್ಡ ನಿರ್ಮಾಣವಾಗಿದ್ದು, ಸ್ಥಳೀಯಾಡಳಿತದ ನಿರ್ಲಕ್ಷ್ಯದ ವಿರುದ್ಧ ಸಾರ್ವಜನಿಕರಲ್ಲಿ ತೀವ್ರ ಅಸಮಾಧಾನ ಮೂಡಿಸಿದೆ.
ನಾಟೆಕಲ್ ಸಮೀಪ ರಸ್ತೆ ಬದಿಯಲ್ಲೇ ಪ್ಲಾಸ್ಟಿಕ್ ಚೀಲಗಳು ಹಾಗೂ ಇತರ ತ್ಯಾಜ್ಯಗಳನ್ನು ಎಸೆಯಲಾಗುತ್ತಿದೆ. ಹಲವು ದಿನಗಳಿಂದ ತೆರವುಗೊಳಿಸದ ಪರಿಣಾಮ ತ್ಯಾಜ್ಯ ಕೊಳೆತು ನಾರುತ್ತಿದ್ದು, ಸಾಂಕ್ರಾಮಿಕ ರೋಗಗಳ ಭೀತಿ ಆವರಿಸಿದೆ. ಈ ಮಾರ್ಗವಾಗಿ ಪ್ರತಿದಿನ ಸಾವಿರಾರು ಸಾರ್ವಜನಿಕರು, ವಿದ್ಯಾರ್ಥಿಗಳು ಮತ್ತು ವಾಹನ ಸವಾರರು ಸಂಚರಿಸುತ್ತಾರೆ. ತ್ಯಾಜ್ಯದ ರಾಶಿಯಲ್ಲಿ ಆಹಾರ ಅರಸಿ ಬೀದಿ ನಾಯಿಗಳು ಮುಗಿಬೀಳುತ್ತಿರುವುದರಿಂದ ವಾಹನ ಸವಾರರು ಅಪಘಾತದ ಆತಂಕದಲ್ಲೇ ಸಾಗುವಂತಾಗಿದೆ.
ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯ ಎಸೆಯುವುದು ಮತ್ತು ಬೆಂಕಿ ಹಚ್ಚುವುದು ಶಿಕ್ಷಾರ್ಹ ಅಪರಾಧವಾಗಿದ್ದು, ದಂಡ ವಿಧಿಸುವುದರ ಜೊತೆಗೆ ಎಫ್‌ಐಆರ್ ದಾಖಲಿಸಲೂ ಅವಕಾಶವಿದೆ. ಆದರೆ ಸ್ಥಳೀಯಾಡಳಿತಗಳು ರಾಜಕೀಯ ಒತ್ತಡಕ್ಕೆ ಮಣಿಯುವುದು ಇಲ್ಲವೇ ಕಣ್ಮುಚ್ಚಿ ಕುಳಿತುಕೊಳ್ಳುವುದು ಸಾಮಾನ್ಯವಾಗಿದೆ. ಪ್ರಸ್ತುತ ಜನಪ್ರತಿನಿಧಿಗಳ ಆಡಳಿತವಿಲ್ಲದಿದ್ದರೂ, ಅಧಿಕಾರಿಗಳು ತಮ್ಮ ಅಧಿಕಾರ ಬಳಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಈ ನಡುವೆ ಹರೇಕಳ ಗ್ರಾಪಂ ಅಧಿಕಾರಿಗಳು ರಸ್ತೆ ಬದಿ ತ್ಯಾಜ್ಯ ಎಸೆಯುವ ಹೋಟೆಲ್ ಹಾಗೂ ಅಂಗಡಿಗಳಿಗೆ ದಂಡ ವಿಧಿಸಿ ಎಚ್ಚರಿಕೆ ನೀಡುವ ಮೂಲಕ ಮಾದರಿಯಾಗಿದ್ದಾರೆ. ಇದೇ ಕಠಿಣ ಕ್ರಮವನ್ನು ಇತರ ಸ್ಥಳೀಯಾಡಳಿತಗಳೂ ಏಕೆ ಕೈಗೊಳ್ಳುತ್ತಿಲ್ಲ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಎದ್ದಿದೆ.
