ಅಜಯ್ ಪ್ರಸಾದ್  
ದಕ್ಷಿಣ ಕನ್ನಡ

ವಂಚನೆ ಪ್ರಕರಣ 15 ವರ್ಷ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

ಮಂಗಳೂರು: ವಂಚನೆ ಪ್ರಕರಣಗಳಲ್ಲಿ 15 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು ಮೂಲದ ಅಜಯ್ ಪ್ರಸಾದ್ ಜಿ (41) ಬಂಧಿತ ಆರೋಪಿ. ಈತನ ವಿರುದ್ಧ 3 ವಂಚನೆ ಪ್ರಕರಣಗಳು ದಾಖಲಾಗಿದ್ದವು.
ಅಜಯ್ ಪ್ರಸಾದ್ ಜಿ ನ್ಯಾನೋ ಫರಾಕ್ಸ್ ಇಂಡಿಯಾ ಎಂಬ ಸಂಸ್ಥೆಯ ಫರಾಕ್ಸ್ ರೋಬೋಟ್ ಸಾಫ್ಟ್‌ವೇರ್ ಮೂಲಕ ಕರೆನ್ಸಿ ಟ್ರೇಡಿಂಗ್ ಮತ್ತು ಷೇರು ವ್ಯವಹಾರದಲ್ಲಿ ತಿಂಗಳಿಗೆ ಶೇ.40 ಲಾಭ ಹಾಗೂ ಶೇ.20 ಮರುಪಾವತಿ ನೀಡುವುದಾಗಿ ಭರವಸೆ ನೀಡುತ್ತಾ, ಗ್ರಾಹಕರ ಐಡಿ ಕಾರ್ಡ್ ಮತ್ತು ದಾಖಲೆಗಳನ್ನು ಪಡೆದು ವಿಶ್ವಾಸ ಹುಟ್ಟಿಸಿ, ವಂಚನೆ ನಡೆಸಿರುವ ಆರೋಪ ಇದೆ. ವಿವಿಧ ಗ್ರಾಹಕರಿಂದ ಸುಮಾರು 1.20 ಕೋಟಿ ರೂ. ಹಣವನ್ನು ವಂಚಿಸಿಕೊಂಡಿದ್ದರೂ, ಯಾವುದೇ ಲಾಭ ಅಥವಾ ಮರುಪಾವತಿ ನೀಡದೇ ಹಣವನ್ನು ದುರುಪಯೋಗಪಡಿಸಿರುವುದಾಗಿ ಉಳ್ಳಾಲ ಪೊಲೀಸ್ ಠಾಣೆಯಲ್ಲಿ 2011ರಲ್ಲಿ ಪ್ರಕರಣ ದಾಖಲಾಗಿದ್ದವು.
ಅಜಯ್ ಪ್ರಸಾದ್ ಜಿಯನ್ನು ಉಳ್ಳಾಲ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಗಳ ತಂಡ ಬೆಂಗಳೂರಿನಿಂದ ಬಂಧಿಸಿ ಮಂಗಳೂರು ನಗರದ 7 ನೇ ಜೆ.ಎಂ.ಎಫ್.ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದೆ. ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.