ದಕ್ಷಿಣ ಕನ್ನಡ

ಬೈಕ್ ಡಿಕ್ಕಿಯಾಗಿ ಮೀನುಗಾರ ಸಾವು

ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಬೈಂದೂರು: ರಾಷ್ಟ್ರೀಯ ಹೆದ್ದಾರಿ 66ರ ವತ್ತಿನೆಣೆ ಬಳಿ ಶನಿವಾರ ಮಧ್ಯಾಹ್ನ ಡಿವೈಡರ್‌ಗೆ ಬೈಕ್ ಡಿಕ್ಕಿಯಾಗಿ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಭಟ್ಕಳ ತಾಲೂಕಿನ ಬೆಳ್ಳಿ ನಿವಾಸಿ ಉಮೇಶ ಮಂಜುನಾಥ ಮೊಗೇರ್(43) ಮೃತಪಟ್ಟವರು.

ಅವರು ಪತ್ನಿಯೊಂದಿಗೆ ಕುಂದಾಪುರ ಆಸ್ಪತ್ರೆಗೆ ತೆರಳಿ ವಾಪಸ್ ಭಟ್ಕಳದ ಮನೆಗೆ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ. ಬೈಕ್‌ನಲ್ಲಿದ್ದ ಪತ್ನಿ ಪದ್ಮಾ ಮೊಗೇರ್ ಅವರಿಗೆ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಕುಂದಾಪುರ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಂಜುನಾಥ ಅವರು ಮೀನುಗಾರಿಕೆ ವೃತ್ತಿ ಮಾಡುತ್ತಿದ್ದು, ರಾತ್ರಿ ವೇಳೆ ಮೀನುಗಾರಿಕೆಗೆ ತೆರಳಿ ಬೆಳಗ್ಗೆ ಬೈಕ್‌ನಲ್ಲಿ ಕುಂದಾಪುರಕ್ಕೆ ತೆರಳಿದ್ದರು ಎನ್ನಲಾಗಿದೆ. ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.