ವಿವಿಧ ಕ್ಷೇತ್ರಗಳಲ್ಲಿ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಸಾಧಕರು 
ದಕ್ಷಿಣ ಕನ್ನಡ

ಕರಾವಳಿಯ ಐವರಿಗೆ ರಾಜ್ಯೋತ್ಸವ ಪ್ರಶಸ್ತಿಯ ಗರಿ

ವಿವಿಧ ಕ್ಷೇತ್ರಗಳಲ್ಲಿ ಸಾಧಕರು

ವಿಜಯವಾಣಿ ಸುದ್ದಿಜಾಲ ಮಂಗಳೂರು/ಉಡುಪಿ

ದ.ಕ. ಹಾಗೂ ಉಡುಪಿ ಜಿಲ್ಲೆಯ ವಿವಿಧ ಕ್ಷೇತ್ರಗಳ ಐವರು ಸಾಧಕರು 71ನೇ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ. ದ.ಕ. ಜಿಲ್ಲೆಯ ವಿಶ್ವನಾಥ ಸುವರ್ಣ(ಮಾಧ್ಯಮ, ಛಾಯಾಚಿತ್ರ), ಎ.ಸಿ ಭಂಡಾರಿ(ಸಮಾಜ ಸೇವೆ), ಇಂದಿರಾ ಹೆಗ್ಗಡೆ(ಸಾಹಿತ್ಯ), ಉಡುಪಿ ಜಿಲ್ಲೆಯ ಬಿ.ವಿ.ಆಚಾರ್ಯ(ನ್ಯಾಯಾಂಗ), ಗೋಪಾಲ ಗಾಣಿಗ(ಯಕ್ಷಗಾನ) ಉಡುಪಿ ಪ್ರಶಸ್ತಿಗೆ ಭಾಜನರಾದವರು.

ಎ.ಸಿ.ಭಂಡಾರಿ

ಎ.ಸಿ.ಭಂಡಾರಿ

ತುಳು ಭಾಷೆ, ಸಾಹಿತ್ಯ, ರಂಗಭೂಮಿ, ಧಾರ್ಮಿಕ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿರುವ 84ರ ಹರೆಯದ ಬಂಟ್ವಾಳದ ಎ.ಸಿ.ಭಂಡಾರಿ ಸವಾಜಮುಖಿ ಕಾರ್ಯಗಳ ಮೂಲಕ ಗುರುತಿಸಿಕೊಂಡಿದ್ದಾರೆ. 1942ರ ಸೆ. 26ರಂದು ಬಂಟ್ವಾಳ ತಾಲೂಕಿನ ಸಜಿಪಮುನ್ನೂರು ಗ್ರಾಮದಲ್ಲಿ ಜನಿಸಿದ ಅಂಬಡೆಬೈಲು ಚಂದ್ರಶೇಖರ ಭಂಡಾರಿ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣವನ್ನು ಹುಟ್ಟೂರಿನಲ್ಲಿ ಪೂರೈಸಿದರು. ಮಂಗಳೂರಿನಲ್ಲಿ ಟೈಪ್ ರೈಟಿಂಗ್ ಶಿಕ್ಷಣ ಪಡೆದ ಬಳಿಕ 1965ರಲ್ಲಿ ಕದ್ರಿಯಲ್ಲಿ ‘ವಿಜಯಾ ಟೈಪ್ ರೈಟಿಂಗ್ ತರಬೇತಿ ಕೇಂದ್ರ’ ಆರಂಭಿಸಿದರು. 1968ರಲ್ಲಿ ಸರ್ಕಾರಿ ವಾನ್ಯತೆ ಪಡೆದ ಸಂಸ್ಥೆ ಪ್ರಿನ್ಸಿಪಾಲರಾಗಿ ಸೇವೆ ಸಲ್ಲಿಸಿ, ಬಂಟ್ವಾಳ, ಬೆಳ್ತಂಗಡಿ ಸೇರಿದಂತೆ ವಿವಿಧೆಡೆ ಶಾಖೆಗಳನ್ನು ವಿಸ್ತರಿಸಿದರು. 1969ರಲ್ಲಿ ಪ್ರಪ್ರಥಮ ತುಳು ಸಂಘಟನೆಯಾದ ‘ತುಳುಕೂಟ ಕುಡ್ಲ’ ಸ್ಥಾಪನೆಗೆ ಪ್ರಮುಖ ಪಾತ್ರ ವಹಿಸಿದರು. ತುಳುಕೂಟ ವಾಸಪತ್ರಿಕೆ ಸಂಪಾದಕ ಮಂಡಳಿ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ. 1969ರಿಂದ ನಡೆದ ಪ್ರಮುಖ ತುಳು ಸಮ್ಮೇಳನಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ತುಳುವನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸುವ ಪ್ರಯತ್ನದ ಭಾಗವಾಗಿ 2016ರ ಆ.31ರಂದು ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ ನಿಯೋಗದಲ್ಲೂ ಪಾಲ್ಗೊಂಡಿದ್ದರು. 1977ರಿಂದ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿರುವ ಅವರು, 2000ರಲ್ಲಿ ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ, ರಾಜ್ಯ ಖಾದಿ ಬೋರ್ಡ್ ನಿರ್ದೇಶಕರಾಗಿ ಹಾಗೂ ಕುರ್ನಾಡು ಜಿಪಂ ಕ್ಷೇತ್ರದ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. 1990ರಲ್ಲಿ ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದಿದ್ದಾರೆ. ಪ್ರಸ್ತುತ ಬಂಟ್ವಾಳ ತುಳುಕೂಟ ಗೌರವಾಧ್ಯಕ್ಷ ಹಾಗೂ ಅಖಿಲ ಭಾರತ ತುಳು ಒಕ್ಕೂಟ ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಬಿ.ವಿ.ಆಚಾರ್ಯ

