crime 
ದಕ್ಷಿಣ ಕನ್ನಡ

ಉದ್ಯೋಗ ಭರವಸೆ ನೀಡಿ ವಂಚನೆ

ಬದಿಯಡ್ಕ ಪೊಲೀಸರು ಕೇಸು ದಾಖಲು

ಕಾಸರಗೋಡು: ಫೇಸ್‌ಬುಕ್ ಮೂಲಕ ಸಂಪರ್ಕಿಸಿ ಉದ್ಯೋಗದ ಭರವಸೆ ನೀಡಿ ಸೀತಾಂಗೋಳಿ ಸನಿಹದ ಬೇಳ ನಿವಾಸಿ ರಶಾದ್ ಎ.ಕೆ. ಎಂಬುವರ ಬ್ಯಾಂಕ್ ಖಾತೆಯಿಂದ 1,12,300 ರೂ. ವಂಚಿಸಿದ ಬಗ್ಗೆ ಬದಿಯಡ್ಕ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ರಶಾದ್ ದೂರಿನ ಮೇರೆಗೆ ಅಪರಿಚಿತ ವ್ಯಕ್ತಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. 2025 ಜೂನ್ 10ರಿಂದ ಜು.12ರ ಮಧ್ಯೆ ಉದ್ಯೋಗ ಭರವಸೆ ನೀಡಿ ಎರಡು ಬ್ಯಾಂಕ್ ಖಾತೆಗಳಿಂದಾಗಿ ಮೂರು ಬಾರಿಯಾಗಿ ಮೊತ್ತ ಪಡೆದು ವಂಚಿಸಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.

ಯುವಕರಿಬ್ಬರ ಮೇಲೆ ಹಲ್ಲೆ

ಕಾಸರಗೋಡು: ಯುವಕರಿಬ್ಬರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಅಬೂಬಕ್ಕರ್ ಸಿದ್ದೀಕ್ ಎಂಬಾತನ ವಿರುದ್ಧ ಬದಿಯಡ್ಕ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ನೆಕ್ರಾಜೆ ನೆಲ್ಲಿಕಟ್ಟೆ ಮಸೀದಿ ಸನಿಹದ ನಿವಾಸಿ ಅಬೂಬಕ್ಕರ್(50) ಎಂಬುವರು ನೀಡಿದ ದೂರಿನನ್ವಯ ಪ್ರಕರಣ ದಾಖಲಾಗಿದೆ. ನೆಲ್ಲಿಕಟ್ಟೆಯಲ್ಲಿ ಆರೋಪಿ ಕಲ್ಲೆಸೆದು ಗಾಯಗೊಳಿಸಿದ್ದು ತಡೆಯಲೆತ್ನಿಸಿದ ಸ್ನೇಹಿತ ಉಮ್ಮರ್ ಫಾರೂಕ್ ಅವರಿಗೂ ಬೆತ್ತದಿಂದ ಹೊಡೆದು ಗಾಯಗೊಳಿಸಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ನೇಣುಬಿಗಿದು ಟೆಂಪೋ ಚಾಲಕ ಆತ್ಮಹತ್ಯೆ

ಕಾಸರಗೋಡು: ಹೊಸಂಗಡಿ ಬಳಿಯ ಅಂಗಡಿಪದವು ನಿವಾಸಿ, ಟೆಂಪೋ ಚಾಲಕ ಮಚ್ಚೇಂದ್ರನಾಥ(48) ಅವರ ಮೃತದೇಹ ಮನೆಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮನೆ ಕೊಠಡಿಗೆ ತೆರಳಿ ಬಾಗಿಲು ಹಾಕಿದ್ದ ಮಚ್ಚೇಂದ್ರನಾಥ ದೀರ್ಘ ಹೊತ್ತು ಕಳೆದರೂ ಹೊರಗೆ ಬಾರದ ಹಿನ್ನೆಲೆ ಬಾಗಿಲು ಮುರಿದು ನೋಡಿದಾಗ ನೇಣುಬಿಗಿದ ಸ್ಥಿತಿಯಲ್ಲಿ ಕಂಡುಬಂದಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿರಲಿಲ್ಲ. ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.