ಮಂಗಳೂರು: ಮಾದಕವಸ್ತು ಎಂಡಿಎಂಎ ಪೂರೈಕೆ ಮತ್ತು ಸಾಗಾಟ ಪ್ರಕರಣವೊಂದರಲ್ಲಿ ಮಂಗಳೂರಿನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಸುಡಾನ್ ದೇಶದ ಪ್ರಜೆ ಸಹಿತ ಐವರಿಗೆ 12 ರಿಂದ 14 ವರ್ಷಗಳ ಕಠಿನ ಜೈಲು ಶಿಕ್ಷೆ ವಿಧಿಸಿದೆ. ಶನಿವಾರ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಬಸವರಾಜ ಅವರು ಈ ಮೂಲಕ ಮಹತ್ವದ ತೀರ್ಪು ನೀಡಿದ್ದಾರೆ.
ಎಂಡಿಎಂಎ ಪೂರೈಕೆ ಮಾಡಿದ್ದ ಸುಡಾನ್ ಪ್ರಜೆ, ಬೆಂಗಳೂರಿನ ವರ್ತೂರು ಗುಂಜೂರು ಪಾಳ್ಯದಲ್ಲಿ ವಾಸವಿದ್ದ ಲೂಯಲ್ ಡೇನಿಯಲ್ ಜಸ್ಟಿನ್ ಬೌಲೋ ಅಲಿಯಾಸ್ ಡ್ಯಾನಿ (25), ಬೆಂಗಳೂರಿನಿಂದ ಮಂಗಳೂರಿಗೆ ತಂದಿದ್ದ ಕಾಸರಗೋಡು ಉಪ್ಪಳದ ಮಹಮ್ಮದ್ ರಮೀಜ್ (24), ಕಾಸರಗೋಡು ಶಿರಿಯಾದ ಮೊಹಿದ್ದೀನ್ ರಾಶೀದ್ (24) ಉಪ್ಪಳ ಮುಳಿಂಜದ ಅಬ್ದುಲ್ ರವೂಫ್ ಯಾನೆ ಟಫ್ ರವೂಫ್ (35) ಮತ್ತು ತಮಿಳುನಾಡು ಊಟಿಯ, ಬೆಂಗಳೂರಿನ ಮಡಿವಾಳದಲ್ಲಿ ವಾಸವಿದ್ದ ಸಬಿತಾ ಅಲಿಯಾಸ್ ಚಿಂಚು (25) ಶಿಕ್ಷೆಗೊಳಗಾದವರು. ಪ್ರಕರಣದಲ್ಲಿ ಆರನೇ ಆರೊಪಿಯಾಗಿದ್ದ ಕಾರು ಚಾಲಕ ಪ್ರಕರಣದಿಂದ ಖುಲಾಸೆಗೊಂಡಿದ್ದಾನೆ. ಆದರೆ ಕಾರನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.
ಬೆಂಗಳೂರಿನಿಂದ ಮಂಗಳೂರಿಗೆ ಕಾರಿನಲ್ಲಿ ಮಾದಕ ವಸ್ತು ಸಾಗಾಟ ಮಾಡಲಾಗುತ್ತಿದೆ ಎಂದು ಸಿಸಿಬಿ ಪೊಲೀಸ್ ನಿರೀಕ್ಷಕ ಮಹೇಶ್ ಪ್ರಸಾದ್ ಅವರಿಗೆ 2022ರ ಜೂ.14ರಂದು ರಾತ್ರಿ 11 ಗಂಟೆ ವೇಳೆಗೆ ಬಂದ ಖಚಿತ ಮಾಹಿತಿಯಂತೆ ಜೂ.15ರಂದು ಬೆಳಗ್ಗೆ 6.15ಕ್ಕೆ ಪಡೀಲ್ ಜಂಕ್ಷನ್‌ನಲ್ಲಿ ಪೊಲೀಸ್ ಉಪ ನಿರೀಕ್ಷಕ ಪ್ರದೀಪ್ ಟಿ ಆರ್. ಮತ್ತು ತಂಡದವರು ಕಾರು ನಿಲ್ಲಿಸಿ ಮಹಮ್ಮದ್ ರಮೀಝ್, ಮೊಹಿದ್ದೀನ್ ರಾಶೀದ್, ರವೂಫ್ ಮತ್ತು ಸಬಿತಾ ಅವರನ್ನು ವಶಕ್ಕೆ ಪಡೆದಿದ್ದಾರೆ. ಈ ವೇಳೆ ಕಾರಿನ ಗೇರ್ ಲಿವರ್ ನ ಪ್ಲಾಸ್ಟಿಕ್ ಕವರಿನಲ್ಲಿ 40 ಗ್ರಾಂ ಮಾದಕ ವಸ್ತು ಪತ್ತೆಯಾಗಿತ್ತು. ಜತೆಗೆ ತಾಮ್ರದ ತಂತಿ ಸುತ್ತಿರುವ ಗಾಜಿನ ಕೊಳವೆ, ಡಿಜಿಟಲ್ ತೂಕ ಮಾನಪ ವಶಕ್ಕೆ ಪಡೆಯಲಾಗಿತ್ತು. ಜತೆಗೆ ರಮೀಜ್ ನ ಪ್ಯಾಂಟ್ ಕಿಸೆಯಲ್ಲಿ ಕವರಿನಲ್ಲಿ 25 ಗ್ರಾಂ ಎಂಡಿಎಂಎ, ರಶೀದ್ ಮತ್ತು ಸಬಿತಾಳ ಪ್ಯಾಂಟ್ ಕಿಸೆಯಲ್ಲಿ ತಲಾ 20 ಗ್ರಾಂ. ತೂಕದ ಎಂಡಿಎಂಎ ಪತ್ತೆಯಾಗಿದೆ. ಮಾತ್ರವಲ್ಲದೆ ಮಹಮ್ಮದ್ ರಮೀಜ್ ನ ಹೇಳಿಕೆಯಂತೆ ಜೂ.17ರಂದು ಆತನ ಉಪ್ಪಳದ ಮನೆಯಲ್ಲಿ ಮಾರಾಟದ ಉದ್ದೇಶಕ್ಕೆ ಅಕ್ರಮವಾಗಿ ಸಂಗ್ರಹಿಸಿ ಇಡಲಾಗಿದ್ದ 10.21 ಗ್ರಾಂ.ಎಂಡಿಎಂಎ ವಶಪಡಿಸಲಾಗಿತ್ತು.
ಸುಡಾನ್ ಪ್ರಜೆ ಲೂಯಲ್ ಡೇನಿಯಲ್ ನಿಂದ ರಮೀಜ್ ಎಂಡಿಎಂಎ ಖರೀದಿ ಮಾಡಿದ್ದ. ಅದನ್ನು ಆರನೇ ಆರೋಪಿಯಾಗಿದ್ದ ವಿ.ಎಂ. ಇಮ್ತಿಯಾಜ್ ಅಹಮ್ಮದ್ ಎಂಬಾತ ಅದರ ಸಾಗಾಟಕ್ಕೆ ಕಾರು ನೀಡಿದ್ದ. ಅದನ್ನು ರಮೀಜ್ ಬಳಸುತ್ತಿದ್ದ. ತಪಾಸಣೆ ವೇಳೆ ಎಲ್ಲ ಐವರು ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿತ್ತು. ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಅಂದಿನ ಪೊಲೀಸ್ ನಿರೀಕ್ಷಕ ಸತೀಶ್ ಎಂ.ಪಿ. ಅವರು ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ನ್ಯಾಯಾಲಯದಲ್ಲಿ ಒಟ್ಟು 24 ಸಾಕ್ಷಿಗಳನ್ನು ವಿಚಾರಣೆ ಒಳಪಡಿಸಿದ್ದು, 172 ದಾಖಲೆಗಳನ್ನು ಗುರುತಿಸಲಾಗಿತ್ತು. ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಬಸವರಾಜ ಅವರು ಡಿ.1ರಂದು ದೋಷಿಗಳೆಂದು ತೀರ್ಪು ನೀಡಿದ್ದರು. ಡಿ.6ರಂದು ಶಿಕ್ಷಣ ಪ್ರಮಾಣ ಪ್ರಕಟಿಸಿದ್ದಾರೆ.
