ಕಾಸರಗೋಡು: ದುಬೈನಲ್ಲಿ ವ್ಯಾಪಾರದ ಹೆಸರಲ್ಲಿ ಕಾಸರಗೋಡು ನಿವಾಸಿ ಹಾಗೂ ಅವರ ಸಂಬಂಧಿಕರ ಸಂಸ್ಥೆಯ ನಕಲಿ ಮೊಹರು ಉಪಯೋಗಿಸಿ 38 ಕೋಟಿ ರೂ. ವಂಚಿಸಿರುವ ಬಗ್ಗೆ ಕಾಸರಗೋಡು ನಗರ ಠಾಣೆಯಲ್ಲಿ ಐವರ ವಿರುದ್ಧ ಪ್ರಕರಣ ದಾಖಲಾಗಿದೆ.
ಕಾಸರಗೋಡು ನೆಲ್ಲಿಕುಂಜೆ ನಿವಾಸಿ ಹಾಗೂ ಪ್ರಸಕ್ತ ಚೆರ್ಕಳ ಬಾಲನಡ್ಕದಲ್ಲಿ ವಾಸ್ತವಿರುವ ಅಬ್ದುಲ್ ರಾವುಫ್ ಎನ್.ಎ. ನೀಡಿದ ದೂರಿನಂತೆ ಕೋಯಿಕ್ಕೋಡ್ ಚುಂಡನ್ ಕಂಡಿಯ ರಮೀಸ್, ಮಲಪ್ಪುರಂ ವಲಾಂಚೇರಿಯ ಯೂಸಫ್, ಕೋಟಯಂ ಈರಾಟುಪೇಟೆಯ ನಿವಾಸಿಗಳಾದ ಸಜಿಲ್, ಫರೀದ್ ಮತ್ತು ತಿರುವನಂತಪುರ ಕಟ್ಟಕ್ಕಡ ನಿವಾಸಿ ನಿಜಾಮ್ ಎಂಬುವರ ವಿರುದ್ಧ ಕೇಸ್ ದಾಖಲಾಗಿದೆ.
2022 ಅ.22ರಿಂದ 2023 ಅ.28ರ ನಡುವಿನ ಅವಧಿಯಲ್ಲಿ ದೆಹ್ರಾ ದುಬೈಯಲ್ಲಿ ವಂಚನೆ ನಡೆದಿದೆ. ದೆಹ್ರಾ ದುಬೈಯಲ್ಲಿ ಸಂಬಂಧಿಕರೊಬ್ಬರು ಪಾಲುದಾರಿಕೆಯೊಂದಿಗೆ ಮಿಲಿಯಮ್ ಗಿಫ್ಟ್ ಟ್ರೇಡಿಂಗ್ ಎಂಬ ಸಂಸ್ಥೆ ನಡೆಸುತ್ತಿದ್ದರು. ಐವರು ಆರೋಪಿಗಳು ವಂಚಿಸುವ ಉದ್ದೇಶದಿಂದ ಸಂಸ್ಥೆಯ ಪೈಡ್ ಸೀಲ್ ಅನ್ನು ನಕಲಿಯಾಗಿ ಸೃಷ್ಟಿಸಿ ಸಂಸ್ಥೆಗೆ ವಿವಿಧ ದಿನಗಳಲ್ಲಿ ಬಂದು ರಖಂ ಆಗಿ ಐಫೋನ್ ಖರೀದಿಸಿ ಅಸಲಿ ಬಿಲ್ ಬದಲು ನಕಲಿ ಮೊಹರು ಲಗತ್ತಿಸಿದ ಬಿಲ್ಗಳನ್ನು ಸಂಸ್ಥೆಯ ಡೆಲಿವರಿ ಕೌಂಟರ್ನಲ್ಲಿ ನೀಡಿ ಐಫೋನ್ಗಳನ್ನು ಪಡೆದುಕೊಂಡಿದ್ದಾರೆ. ಬಳಿಕ ಅವುಗಳನ್ನು ದುಬೈನಲ್ಲೇ ಮಾರಾಟ ಮಾಡಿ 38 ಕೋಟಿ ರೂ. ನಷ್ಟ ಉಂಟು ಮಾಡಿರುವುದಾಗಿ ರಾವುಫ್ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.