ಸಾಂದರ್ಭಿಕ ಚಿತ್ರ 
ದಕ್ಷಿಣ ಕನ್ನಡ

ಮಂಗಳೂರು ಮಾದಕ ವಸ್ತು ಸೇವನೆ ನಾಲ್ವರು ಬಂಧನ

ಮಂಗಳೂರು : ನಗರ ಪೊಲೀಸ್ ಕಮಿಷನರೆಟ್ ನ ವಿವಿಧ ಠಾಣಾ ವ್ಯಾಪ್ತಿಯಲ್ಲಿ ಮಾದಕ ವಸ್ತು ಸೇವನೆ ಮಾಡಿದ ಆರೋಪದಡಿ ನಾಲ್ಕು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬಲ್ಲಾಳ್ ಬಾಗ್ ನ ಶ್ರೀದೇವಿ ಕಾಲೇಜು ರಸ್ತೆಯಲ್ಲಿ ಮಾದಕ ವಸ್ತು ಸೇವನೆಯ ಅಮಲಿನಲ್ಲಿದ್ದ ಯುವಕನನ್ನು ಬರ್ಕೆ ಠಾಣೆ ಪೊಲೀಸರು ಆ.14ರಂದು ಮಧ್ಯಾಹ್ನ 1.30ರ ವೇಳೆಗೆ ಬಂಧಿಸಿದ್ದಾರೆ. ಕೇರಳ ಕೋಯಿಕೋಡ್ ಪುತ್ತನ್ ಪುರಯ್, ವೆಂಗಳಂ ನಿವಾಸಿ ಅಭಯ್ ರಾಜ್ (21) ಬಂಧಿತ ಆರೋಪಿ.
ಪಚ್ಚನಾಡಿ ಗ್ರಾಮದ ಪಚ್ಚನಾಡಿ ಕ್ರಾಸ್ ಬಳಿ ಮಾದಕ ವಸ್ತು ಸೇವನೆ ಮಾಡಿದ್ದ ಆರೋಪದಡಿ ಚಿಕ್ಕಮಗಳೂರು ಜಿಲ್ಲಾ ಬನ್ನೂರ್ ಹಂಗರವಳ್ಳಿ ಮೂಲದ, ಕಾವೂರು ಮಾಲಾಡಿ ಕ್ರಾಸ್ ಬಳಿ ವಾಸವಾಗಿರುವ ರಂಜಿತ್ ಆರ್. (27) ಎಂಬಾತನನ್ನು ಆ.14ರಂದು ಸಂಜೆ 4.10ರ ವೇಳೆಗೆ ಮಂಗಳೂರು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕುದ್ರೋಳಿ ಗ್ರೀನ್ ಪಾರ್ಕ್ ಬಳಿ ಮಾದಕ ವಸ್ತು ಸೇವನೆ ಮಾಡಿ ತೂರಾಡುತ್ತ ಸಾಗುತ್ತಿದ್ದ ಇಬ್ಬರನ್ನು ಬಂದರು ಠಾಣೆ ಪೊಲೀಸರು ಆ.14ರಂದು ಸಂಜೆ 4.30ರ ವೇಳೆಗೆ ಬಂಧಿಸಿದ್ದಾರೆ. ಉಡುಪಿ ಕುಂಜಿಬೆಟ್ಟುವಿನ ಶಿವನಿಧಿ ಆಚಾರ್ಯ(21) ಹಾಗೂ ಕಣ್ಣೂರು ಜಿಲ್ಲೆ ಪುದುವಚೇರಿಯ ಉಜ್ವಲ್ ಪಿ.ವಿ. (22) ಬಂಧಿತ ಆರೋಪಿಗಳು.
ವೈದ್ಯಕೀಯ ಪರೀಕ್ಷೆಯಲ್ಲಿ ಮಾದಕ ವಸ್ತು ಸೇವನೆ ಮಾಡಿರುವುದು ದೃಢಪಟ್ಟಿದ್ದು, ಆರೋಪಿಗಳ ವಿರುದ್ಧ ಆಯಾ ಠಾಣೆಯಲ್ಲಿ ಎನ್ ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.