ಪಿಲಾತಬೆಟ್ಟು ಗ್ರಾಪಂ ಎದುರು ನಡೆದ ಪ್ರತಿಭಟನೆಯಲ್ಲಿ ಜಿಪಂ ಮಾಜಿ ಉಪಾಧ್ಯಕ್ಷ ಎಂ.ತುಂಗಪ್ಪ ಬಂಗೇರ ಮಾತನಾಡಿದರು. ಹರೀಶ್ ಶೆಟ್ಟಿ ನೈನಾಡು, ಚಂದ್ರಶೇಖರ ಶೆಟ್ಟಿ, ತಾರಾನಾಥ ಪೂಜಾರಿ ಕಜೆಕಾರು ಮತ್ತಿತರರು ಇದ್ದರು. 
ದಕ್ಷಿಣ ಕನ್ನಡ

ಗ್ಯಾರಂಟಿ ನೆಪದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಸ್ಥಗಿತ

ಕಾಂಗ್ರೆಸ್ ಆಡಳಿತ ವೈಫಲ್ಯ ಖಂಡಿಸಿ ಪ್ರತಿಭಟನೆ

ಬಂಟ್ವಾಳ: ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ನೆಪದಲ್ಲಿ ಅಭಿವೃದ್ಧಿ ಕಾಮಗಾರಿಗಳು ಅನುದಾನವಿಲ್ಲದೆ ಸ್ಥಗಿತಗೊಂಡಿದ್ದು, ಅರ್ಹ ಫಲಾನುಭವಿಗಳಿಗೂ ಯೋಜನೆಗಳ ಪ್ರಯೋಜನ ಸಿಗುತ್ತಿಲ್ಲ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಎಂ.ತುಂಗಪ್ಪ ಬಂಗೇರ ಆರೋಪಿಸಿದರು.

ರಾಜ್ಯ ಸರ್ಕಾರದ ಆಡಳಿತ ವೈಫಲ್ಯ ಖಂಡಿಸಿ ಪಿಲಾತಬೆಟ್ಟು ವಲಯ ನಾಗರಿಕ ಹಿತರಕ್ಷಣಾ ಸಮಿತಿ ವತಿಯಿಂದ ಪಿಲಾತಬೆಟ್ಟು ಗ್ರಾಮ ಪಂಚಾಯಿತಿ ಎದುರು ಮಂಗಳವಾರ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು. ಕೊರಗ ಸಮುದಾಯಕ್ಕೆ ಪೌಷ್ಟಿಕ ಆಹಾರ ವಿತರಣೆ ಸ್ಥಗಿತಗೊಂಡು ಎಂಟು ತಿಂಗಳಾಗಿದ್ದು, ಕೇಂದ್ರದ ಫಸಲ್ ಬಿಮಾ ಯೋಜನೆಯ ಪರಿಹಾರ ವಿತರಣೆಯಲ್ಲೂ ತಾರತಮ್ಯವಾಗುತ್ತಿದೆ ಎಂದು ಆರೋಪಿಸಿದರು.

ಸಮಿತಿ ಅಧ್ಯಕ್ಷ ಶಂಕರ್ ಶೆಟ್ಟಿ ಬೆದ್ರವಾರು ಮಾತನಾಡಿ, ಮಹಿಳೆಯರ ಉಚಿತ ಪ್ರಯಾಣ ಹೊರತುಪಡಿಸಿ ಉಳಿದ ಗ್ಯಾರಂಟಿ ಯೋಜನೆಗಳು ಸ್ಥಗಿತಗೊಂಡಿವೆ. ಮಂಗಳೂರಿನಲ್ಲಿ ನಡೆದ ಸಚಿವ ಸಂಪುಟ ಸಭೆಯ ನಿರ್ಧಾರಗಳೂ ಶೂನ್ಯ ಸಾಧನೆಯಾಗಿವೆ ಎಂದು ಟೀಕಿಸಿದರು.

ಉದ್ಯಮಿ ಟಿ.ಹರೀಂದ್ರ ಪೈ ನೈನಾಡು, ಪ್ರಮುಖರಾದ ಹರೀಶ್ ಶೆಟ್ಟಿ ನೈನಾಡು, ಚಂದ್ರಶೇಖರ ಶೆಟ್ಟಿ, ತಾರಾನಾಥ ಪೂಜಾರಿ ಕಜೆಕಾರು, ಶೇಖರ ಪೂಜಾರಿ ಅಗಲ್ತೊಡಿ, ಕಾಂತಪ್ಪ ಪೂಜಾರಿ, ಚಂದಪ್ಪ ಕಜೆಕಾರು, ರವಿಶಂಕರ ಹೊಳ್ಳ, ಶಶಿಧರ ನಾಯ್ಕ, ಸತೀಶ್ ಕೊರಗ, ನಾರಾಯಣ ಪೂಜಾರಿ, ಜಯಶ್ರೀ, ಸುಶೀಲಾ, ಮಮತಾ ಮತ್ತಿತರರು ಇದ್ದರು.