ಬೆಳ್ಮ ಗ್ರಾಮ ಪಂಚಾಯಿತಿಯ ತ್ಯಾಜ್ಯವನ್ನು ನಾಟೆಕಲ್ ಸಮೀಪದ ಖಾಸಗಿ ಆಸ್ಪತ್ರೆ ಹಾಗೂ ವೈದ್ಯಕೀಯ ಕಾಲೇಜು ಬಳಿ ತಂದು, ಮತ್ತೊಂದು ವಾಹನಕ್ಕೆ ವರ್ಗಾಯಿಸಿ ಪಚ್ಚನಾಡಿಗೆ ಕೊಂಡೊಯ್ಯಲಾಗುತ್ತಿತ್ತು. ಉಳಿದ ತ್ಯಾಜ್ಯದಿಂದ ಕಲುಷಿತ ನೀರು ಹರಿದು ದುರ್ನಾತ ಬೀರುತ್ತಿತ್ತು. ಈ ಬಗ್ಗೆ ವಿಜಯವಾಣಿ ಜೂನ್ 26ರ ಸಂಚಿಕೆಯಲ್ಲಿ ವರದಿ ಪ್ರಕಟಿಸಿದ ಬೆನ್ನಲ್ಲೇ ಎಚ್ಚೆತ್ತ ಆಡಳಿತ ತ್ಯಾಜ್ಯ ವರ್ಗಾವಣೆಯನ್ನು ಸ್ಥಗಿತಗೊಳಿಸಿತ್ತು. ಆದರೆ, ಇದೀಗ ಅದೇ ಪರಿಸರದ ಇನ್ನೊಂದು ಬದಿಯಲ್ಲಿ ರಾತೋರಾತ್ರಿ ಕಸ ಸುರಿಯುವ ಪ್ರವೃತ್ತಿ ಆರಂಭವಾಗಿದ್ದು, ಸಾರ್ವಜನಿಕರಿಗೆ ಮತ್ತೊಂದು ತಲೆನೋವಾಗಿ ಪರಿಣಮಿಸಿದೆ.
ಬೆಳ್ಮ ಗ್ರಾಪಂನಿಂದ ತ್ಯಾಜ್ಯ ವರ್ಗಾವಣೆ ಕುರಿತು ದೂರು ಬಂದ ಹಿನ್ನೆಲೆಯಲ್ಲಿ ಅದನ್ನು ತಡೆಯಲಾಗಿತ್ತು. ಈಗ ಅದರ ಪಕ್ಕದಲ್ಲೇ ರಾತ್ರಿ ವೇಳೆ ಕಸ ಎಸೆಯುತ್ತಿರುವುದು ಗಮನಕ್ಕೆ ಬಂದಿದೆ. ತಕ್ಷಣವೇ ತೆರವು ಕಾರ್ಯಾಚರಣೆ ನಡೆಸಲಾಗುವುದು. ಜತೆಗೆ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು.ಮಾಲಿನಿ, ಕೋಟೆಕಾರ್ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ
ಪ್ರತಿ ಮನೆ, ಹೋಟೆಲ್ ಹಾಗೂ ಅಂಗಡಿಗಳ ಬಾಗಿಲಿಗೇ ಕಸ ಸಂಗ್ರಹ ವಾಹನ ತೆರಳುತ್ತಿದೆ. ಆದಾಗ್ಯೂ ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯುವುದನ್ನು ಸಹಿಸಲು ಸಾಧ್ಯವಿಲ್ಲ. ಅಂತಹವರ ವಿರುದ್ಧ ಪ್ರಾಥಮಿಕವಾಗಿ ದಂಡ ವಿಧಿಸಲಾಗುತ್ತಿದ್ದು, ತಪ್ಪು ಮರುಕಳಿಸಿದರೆ ಕಠಿಣ ಕಾನೂನು ಕ್ರಮ ಅನಿವಾರ್ಯ.ಮುತ್ತಪ್ಪ ಡಿ., ಪಿಡಿಒ, ಹರೇಕಳ