ನವ ಮಂಗಳೂರು ಬಂದರು ಪ್ರಾಧಿಕಾರದ ಸಹಯೋಗದಲ್ಲಿ ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜನ್ಮ ಜಯಂತಿ ಕಾರ್ಯಕ್ರಮ ನೆರವೇರಿತು. 
ದಕ್ಷಿಣ ಕನ್ನಡ

ಅಂಬೇಡ್ಕರ್‌ನಿಂದ ಶಿಕ್ಷಣಕ್ಕೆ ಮೊದಲ ಆಧ್ಯತೆ

ಮಂಗಳೂರು: ಅಂಬೇಡ್ಕರ್ ಜಾತ್ಯಾತೀತ ಭಾವನೆಯಿಂದ ಸಮಾಜವನ್ನು ಕಟ್ಟುವ ಕಡೆ ಗಮನ ಹರಿಸಿ ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡುವಂತೆ ಹೇಳಿದ್ದರು. ಅರಿವು ಮೂಡುವುದೇ ನಿಜವಾದ ಶಿಕ್ಷಣ. ಅರಿವಿನಿಂದ ಸಂಘಟಿತರಾದಾಗ ನೈತಿಕ ಪ್ರಜ್ಞೆ ಜಾಗೃತವಾಗುತ್ತದೆ ಎಂದು ಮಂಗಳೂರು ವಿಶ್ವವಿದ್ಯಾಲಯ ರಾಜಕೀಯ ವಿಜ್ಞಾನ ವಿಭಾಗದ ನಿವೃತ್ತ ಪ್ರಾಧ್ಯಾಪಕ ಪ್ರೊ.ದಯಾನಂದ ನಾಯಕ್ ಹೇಳಿದರು.
ನವ ಮಂಗಳೂರು ಬಂದರು ಪ್ರಾಧಿಕಾರದ ಸಹಯೋಗದಲ್ಲಿ ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜನ್ಮ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪದವಿ ಪಡೆಯುವುದೇ ಶಿಕ್ಷಣ ಅಲ್ಲ. ಮೌಲ್ಯ, ಸಿದ್ಧಾಂತ, ಆದರೆ ನಾವು ಕೊನೆ ಸ್ಥಾನವನ್ನು ನೀಡುತ್ತಿದ್ದೇವೆ. ಯಾವುದೇ ಕೆಲಸವಾದರೂ ಕೆಡವುದು ಸುಲಭ. ಆದರೆ ಕಟ್ಟುವ ಕೆಲಸ ತುಂಬಾ ಕಷ್ಟ. ಆದ್ದರಿಂದ ನಾವು ಮಾಡುವ ಪ್ರತಿಯೊಂದು ಕೆಲಸವನ್ನು ವಿವೇಚನೆಯಿಂದ ಮಾಡಬೇಕು. ಅಂಬೇಡ್ಕರ್ ಅವರು ಇದೇ ಹಾದಿಯನ್ನು ತುಳಿದರು. ಮುಟ್ಟಲು ಬಿಡದ ವ್ಯಕ್ತಿಯೇ ಶಿಕ್ಷಣಕ್ಕೆ ನೆರವಾಗುವಂತೆ ಮಾಡಿದರು. ಮುಂದೆ ಯಾರೂ ಮಾಡಲಾಗದಷ್ಟು ಪದವಿಗಳನ್ನು ಸಂಗ್ರಹಿಸಿದರು. ವಿದೇಶಕ್ಕೆ ತೆರಳಿ ಅಲ್ಲಿಯೂ ವ್ಯಾಸಂಗ ಮುಂದುವರಿಸಿದರು. ಇದೇ ನಮಗೆ ಆದರ್ಶ ಆಗಬೇಕಾಗಿದೆ. ಅವರ ಮೂರ್ತಿ ಪೂಜೆ ಮಾಡುವುದರ ಬದಲು, ಅವರ ಆದರ್ಶದ ಜೀವನವನ್ನು ಅನುಸರಿಸಬೇಕು ಎಂದರು.
ಎನ್‌ಎಂಪಿಎ ಉಪಾಧ್ಯಕ್ಷರಾದ ಎಸ್. ಶಾಂತಿ ಅಧ್ಯಕ್ಷತೆ ವಹಿಸಿದ್ದರು. ಬಂದರು ಪ್ರದೇಶದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಪುಷ್ಪಾರ್ಚನೆ ಸಲ್ಲಿಸಲಾಯಿತು. ಶಾಸಕ ಡಾ. ಭರತ್ ಶೆಟ್ಟಿ ಸೇರಿದಂತೆ, ನವ ಮಂಗಳೂರು ಬಂದರು ಪ್ರಾಧಿಕಾರ ಸಿಬ್ಬಂದಿ ವರ್ಗ, ಮಂಡಳಿ ಸದಸ್ಯರು, ಸಂಘಟನೆಗಳ ಪ್ರತಿನಿಧಿಗಳು, ಅಧಿಕಾರಿಗಳು, ನೌಕರರು ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
-------------
ಶಿಕ್ಷಣ ನೀಡದೇ ಹಿಂದುಳಿದ ಸಮುದಾಯ ಮುಂದೆ ಬರಲು ಸಾಧ್ಯವಿಲ್ಲ. ನಾವು ಸಮಷ್ಟಿಯಿಂದ ದೇಶದ ಭವಿಷ್ಯ ಕಟ್ಟುವ ಕೆಲಸದಲ್ಲಿ ನಿರತರಾಗಬೇಕು. ಅಂಬೇಡ್ಕರ್ ಅವರು ಇನ್ನೂ ಜೀವಂತ ಆಗಿದ್ದಾರೆ. ಅದು ಅವರ ತತ್ವ, ಸಿದ್ಧಾಂತಗಳ ಮೂಲಕ. ಆದ್ದರಿಂದಲೇ ಅಂಬೇಡ್ಕರ್ ಇಂದಿಗೂ ನಮಗೆ ಅನಿವಾರ್ಯ ಹಾಗೂ ಅಗತ್ಯ ಆಗಿರುವುದು.
-ಪ್ರೊ.ದಯಾನಂದ ನಾಯಕ್, ನಿವೃತ್ತ ಪ್ರಾಧ್ಯಾಪಕ
ರಾಜಕೀಯ ವಿಜ್ಞಾನ ವಿಭಾಗ, ಮಂಗಳೂರು ವಿವಿ