ವಿಜಯವಾಣಿ ಸುದ್ದಿಜಾಲ ಕುಂಬಳೆ
ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಆಧುನಿಕ ಮೀನು ಮಾರುಕಟ್ಟೆ ಕಟ್ಟಡ ಸಿದ್ಧಗೊಂಡಿದ್ದರೂ, ಅಗತ್ಯ ಮೂಲಸೌಕರ್ಯಗಳ ಕೊರತೆಯಿಂದಾಗಿ ಇನ್ನೂ ಉದ್ಘಾಟನೆಯ ಭಾಗ್ಯ ಕಂಡಿಲ್ಲ.
ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ನಡಿ 1.1 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಕುಂಬಳೆ ಪೇಟೆಯ ನವೀಕೃತ ಮೀನು ಮಾರುಕಟ್ಟೆ ಇದೀಗ ನಿರ್ವಹಣಾ ಲೋಪ ಹಾಗೂ ಮೂಲಸೌಕರ್ಯಗಳ ಕೊರತೆಯಿಂದಾಗಿ ಸಾರ್ವಜನಿಕರ ಬಳಕೆಗೆ ಲಭ್ಯವಾಗದೆ ಉಳಿದಿದೆ. ಮತ್ತೊಂದೆಡೆ ಕಟ್ಟಡದ ಮುಂಭಾಗದಲ್ಲಿ ತ್ಯಾಜ್ಯ ರಾಶಿ ಬಿದ್ದಿದ್ದು, ಕೊಳಚೆ ನೀರು ಹರಿದು ದುರ್ವಾಸನೆ ಹರಡುತ್ತಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಮಾರುಕಟ್ಟೆಯ ಕಟ್ಟಡ ನಿರ್ಮಾಣ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಆದರೆ ಕೊಳಚೆ ನೀರಿನ ಸಮರ್ಪಕ ವಿಲೇವಾರಿ, ಶೌಚಗೃಹ, ಶುದ್ಧ ನೀರು ಹಾಗೂ ಬೆಳಕಿನ ವ್ಯವಸ್ಥೆ ಸೇರಿದಂತೆ ಅಗತ್ಯ ಕಾಮಗಾರಿಗಳನ್ನು ಇನ್ನೂ ಪೂರ್ಣಗೊಳಿಸದಿರುವುದು ಮಾರುಕಟ್ಟೆಯ ಕಾರ್ಯಾರಂಭಕ್ಕೆ ಅಡ್ಡಿಯಾಗಿದೆ. ಜನರ ಅನುಕೂಲಕ್ಕಾಗಿ ನಿರ್ಮಿಸಲಾದ ಕಟ್ಟಡವೇ ಇದೀಗ ತ್ಯಾಜ್ಯ ಮತ್ತು ಕೊಳಚೆ ನೀರಿನ ಸಮಸ್ಯೆಯಿಂದಾಗಿ ಉಪಯೋಗಕ್ಕಿಲ್ಲದಂತಾಗಿದೆ.
ಮೀನು ಮಾರಾಟಗಾರರು ಅಂಗಡಿಗಳ ಮುಂಭಾಗ ಹಾಗೂ ರಸ್ತೆ ಬದಿಗಳಲ್ಲಿ ವ್ಯಾಪಾರ ನಡೆಸುವುದರಿಂದ ಕುಂಬಳೆ ಪೇಟೆಯಲ್ಲಿ ಸಂಚಾರ ದಟ್ಟಣೆ ಉಂಟಾಗುತ್ತಿತ್ತು. ಸಾರ್ವಜನಿಕರ ಓಡಾಟಕ್ಕೂ ಅಡಚಣೆಯಾಗುತ್ತಿತ್ತು. ಈ ಸಮಸ್ಯೆಗೆ ಪರಿಹಾರ ಕಲ್ಪಿಸುವ ಉದ್ದೇಶದಿಂದ ಸುಸಜ್ಜಿತ ಮೀನು ಮಾರುಕಟ್ಟೆ ನಿರ್ಮಿಸುವ ಯೋಜನೆ ರೂಪಿಸಲಾಗಿತ್ತು.
ಹಾರ್ಬರ್ ಇಂಜಿನಿಯರಿಂಗ್ ಇಲಾಖೆಯ ನೇರ ಮೇಲ್ವಿಚಾರಣೆಯಲ್ಲಿ ಕಾಮಗಾರಿ ಕೈಗೊಳ್ಳಲಾಗಿದ್ದು, ಹಳೆಯ ಮೀನು ಮಾರುಕಟ್ಟೆಯನ್ನು ಸಂಪೂರ್ಣ ತೆರವುಗೊಳಿಸಿ ಹೊಸ ಕಟ್ಟಡ ನಿರ್ಮಿಸಲಾಗಿದೆ. ಮೀನು, ಮಾಂಸ ಹಾಗೂ ತರಕಾರಿ ಮಾರಾಟಕ್ಕೆ ಒಂದೇ ಸೂರಿನಡಿ ವ್ಯವಸ್ಥೆ ಕಲ್ಪಿಸುವ ಸಮಗ್ರ ಯೋಜನೆ ಇದಾಗಿದೆ.
