ಸಕಲೇಶಪುರ-ಸುಬ್ರಹ್ಮಣ್ಯ ರಸ್ತೆ ಘಾಟ್ ವಿಭಾಗದಲ್ಲಿ ಪ್ರಾಯೋಗಿಕವಾಗಿ ಸಂಚರಿಸಿದ ವಂದೇ ಭಾರತ್ ರೈಲು. 
ದಕ್ಷಿಣ ಕನ್ನಡ

ವಂದೇ ಭಾರತ್ ರೈಲು ಘಾಟ್‌ನಲ್ಲಿ ಮೊದಲ ಪ್ರಾಯೋಗಿಕ ಸಂಚಾರ ಯಶಸ್ವಿ

ಮಂಗಳೂರು : ಬೆಂಗಳೂರು - ಮಂಗಳೂರು ಮಾರ್ಗದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ಸೇವೆ ಆರಂಭಿಸುವ ಮುನ್ನದ ಸಿದ್ಧತೆಯಾಗಿ, ದಕ್ಷಿಣ ಪಶ್ಚಿಮ ರೈಲ್ವೆಯ ಮೈಸೂರು ವಿಭಾಗವು ಹಾಸನ-ಮಂಗಳೂರು ರೈಲು ಮಾರ್ಗದ ಸಕಲೇಶಪುರ-ಸುಬ್ರಹ್ಮಣ್ಯ ರಸ್ತೆ ಘಾಟ್ ವಿಭಾಗದಲ್ಲಿ ವಂದೇ ಭಾರತ್ ರೈಲಿನ ಮೊದಲ ಪ್ರಾಯೋಗಿಕ ಸಂಚಾರವನ್ನು ಬುಧವಾರ ಯಶಸ್ವಿಯಾಗಿ ನಡೆಸಿತು.

