ದಕ್ಷಿಣ ಕನ್ನಡ

3 ಕೋಟಿ ರೂ. ಸಾಲ ಪಡೆದು ಬ್ಯಾಂಕ್‌ಗೆ ವಂಚನೆ

ಮರುಪಾವತಿ ಮಾಡದೆ ವಂಚನೆ

ಪಡುಬಿದ್ರಿ: ಸಿಗಡಿ ಸಾಕಣೆ ವಾಡುವುದಾಗಿ ಪಡುಬಿದ್ರಿ ಬ್ಯಾಂಕೊಂದರಿಂದ 3 ಕೋಟಿ ರೂ. ಸಾಲ ಪಡೆದು ವಂಚನೆ ಮಾಡಿರುವ ಬಗ್ಗೆ ಲಲಿತಾ ಆಕ್ವಾ ಾರ್ಮ್ ವಾಲೀಕ ಶ್ಯಾಮ್ ಪ್ರಸಾದ್ ಎಸ್., ಜಾಮೀನುದಾರರಾದ ಆತನ ಪತ್ನಿ ಶೈಲಜಾ ಹಾಗೂ ಸಹೋದರ ನಂದ ಪ್ರಸಾದ್ ಆಲಿಯಾಸ್ ಶಿವಪ್ರಸಾದ್ ಎಂಬುವರ ವಿರುದ್ಧ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆರೋಪಿಗಳು 2023ರ ಫೆ.6ರಂದು 1 ಕೋಟಿ ರೂ. ಹಾಗೂ 10ರಂದು 2 ಕೋಟಿ ರೂ. ಸಾಲ ಪಡೆದಿದ್ದರು. ಆದರೆ ಪಡೆದ ಸಾಲದ ಹಣವನ್ನು ಸಿಗಡಿ ಸಾಕಣೆ ಘಟಕ ಸ್ಥಾಪನೆಗೆ ಬಳಸದೆ ರಿಯಲ್ ಎಸ್ಟೇಟ್ ವ್ಯವಹಾರ ಹಾಗೂ ಆಭರಣ ಖರೀದಿ ಮಾಡಲು ಉಪಯೋಗಿಸಿ ಸಾಲವನ್ನು ಸರಿಯಾಗಿ ಮರುಪಾವತಿ ಮಾಡದೆ ಬ್ಯಾಂಕ್‌ಗೆ ವಂಚಿಸಿದ್ದಾರೆ ಎಂದು ಬ್ಯಾಂಕ್ ಪ್ರಬಂಧಕರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಕಾರು ಡಿಕ್ಕಿ, ಸ್ಕೂಟಿ ಸವಾರ ಸಾವು

ಪಡುಬಿದ್ರಿ: ಪಡುಬಿದ್ರಿ ಜಂಕ್ಷನ್‌ನಲ್ಲಿ ಗುರುವಾರ ಬೆಳಗ್ಗೆ ಕಾರು ಡಿಕ್ಕಿಯಾಗಿ ಸ್ಕೂಟಿ ಸವಾರ ಉಡುಪಿ ಅಂಬಲಪಾಡಿ ನಿವಾಸಿ ನಿತ್ಯಾನಂದ ಹೊಳ್ಳ(45) ಮೃತಪಟ್ಟಿದ್ದಾರೆ. ಅಪಘಾತದ ತೀವ್ರತೆಯಿಂದ ಸ್ಕೂಟಿ ಸಹಿತ ಸವಾರ ರಸ್ತೆಗೆಸೆಯಲ್ಪಟ್ಟು ಕಾರಿನ ಹಿಂಭಾಗದ ಚಕ್ರದಡಿಗೆ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣ ಪಡುಬಿದ್ರಿ ಖಾಸಗಿ ಆಸ್ಪತ್ರೆಗೆ ಸಾಗಿಸಿದ್ದು, ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.