ಕಾಸರಗೋಡು: ಕುಂಬಳೆ ಕುಂಟಂಗೇರಡ್ಕದ ಐಎಚ್ಆರ್ಡಿ ಕಾಲೇಜು ಸಮೀಪದ ಸಾರ್ವಜನಿಕ ಸ್ಥಳದಲ್ಲಿ ಜೂಜಾಟದಲ್ಲಿ ನಿರತರಾಗಿದ್ದ ಐದು ಮಂದಿಯನ್ನು ಕುಂಬಳೆ ಠಾಣೆ ಪೊಲೀಸರು ಬಂಧಿಸಿ, ಜೂಜಿಗೆ ಬಳಸಿದ್ದ 16,520 ರೂ. ನಗದು ವಶಪಡಿಸಿಕೊಂಡಿದ್ದಾರೆ. ಉಳ್ಳಾಲ ಮುಕ್ಕಾಚೇರಿಯ ಇಮ್ತಿಯಾಸ್ (43), ಕೊಯಿಪ್ಪಾಡಿ ಬದ್ರಿಯಾನಗರದ ಅಬೂಬಕ್ಕರ್ ಸಿದ್ದಿಕ್ (35), ಉಪ್ಪಿನಂಗಡಿ ಕರಾಯ ನಿವಾಸಿ ನೌಶಾದ್ ಯು.ಬಿ. (40), ಉಪ್ಪಿನಂಗಡಿ ರಾವ್ನಗರದ ಮಂಜುನಾಥ ಶೆಟ್ಟಿ (45) ಮತ್ತು ಸೋಮೇಶ್ವರದ ಮೊಹಮ್ಮದ್ ಹಾರೀಸ್ (42) ಎಂಬುವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಕಾಸರಗೋಡು: ಉಪ್ಪಳದ ಪಟ್ಟಾಡಿ ಎಂಬಲ್ಲಿ ಮನೆಯೊಂದಕ್ಕೆ ಇಲೆಕ್ಟ್ರಿಕ್ ಕೆಲಸಕ್ಕೆ ತೆರಳಿದ್ದ ಇಲೆಕ್ಟ್ರಿಷಿಯನ್, ಬಂಬ್ರಾಣ ಮೂಲಂ ಹೌಸ್ನ ಮುಹಮ್ಮದ್ ಆಸಾಫ್ (23) ಎಂಬುವರ ಗುಪ್ತಾಂಗಕ್ಕೆ ಮನೆ ಮಾಲೀಕ ತುಳಿದಿರುವ ಘಟನೆ ನಡೆದಿದೆ. ಅಸ್ವಸ್ಥಗೊಂಡ ಅವರನ್ನು ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ತನ್ನೊಂದಿಗೆ ವಾಗ್ವಾದ ನಡೆಸಿದ ಮನೆ ಮಾಲೀಕ ಗುಪ್ತಾಂಗಕ್ಕೆ ತುಳಿದಿರುವುದಾಗಿ ಮುಹಮ್ಮದ್ ಆಸಾಫ್ ದೂರಿದ್ದಾರೆ.
ಕಾಸರಗೋಡು: ಬೇಕಲ ಪೊಲೀಸ್ ಠಾಣೆ ವ್ಯಾಪ್ತಿಯ ಶಾಲೆಯೊಂದರಿಂದ ನಾಪತ್ತೆಯಾಗಿದ್ದ 16 ಮತ್ತು 17 ವರ್ಷದ ವಿದ್ಯಾರ್ಥಿನಿ ಮತ್ತು ವಿದ್ಯಾರ್ಥಿ ತಮ್ಮ ಮನಗೆ ವಾಪಸಾಗಿದ್ದಾರೆ. ಬೇಕಲ ಪೊಲೀಸ್ ಸಬ್ ಡಿವಿಷನ್ ವ್ಯಾಪ್ತಿಯ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯೊಂದರ ವಿದ್ಯಾರ್ಥಿಗಳಿಬ್ಬರು ಬುಧವಾರ ಮಧ್ಯಾಹ್ನವರೆಗೆ ತರಗತಿಯಲ್ಲಿದ್ದು, ನಂತರ ನಾಪತ್ತೆಯಾಗಿದ್ದರು. ಈ ಬಗ್ಗೆ ಶಾಲಾ ಅಧಿಕಾರಿಗಳು ಪಾಲಕರಿಗೆ ವಾಹಿತಿ ನೀಡಿದ ನಂತರ ಪೊಲೀಸರಿಗೆ ದೂರು ನೀಡಲಾಗಿತ್ತು. ತನಿಖೆ ತೀವ್ರಗೊಳಿಸುತ್ತಿದ್ದ ಮಧ್ಯೆ ಇವರಿಬ್ಬರೂ ವಾಪಸಾಗಿದ್ದಾರೆ.
ಕಾಸರಗೋಡು: ಅಬಕಾರಿ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ಸ್ಕೂಟರ್ನಲ್ಲಿ ಸಾಗಿಸುತ್ತಿದ್ದ 1.300 ಕಿಲೋ ಗಾಂಜಾ ಪತ್ತೆಹಚ್ಚಿ ವಶಪಡಿಸಿಕೊಳ್ಳಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಹೊಸದುರ್ಗ ಮೂಸ ಕ್ವಾಟ್ರರ್ಸ್ನಲ್ಲಿ ವಾಸಿಸುವ ಶರೀಫ್ ಎಂ.ಜಿ. (30) ಎಂಬಾತನನ್ನು ಬಂಧಿಸಲಾಗಿದೆ. ಆರೋಪಿ ಸಂಚಾರಕ್ಕೆ ಬಳಸಿದ್ದ ಸ್ಕೂಟರನ್ನು ಅಬಕಾರಿ ತಂಡ ವಶಕ್ಕೆ ತೆಗೆದುಕೊಂಡಿದೆ.
ಕಾಸರಗೋಡು: ಮಂಜೇಶ್ವರ ಸಮೀಪದ ಬಟ್ಟಿಪದವಿನಲ್ಲಿ ಭಾರೀ ಪ್ರವಾಣದ ಎಂಡಿಎಂಎ ವಶಪಡಿಸಿಕೊಂಡ ಪ್ರಕರಣದ ಆರೋಪಿಗಳಾದ ಉಪ್ಪಳ ನಿವಾಸಿಗಳಾದ ಮೊಹಮ್ಮದ್ ಶಿಹಾಬ್, ಮೊಹಮ್ಮದ್ ಶಿಹಾಬ್ ಹಾಗೂ ಸಫ್ವಾನ್ ಎಂಬವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಮಂಜೇಶ್ವರ ಪೊಲೀಸರು ಬಟ್ಟಿಪದವಿನ ಕಾಟೇಜ್ ಒಂದರಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ 182.120 ಗ್ರಾಂ ಎಂಡಿಎಂಎ ವಶಪಡಿಸಿಕೊಳ್ಳಲಾಗಿತ್ತು.