ಮೋನಪ್ಪ ನಾಯ್ಕ  
ದಕ್ಷಿಣ ಕನ್ನಡ

ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಅಪರಾಧಿಗೆ ಐದೂವರೆ ವರ್ಷ ಕಠಿನ ಸಜೆ

ಮಂಗಳೂರು: ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ (ಎಫ್ ಟಿ ಎಸ್ ಸಿ 1- ಪೋಕ್ಸೊ) ನ್ಯಾಯಾಲಯದಲ್ಲಿ ಸಾಬೀತಾಗಿದ್ದು, ಅಪರಾಧಿಗೆ ನ್ಯಾಯಾಧೀಶರಾದ ಮೋಹನ ಜೆ.ಎಸ್ ಅವರು ಐದೂವರೆ ವರ್ಷ ಕಠಿನ ಸಜೆ ವಿಧಿಸಿ ತೀರ್ಪು ನೀಡಿದ್ದಾರೆ.

ಬಂಟ್ವಾಳ ತಾಲೂಕು ಮಣಿನಾಲ್ಕೂರು ನಿವಾಸಿ ಮೋನಪ್ಪ ನಾಯ್ಕ (52) ಶಿಕ್ಷೆಗೊಳಗಾದ ಅಪರಾಧಿ.
ಪ್ರಕರಣದ ಹಿನ್ನೆಲೆ: ಆರೋಪಿ 2025ರ ಜೂ.23ರಂದು ಬೆಳಗ್ಗೆ ಶಾಲೆಯೊಂದರ ಬಳಿ ತೆರಳಿ ಕಾರಿಡಾರ್ ನಲ್ಲಿದ್ದ ಅಪ್ರಾಪ್ತ ಪ್ರಾಯದ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ್ದ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸ್ ನಿರೀಕ್ಷಕ ಕೃಷ್ಣಕಾಂತ ಪಾಟೀಲ ಅವರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಮೋಹನ ಜೆ.ಎಸ್ ಅವರು ಅಪರಾಧಿಗೆ ಬಿಎನ್‌ಎಸ್ ಕಲಂ 74ರ ಜತೆ 62 ರಡಿ ಎರಡೂವರೆ ವರ್ಷ ಕಠಿನ ಸಜೆ, 15,000 ರೂ.ದಂಡ, ಒಂದು ವೇಳೆ ದಂಡ ಪಾವತಿಸಲು ತಪ್ಪಿದರೆ ಹೆಚ್ಚುವರಿ 6 ತಿಂಗಳು ಸಾದಾ ಸಜೆ, ಬಿಎನ್ ಎಸ್ ಕಲಂ 75(2)(3)ರ ಜತೆ 62ರ ಅಡಿ 1 ವರ್ಷ ಕಠಿನ ಸಜೆ ಹಾಗೂ 10,000 ರೂ.ದಂಡ, ಒಂದು ವೇಳೆ ದಂಡ ಪಾವತಿಸಲು ತಪ್ಪಿದರೆ ಹೆಚ್ಚುವರಿ 3 ತಿಂಗಳು ಸಾದಾ ಸಜೆ, ಬಿನ್ ಎಸ್ ಕಲಂ 79ರಡಿ 1 ವರ್ಷ ಕಠಿನ ಸಜೆ, 5,000 ರೂ. ದಂಡ, ಒಂದು ವೇಳೆ ದಂಡ ಪಾವತಿಸಲು ತಪ್ಪಿದರೆ ಹೆಚ್ಚುವರಿ 2 ತಿಂಗಳು ಸಾದಾ ಸಜೆ, ಪೋಕ್ಸೊ ಕಾಯಿದೆಯ ಕಲಂ 12 ರ ಜತೆ 18ರಡಿ 1 ವರ್ಷ ಕಠಿನ ಸಜೆ ಮತ್ತು 10,000 ರೂ. ದಂಡ, ಒಂದು ವೇಳೆ ದಂಡ ಪಾವತಿಸಲು ತಪ್ಪಿದರೆ 3 ತಿಂಗಳು ಸಾದಾ ಸಜೆ ವಿಧಿಸಿ ತೀರ್ಪು ನೀಡಿದ್ದಾರೆ. ದಂಡದ ಒಟ್ಟು ಮೊತ್ತ 40,000 ರೂ.ಗಳಲ್ಲಿ 35,000 ರೂ.ಗಳನ್ನು ಕಿರುಕುಳಕ್ಕೊಳಗಾದ ಬಾಲಕಿಗೆ ಪರಿಹಾರವಾಗಿ ನೀಡಬೇಕು ಎಂದು ಶುಕ್ರವಾರ ಆದೇಶ ಹೊರಡಿಸಿದ್ದಾರೆ. ಪ್ರಾಸಿಕ್ಯೂಷನ್ ಪರವಾಗಿ ಪೋಕ್ಸೊ ವಿಶೇಷ ಸರ್ಕಾರಿ ಅಭಿಯೋಜಕಿ ಸಹನಾದೇವಿ ಬೋಳೂರು ಅವರು ಸಾಕ್ಷಿ ವಿಚಾರಣೆ ನಡೆಸಿ ವಾದ ಮಂಡಿಸಿದ್ದಾರೆ.