ಕಟ್ಟಡ ನಿರ್ಮಾಣಕ್ಕೆ ದೊಡ್ಡ ಮೊತ್ತದ ಹಣ ವೆಚ್ಚವಾಗಿದ್ದರೂ ಮಾರುಕಟ್ಟೆ ಬಳಕೆಗೆ ಬಾರದಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ. ತ್ಯಾಜ್ಯ ವಿಲೇವಾರಿ ಮತ್ತು ಕೊಳಚೆ ನೀರಿನ ಸಮಸ್ಯೆಯನ್ನು ತಕ್ಷಣ ಪರಿಹರಿಸಿ, ಬಾಕಿ ಉಳಿದಿರುವ ಮೂಲಸೌಕರ್ಯ ಕಾಮಗಾರಿಗಳನ್ನು ಪೂರ್ಣಗೊಳಿಸಿ ಮಾರುಕಟ್ಟೆಯನ್ನು ಶೀಘ್ರ ಲೋಕಾರ್ಪಣೆಗೊಳಿಸಬೇಕು ಎಂದು ಸ್ಥಳೀಯರು ಹಾಗೂ ವ್ಯಾಪಾರಿಗಳು ಒತ್ತಾಯಿಸಿದ್ದಾರೆ.
ಮೀನು ಮಾರುಕಟ್ಟೆಯಿಂದ ಹೊರಬರುವ ಕೊಳಚೆ ನೀರನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಸೂಕ್ತ ಚರಂಡಿ ವ್ಯವಸ್ಥೆ ಇನ್ನೂ ಪೂರ್ಣಗೊಂಡಿಲ್ಲ. ಈಗಿರುವ ಸಣ್ಣ ಚರಂಡಿ ಇಷ್ಟು ದೊಡ್ಡ ಮಾರುಕಟ್ಟೆಯ ಅಗತ್ಯಕ್ಕೆ ಸಾಕಾಗುವುದಿಲ್ಲ ಎಂದು ಮೀನು ಮಾರಾಟಗಾರರು ಹೇಳುತ್ತಾರೆ. ಕೊಳಚೆ ನೀರು ನಿಂತು ದುರ್ವಾಸನೆ ಹರಡುತ್ತಿರುವುದರಿಂದ ಮಾರುಕಟ್ಟೆಯ ಸುತ್ತಮುತ್ತಲಿನ ವ್ಯಾಪಾರಿಗಳಿಗೂ ತೊಂದರೆಯಾಗುತ್ತಿದೆ. ಮಾರುಕಟ್ಟೆಯಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಅಗತ್ಯ ಶೌಚಗೃಹ, ಶುದ್ಧ ನೀರು ಹಾಗೂ ಸಮರ್ಪಕ ಬೆಳಕಿನ ವ್ಯವಸ್ಥೆಗಳನ್ನೂ ಕಲ್ಪಿಸಬೇಕಿದೆ.
ಯೋಜನೆಯ ಬಹುತೇಕ ಕಾಮಗಾರಿ ಪೂರ್ಣಗೊಂಡಿದೆ. ಮೀನು ಮಾರಾಟ ಕೇಂದ್ರವಾಗಿರುವುದರಿಂದ ನೈರ್ಮಲ್ಯ ನಿರ್ವಹಣೆಗಾಗಿ ಅತ್ಯಾಧುನಿಕ ಯಂತ್ರವೊಂದನ್ನು ಅಳವಡಿಸಲಾಗುತ್ತಿದೆ. ಆದರೆ ಆ ಯಂತ್ರದ ರವಾನೆಯಲ್ಲಿ ಸ್ವಲ್ಪ ವಿಳಂಬವಾಗಿರುವುದರಿಂದ ಸಮಸ್ಯೆ ಎದುರಾಗಿದೆ. ನಿರ್ಮಾಣ ಕಾರ್ಯ ಕೈಗೊಂಡಿರುವ ಹಾರ್ಬರ್ ಇಂಜಿನಿಯರಿಂಗ್ ಮತ್ತು ನಿರ್ವಹಣಾ ವಿಭಾಗಕ್ಕೆ ಶೀಘ್ರ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ಈ ಕಾರ್ಯ ಪೂರ್ಣಗೊಂಡ ತಕ್ಷಣ ಮಾರುಕಟ್ಟೆಯನ್ನು ಉದ್ಘಾಟಿಸಲಾಗುವುದು.ವಿ.ಪಿ.ಅಬ್ದುಲ್ ಖಾದರ್ ಅಧ್ಯಕ್ಷ ಕುಂಬಳೆ ಗ್ರಾ.ಪಂ.