ಮಾದಕ ವಸ್ತು ಹೊಂದಿರುವ ಮತ್ತು ಸಾಗಾಟ ಮಾಡಿದ ಪ್ರಕರಣಕ್ಕೆ ಎನ್ ಡಿಪಿಎಸ್ ಕಾಯ್ದೆಯ ಕಲಂ 21(ಸಿ) ಅಡಿ ಡೇನಿಯಲ್, ಮೊಹಿದ್ದೀನ್ ರಾಶೀದ್ ಮತ್ತು ಸಬಿತಾಗೆ 12 ವರ್ಷಗಳ ಕಠಿನ ಸಜೆ ಮತ್ತು 1.25 ಲಕ್ಷ ರೂ. ದಂಡ. ದಂಡ ಪಾವತಿಸಲು ತಪ್ಪಿದರೆ 4 ತಿಂಗಳ ಕಠಿನ ಸಜೆ. ರಮೀಜ್ ಗೆ ಮಾದಕ ವಸ್ತು ಹೊಂದಿದ್ದ ಅಪರಾಧಕ್ಕೆ 14 ವರ್ಷ ಕಠಿನ ಸಜೆ ಮತ್ತು 1.45 ಲಕ್ಷ ರೂ. ದಂಡ ವಿಧಿಸಲಾಗಿದೆ. ದಂಡ ಪಾವತಿಸಲು ತಪ್ಪಿದರೆ 6 ತಿಂಗಳ ಕಠಿನ ಸಜೆ. ಈತನ ವಿರುದ್ಧ ಈ ಹಿಂದೆ ಎರಡು ಪ್ರಕರಣಗಳು ದಾಖಲಾಗಿರುವ ಹಿನ್ನೆಲೆಯಲ್ಲಿ ಶಿಕ್ಷೆ ಪ್ರಮಾಣ ಹೆಚ್ಚಿಸಲಾಗಿದೆ. ಅಬ್ದುಲ್ ರವೂಫ್ ಗೆ 13 ವರ್ಷಗಳ ಕಠಿನ ಸಜೆ ಮತ್ತು 1.35 ಲಕ್ಷ ರೂ. ದಂಡ ವಿಧಿಸಲಾಗಿದೆ. ದಂಡ ತೆರಲು ತಪ್ಪಿದಲ್ಲಿ 5 ತಿಂಗಳ ಕಠಿನ ಸಜೆ ಅನುಭವಿಸಬೇಕು ಎಂದು ಸೂಚಿಸಲಾಗಿದ್ದು, ಈತನ ವಿರುದ್ಧ ಈಗಾಗಲೇ ಎನ್ ಡಿಪಿಎಸ್ ಕಾಯ್ದೆಯಡಿ ಒಂದು ಪ್ರಕರಣ ಇದೆ.
ಮಾದಕ ವಸ್ತು ಸೇವನೆ ಮಾಡಿರುವ ಪ್ರಕರಣದಲ್ಲಿ ಎಲ್ಲ ಐವರು ಅಪರಾಧಿಗಳಿಗೆ 6 ತಿಂಗಳ ಪ್ರತ್ಯೇಕ ಕಠಿನ ಸಜೆ ಮತ್ತು 10 ಸಾವಿರ ರೂ. ದಂಡ ಪಾವತಿಸಬೇಕು. ತಪ್ಪಿದಲ್ಲಿ 1 ತಿಂಗಳು ಕಠಿನ ಸಜೆ ಅನುಭವಿಸಬೇಕು ಎಂದು ತೀರ್ಪಿನಲ್ಲಿ ನ್ಯಾಯಾಧೀಶರು ಉಲ್ಲೇಖಿಸಿದ್ದಾರೆ.
ಸರ್ಕಾರದ ಪರ ಸರ್ಕಾರಿ ಅಭಿಯೋಜಕಿ ಜುಡಿತ್ ಓಲ್ಗ ಮಾರ್ಗರೆಟ್ ಕ್ರಾಸ್ತಾ ಅವರು ವಾದ ಮಂಡಿಸಿದ್ದರು.
ಸುಡಾನ್ ಪ್ರಜೆ ಲೂಯಲ್ ಡೇನಿಯಲ್ ನ ವಿದ್ಯಾರ್ಥಿ ವಿಸಾದಡಿ ಬೆಂಗಳೂರಿಗೆ ಬಂದಿದ್ದ. ಆತನ ವಿಸಾ ಅವಧಿ 2019ರ ಮೇ 16ಕ್ಕೆ ಕೊನೆಗೊಂಡಿದ್ದರೂ, ಅಕ್ರಮವಾಗಿ ಬೆಂಗಳೂರಿನಲ್ಲಿ ನೆಲೆಸಿದ್ದ. ವೀಸಾ ನಿಯಮ ಉಲ್ಲಂಘನೆ ಕುರಿತು ಬೆಂಗಳೂರಿನ ಪ್ರಾದೇಶಿಕ ವಿದೇಶಿಯರ ನೋಂದಣಿ ಕಚೇರಿ ಆತನ ವಿರುದ್ಧ ಕ್ರಮ ಕೈಗೊಳ್ಳಲಿದೆ.