ಮಂಗಳೂರು’: ಕ್ಷುಲ್ಲಕ ವಿಚಾರದಲ್ಲಿ ವ್ಯಕ್ತಿಯೊಬ್ಬರ ಮೇಲೆ ತಂಡವೊಂದು ಗಂಭೀರ ಹಲ್ಲೆಗೈದ ಪ್ರಕರಣ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಎ್ಟಿಎಸ್‌ಸಿ-1 ತ್ವರಿತಗತಿ ನ್ಯಾಯಾಲಯದಲ್ಲಿ ಸಾಬೀತಾಗಿದ್ದು, ಐವರು ಅಪರಾಧಿಗಳಿಗೆ 3ವರ್ಷ ಕಠಿಣ ಸಜೆ ಮತ್ತು 1.34 ಲಕ್ಷ ರೂ. ದಂಡ ವಿಧಿಸಿ ಮಂಗಳವಾರ ತೀರ್ಪು ನೀಡಿದೆ.
ಬಂಟ್ವಾಳ ಕಾವಳಪಡೂರು ನಿವಾಸಿ ದಿನೇಶ್ ಶೆಟ್ಟಿ (27), ಅರ್ಕುಳ ನಿವಾಸಿ ಧನ್‌ರಾಜ್ ಪೂಜಾರಿ ಯಾನೆ ವಳಚ್ಚಿಲ್ ಧನು (22), ಎಡಪದವು ನಿವಾಸಿ ನವೀನ್ (21), ಕಾರ್‌ಸ್ಟ್ರೀಟ್ ನಿವಾಸಿ ಪ್ರಜ್ವಲ್ ಪೂಜಾರಿ (20), ತಡಂಬೈಲ್ ನಿವಾಸಿ ವಸಂತ್ ಬಾಳ (53) ಶಿಕ್ಷೆಗೊಳಗಾದ ಆರೋಪಿಗಳು.
ಪ್ರಕರಣದ ಹಿನ್ನೆಲೆ: ಕಾರಿನಲ್ಲಿ ಹೋಗುತ್ತಿರುವ ಸೈಡ್ ಕೊಡುವ ವಿಚಾರದಲ್ಲಿ ಪ್ರಕರಣದ 5ನೇ ಆರೋಪಿ ವಸಂತ ಬಾಳ ಎಂಬಾತ ಕಿಶನ್ ರಾವ್‌ರನ್ನು ಕೊಲೆ ಮಾಡಬೇಕೆಂದು ತೀರ್ಮಾನಿಸಿ ಒಳಸಂಚು ರೂಪಿಸಿ ಕೃತ್ಯ ನಡೆಸಲು ವಸಂತ್ ತನ್ನ ಕಾರನ್ನು ಉಳಿದ ನಾಲ್ವರು ಆರೋಪಿಗಳಿಗೆ ನೀಡಿ ಕಿಶನ್‌ರನ್ನು ಕೊಲೆಗೈಯುವಂತೆ ಪ್ರಚೋದಿಸಿದ್ದಾನೆ. ಈ ಕಾರಣದಿಂದ ಅ.22ರಂದು ನಾಲ್ವರು ಆರೋಪಿಗಳು ಮಾರಕಾಯುಧದೊಂದಿಗೆ ಹೊರಟು ಕಾರಿನಲ್ಲಿ ಕುಳಾಯಿ ಹೊಸಬೆಟ್ಟು ಗ್ರಾಮದ ವಿನಾಯಕ ಮೊಸಾಯಿಕ ರಸ್ತೆಯಲ್ಲಿ ಕಾದು ಕುಳಿತ್ತಿದ್ದರು. ಈ ವೇಳೆ ಕಿಶನ್ ರಾವ್ ಅವರು ಸ್ಕೂಟರ್‌ನಲ್ಲಿ ಬರುತ್ತಿರುವಾಗ ದಿನೇಶ್ ಶೆಟ್ಟಿ ಆಲ್ಟೋ ಕಾರನ್ನು ಕಿಶನ್ ಅವರ ಎದುರುಗಡೆಯಿಂದ ಚಲಾಯಿಸಿಕೊಂಡು ಬಂದು ಅಡ್ಡಗಟ್ಟಿ ಡಿಕ್ಕಿ ಹೊಡೆದಿದ್ದಾನೆ. ಆಗ ಕಿಶನ್ ರಾವ್ ಅವರು ಕೆಳಗೆ ಬಿದ್ದಿದ್ದು, ನಾಲ್ವರು ಆರೋಪಿಗಳು ಕಾರಿನಿಂದ ಇಳಿದು ಕಿಶನ್ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೊಲೆ ಮಾಡುವ ಉದ್ದೇಶದಿಂದ ಸ್ಟಿಕ್, ರಾಡ್, ಕೈಯಿಂದ ಹಲ್ಲೆ ನಡೆಸಿದ್ದಾರೆ. ಇಷ್ಟು ಮಾತ್ರವಲ್ಲದೆ ಕಿಶನ್ ಅವರಿಗೆ ಕೊಲೆ ಬೆದರಿಕೆಯನ್ನು ಹಾಕಿರುತ್ತಾರೆ. ಇದರಿಂದ ಕಿಶನ್ ಅವರಿಗೆ ಗಂಭೀರ ಗಾಯವಾಗಿದ್ದು, ಮೊಬೈಲ್ ೆನ್ ಕೂಡಾ ಹಾನಿಯಾಗಿದೆ. ಈ ಘಟನೆಗೆ 2 ದಿನ ಮುಂಚಿತವಾಗಿ ದಿನೇಶ್, ವಸಂತ್ ಹಾಗೂ ಕಿಶನ್ ಅವರ ನಡುವೆ ಕಾರಿನಲ್ಲಿ ಸೈಡ್ ಕೊಡುವ ವಿಚಾರದಲ್ಲಿ ಗಲಾಟೆ ನಡೆದಿದೆ. ಅದೇ ದ್ವೇಷದಿಂದ 5ನೇ ಆರೋಪಿ ವಸಂತ್ ಬಾಳ 1ರಿಂದ 4ನೇ ಆರೋಪಿಗಳ ಮುಖಾಂತರ ಈ ಕೃತ್ಯವೆಸಗಿದ್ದಾನೆ. ಈ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಮಾನ್ಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಎ್ಟಿಎಸ್‌ಸಿ-1 ತ್ವರಿತಗತಿ ನ್ಯಾಯಾಲಯದ ನ್ಯಾಯಾಧೀಶರಾದ ಮೋಹನ ಜೆ.ಎಸ್. ಅವರು ಸಮಗ್ರ ವಿಚಾರಣೆ ನಡೆಸಿ, ಅಪರಾಧ ಸಾಬೀತುಪಡಿಸಿ ತೀರ್ಪು ನೀಡಿದ್ದಾರೆ. ಪ್ರಕರಣದಲ್ಲಿ 15 ಸಾಕ್ಷಿದಾರರನ್ನು ವಿಚಾರಣೆಗೊಳಪಡಿಸಲಾಗಿತ್ತು. 35 ದಾಖಲೆಗಳನ್ನು ಗುರುತಿಸಲಾಗಿತ್ತು.
ಶಿಕ್ಷೆ ಪ್ರಮಾಣ ವಿವರ: 5ಮಂದಿ ಅಪರಾಧಿಗಳಿಗೆ ಐಪಿಸಿ (ಭಾರತೀಯ ದಂಡ ಸಂಹಿತೆ) ಕಲಂ 120(ಬಿ) ಪ್ರಕಾರ 3ವರ್ಷಗಳ ಕಾಲ ಕಠಿಣ ಶಿಕ್ಷೆ, ತಲಾ 5ಸಾವಿರ ರೂ. ದಂಡ, ಐಪಿಸಿ ಕಲಂ 324ರ ಪ್ರಕಾರ 2 ವರ್ಷಗಳ ಕಠಿಣ ಸಜೆ, 5ಸಾವಿರ ರೂ. ದಂಡ, 1ರಿಂದ 4ನೇ ಅಪರಾಧಿಗಳಿಗೆ ಐಪಿಸಿ ಕಲಂ: 341 ಪ್ರಕಾರ 15ದಿನಗಳ ಕಾಲ ಸಾದಾ ಶಿಕ್ಷೆ ಮತ್ತು 500ರೂ. ದಂಡ, 1ರಿಂದ 4ನೇ ಅಪರಾಧಿಗಳಿಗೆ ಐಪಿಸಿ ಕಲಂ: 504 ಪ್ರಕಾರ ತಿಂಗಳುಗಳ ಕಾಲ ಸಾದಾ ಶಿಕ್ಷೆ ಮತ್ತು 3ಸಾವಿರ ರೂ. ದಂಡ ವಿಧಿಸಿದೆ.1ರಿಂದ 4ನೇ ಆರೋಪಿತರು ದಂಡ ಸಂಹಿತೆ ಕಲಂ 506ಪ್ರಕಾರ 2 ವರ್ಷಗಳ ಕಾಲ ಕಠಿಣ ಶಿಕ್ಷೆ ಮತ್ತು 5ಸಾವಿರ ರೂ. ದಂಡ ವಿಧಿಸಿರುತ್ತದೆ. ದಂಡ ಒಟ್ಟು ಹಣವನ್ನು 1.34 ಲಕ್ಷ ರೂ.ಗಳಲ್ಲಿ 1.25ಲಕ್ಷ ರೂ. ಹಣವನ್ನು ಗಾಯಾಳುವಿಗೆ ನೀಡುವಂತೆ ನ್ಯಾಯಾಲಯ ಆದೇಶಿಸಿದೆ.
ಈ ಪ್ರಕರಣದಲ್ಲಿ ಸುರತ್ಕಲ್ ಪೊಲೀಸ್ ಠಾಣೆಯ ಹಿಂದಿನ ಪಿಎಸ್‌ಐ ಪೂವಪ್ಪ ಹೆಚ್.ಎಂ. ಮತ್ತು ಸುಂದರಿ ಕೆ. ತನಿಖೆ ನಡೆಸಿ ದೋಷಾರೋಪಣೆ ಪತ್ರ ಸಲ್ಲಿಸಿದ್ದಾರೆ. ಸಾಕ್ಷಿ ವಿಚಾರಣೆಯನ್ನು ಸರ್ಕಾರಿ ಅಭಿಯೋಜಕ ಹರಿಶ್ಚಂದ್ರ ಉದಿಯಾವರ್ ಅವರು ನಡೆಸಿದ್ದು, ನಂತರ ಕೆ.ಬದರಿನಾಥ ನಾಯರಿ ವಾದ ಮಂಡಿಸಿದ್ದರು.