ಬಿ.ವಿ.ಆಚಾರ್ಯ

ಉಡುಪಿ: ರಾಜ್ಯದ ಮಾಜಿ ಅಡ್ವೊಕೇಟ್ ಜನರಲ್ ಬಿ.ವಿ.ಆಚಾರ್ಯ(ಬೆಳ್ಳಾಡಿ ವಿಠಲ ಆಚಾರ್ಯ) ನ್ಯಾಯಾಂಗ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಉಡುಪಿಯ ಪುಟ್ಟ ಹಳ್ಳಿಯಿಂದ ಆರಂಭವಾದ ಅವರ ಪಯಣ ಸುಪ್ರೀಂ ಕೋರ್ಟ್‌ವರೆಗೂ ವ್ಯಾಪಿಸಿದ್ದು, ದೇಶದ ಕಾನೂನು ಇತಿಹಾಸದಲ್ಲಿ ಪ್ರಮುಖ ಅಧ್ಯಾಯವಾಗಿ ದಾಖಲಾಗಿದೆ. 1933ರಲ್ಲಿ ಉಡುಪಿ ತಾಲೂಕಿನ ಬೆಳಪು ಗ್ರಾಮದಲ್ಲಿ ಜನಿಸಿದ್ದರು. 1954ರಲ್ಲಿ ಮದ್ರಾಸ್ ವಿಶ್ವವಿದ್ಯಾಲಯದಿಂದ ಬಿ.ಎ. ಹಾಗೂ 1956ರಲ್ಲಿ ಮದ್ರಾಸ್ ಲಾ ಕಾಲೇಜಿನಿಂದ ಕಾನೂನು ಪದವಿ ಗಳಿಸಿದರು. 1957ರಲ್ಲಿ ಮೈಸೂರು ಹೈಕೋರ್ಟ್‌ನಲ್ಲಿ ವಕೀಲರಾಗಿ ನೋಂದಾಯಿಸಿಕೊಂಡರು. 1961ರಿಂದ 1965ರವರೆಗೆ ಮಂಗಳೂರಿನಲ್ಲಿ ಅಪರ ಸರ್ಕಾರಿ ಅಭಿಯೋಜಕರಾಗಿ ಸೇವೆ, 1967ರಿಂದ 1972ರವರೆಗೆ ದ.ಕ. ಜಿಲ್ಲೆಯಲ್ಲಿ ಜಿಲ್ಲಾ ಸರ್ಕಾರಿ ಅಭಿಯೋಜಕರಾಗಿ ಕಾರ್ಯನಿರ್ವಹಿಸಿದ್ದರು. 1972ರಲ್ಲಿ ವಕೀಲ ವತ್ತಿಯನ್ನು ಹೈಕೋರ್ಟ್‌ಗೆ ಸ್ಥಳಾಂತರಿಸಿದ ಅವರು ಸಿವಿಲ್, ಕ್ರಿಮಿನಲ್ ಹಾಗೂ ಸಾಂವಿಧಾನಿಕ ವಿಷಯಗಳಲ್ಲಿ ಅಪಾರ ಪಾಂಡಿತ್ಯ ಪ್ರದರ್ಶಿಸಿದ್ದಾರೆ. 1979ರಿಂದ 1982ರವರೆಗೆ ರಾಜ್ಯ ಬಾರ್ ಕೌನ್ಸಿಲ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. 1989ರಲ್ಲಿ ಹೈಕೋರ್ಟ್‌ನಿಂದ ಹಿರಿಯ ವಕೀಲ ಹುದ್ದೆಗೆ ಭಾಜನರಾದ ಅವರು, ರಾಜ್ಯದ ಅತ್ಯುನ್ನತ ಕಾನೂನು ಹುದ್ದೆಯಾದ ಅಡ್ವೊಕೇಟ್ ಜನರಲ್ ಆಗಿ 5 ಬಾರಿ ಸೇವೆ ಸಲ್ಲಿಸಿದ್ದಾರೆ. 2009ರಲ್ಲಿ ಕಾನೂನು ಕ್ಷೇತ್ರಕ್ಕೆ ನೀಡಿದ ಮಹೋನ್ನತ ಕೊಡುಗೆಗಾಗಿ ಮಂಗಳೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಸಹಿತ ವಿವಿಧ ಪ್ರಶಸ್ತಿ ಪುರಸ್ಕರಗಳಿಗೆ ಭಾಜನರಾಗಿದ್ದಾರೆ.