ಸ್ವಯಂಚಾಲಿತ ತುರ್ತು ಬ್ರೇಕ್ ವ್ಯವಸ್ಥೆ ಅಳವಡಿಸಿರುವ ವಿಶೇಷ 20 ಬೋಗಿಗಳ ವಂದೇ ಭಾರತ್ ರೇಕ್ ಬೆಳಗ್ಗೆ 6.42ಕ್ಕೆ ಸಕಲೇಶಪುರ ರೈಲು ನಿಲ್ದಾಣದಿಂದ ಹೊರಟು, 10.55ಕ್ಕೆ ಸುಬ್ರಹ್ಮಣ್ಯ ರಸ್ತೆ ನಿಲ್ದಾಣ ತಲುಪಿತು ಎಂದು ಮೈಸೂರು ವಿಭಾಗದ ರೈಲ್ವೆ ವಿಭಾಗೀಯ ವ್ಯವಸ್ಥಾಪಕ ಮುದಿತ್ ಮಿತ್ತಲ್ ತಿಳಿಸಿದ್ದಾರೆ.
ಸುಮಾರು 55 ಕಿ.ಮೀ. ಉದ್ದದ ಘಾಟ್ ಮಾರ್ಗದಲ್ಲಿ ರೈಲಿನ ವೇಗ ನಿಯಂತ್ರಣ, ನಿಯಂತ್ರಣ ಸಾಮರ್ಥ್ಯ ಹಾಗೂ ತುರ್ತು ಬ್ರೇಕಿಂಗ್ ಅಂತರ ಸೇರಿದಂತೆ ಹಲವು ಅಂಶಗಳನ್ನು ರೈಲ್ವೆ ಸಚಿವಾಲಯದ ಸಂಶೋಧನೆ, ವಿನ್ಯಾಸ ಮತ್ತು ಮಾನಕ ಸಂಸ್ಥೆ ತಜ್ಞರ ತಂಡ ಪರಿಶೀಲಿಸುತ್ತಿದೆ.
ಈ ಮಾರ್ಗದಲ್ಲಿ ಗರಿಷ್ಠ ಅನುಮತಿಸಲಾದ ವೇಗ ಗಂಟೆಗೆ 30 ಕಿ.ಮೀ. ಆಗಿದ್ದು, ಇದಕ್ಕೆ ಮುಖ್ಯ ಕಾರಣ ಮಾರ್ಗದಲ್ಲಿರುವ ಅತ್ಯಂತ ತೀವ್ರವಾದ 1:50 ಇಳಿಜಾರು/ಏರಿಜಾರು. ವಂದೇ ಭಾರತ್ ರೇಕ್‌ನಲ್ಲಿ ಅಳವಡಿಸಿರುವ ಅಉಆ ವ್ಯವಸ್ಥೆಯನ್ನು 30 ಕಿ.ಮೀ. ವೇಗಕ್ಕೆ ಪೂರ್ವನಿಗದಿಪಡಿಸಲಾಗಿದೆ.
ಆಗಸ್ಟ್ 20ರವರೆಗೆ ಪರೀಕ್ಷೆಗಳು
ಆಗಸ್ಟ್ 13ರಂದು ಹಾಗೂ ಆಗಸ್ಟ್ 17ರಿಂದ 19ರವರೆಗೆ ಘಾಟ್ ವಿಭಾಗದಲ್ಲಿ ಮತ್ತಷ್ಟು ಪ್ರಾಯೋಗಿಕ ಸಂಚಾರಗಳನ್ನು ನಡೆಸಲಾಗುತ್ತದೆ. ಏರಿಕೆ ಮತ್ತು ಇಳಿಜಾರು ಎರಡೂ ದಿಕ್ಕುಗಳಲ್ಲಿ ರೈಲಿನ ಕಾರ್ಯಕ್ಷಮತೆಯನ್ನು ಪರೀಕ್ಷಿಸಲಾಗುತ್ತದೆ.
ಪ್ರಾಯೋಗಿಕ ಪರೀಕ್ಷೆಗಳ ಅವಧಿಯಲ್ಲಿ ಯಶವಂತಪುರಮಂಗಳೂರು ಜಂಕ್ಷನ್/ಕಾರವಾರ ನಡುವೆ ಸಂಚರಿಸುವ ಹಗಲು ರೈಲುಗಳನ್ನು ಗರಿಷ್ಠ 30 ನಿಮಿಷಗಳವರೆಗೆ ನಿಯಂತ್ರಿಸುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿಶೇಷವಾಗಿ ನಿರ್ಮಿಸಲಾದ ರೇಕ್
ಈ ಮಾರ್ಗದಲ್ಲಿ ಸಾಮಾನ್ಯ ಕೋಚ್ ರೈಲುಗಳು ಮತ್ತು ಸರಕು ರೈಲುಗಳ ವೇಗ ನಿಯಂತ್ರಣಕ್ಕಾಗಿ ಇದುವರೆಗೆ ಬ್ಯಾಂಕರ್ ಲೋಕೋಮೋಟಿವ್‌ಗಳನ್ನು ಬಳಸಲಾಗುತ್ತಿತ್ತು. ಘಾಟ್ ಏರುವಾಗ ಅಥವಾ ಇಳಿಯುವಾಗ ಹೆಚ್ಚುವರಿ ಲೋಕೋಮೋಟಿವ್‌ಗಳನ್ನು ರೈಲಿಗೆ ಜೋಡಿಸಿ ವೇಗವನ್ನು 30 ಕಿ.ಮೀ.ಗೆ ನಿಯಂತ್ರಿಸಲಾಗುತ್ತಿತ್ತು.
ಆದರೆ ವಂದೇ ಭಾರತ್ ರೇಕ್‌ಗೆ ತಾಂತ್ರಿಕ ಹಾಗೂ ವಿನ್ಯಾಸದ ಕಾರಣಗಳಿಂದ ಬ್ಯಾಂಕರ್ ಲೋಕೋಮೋಟಿವ್‌ಗಳನ್ನು ಜೋಡಿಸಲು ಸಾಧ್ಯವಿಲ್ಲ. ಹೀಗಾಗಿ ಚೆನ್ನೈನ ಇಂಟಿಗ್ರಲ್ ಕೋಚ್ ಫ್ಯಾಕ್ಟರಿ ವಿಶೇಷವಾಗಿ ನಿರ್ಮಿಸಿದ 20 ಬೋಗಿಗಳ ವಂದೇ ಭಾರತ್ ರೇಕ್ ಅನ್ನು ಈ ಪರೀಕ್ಷೆಗಾಗಿ ಬಳಸಲಾಗುತ್ತಿದೆ.
ಪ್ರಾಯೋಗಿಕ ಪರೀಕ್ಷೆಗಳು ಯಶಸ್ವಿಯಾಗಿ ಪೂರ್ಣಗೊಂಡು ಅಗತ್ಯ ಸುರಕ್ಷತಾ ಅನುಮತಿಗಳು ದೊರೆತರೆ, ಬೆಂಗಳೂರು-ಮಂಗಳೂರು ಹಾಗೂ ಕರಾವಳಿ ಕರ್ನಾಟಕಕ್ಕೆ ವಂದೇ ಭಾರತ್ ಸೇವೆ ಆರಂಭಿಸುವ ಸಾಧ್ಯತೆಗೆ ಇದು ಮಹತ್ವದ ಹೆಜ್ಜೆಯಾಗಲಿದೆ.