ಮೂಡುಬಿದಿರೆ ಅಗ್ನಿ ಶಾಮಕ ಘಟಕದ ಸಿಬ್ಬಂದಿ ಬೆಂಕಿ ನಂದಿಸಿದರು.  
ದಕ್ಷಿಣ ಕನ್ನಡ

ಕಿಲ್ಪಾಡಿ ಗುಡ್ಡದಲ್ಲಿ ಬೆಂಕಿ ಅವಘಡ : 15 ಎಕರೆ ವ್ಯಾಪಿಸಿದ ಅಗ್ನಿ

ಮೂಲ್ಕಿ: ಕಿಲ್ಪಾಡಿ ಕುಬೆವೂರುಗುತ್ತು ಬಳಿಯ ಗುಡ್ಡೆಗೆ ಗುರುವಾರ ಮಧ್ಯಾಹ್ನದ ವೇಳೆ ಬೆಂಕಿ ತಗುಲಿದ್ದು ನಂದಿಸಲು ಸ್ಥಳೀಯರು, ಅಗ್ನಿಶಾಮಕ ದಳ ಹರಸಾಹಸ ಪಡಬೇಕಾಯಿತು. ಕುಬೆವೂರು ಗುತ್ತು ಬಳಿಯ ಕೊಂಕಣ ರೈಲ್ವೆ ಹಳಿಯ ಬದಿಯ ಗುಡ್ಡೆ, ಕಾಡಿಗೆ ಬೆಂಕಿ ತಗುಲಿ ಧಗಧಗನೆ ಉರಿಯಲಾರಂಭಿಸಿದೆ.
ಮಧ್ಯಾಹ್ನದ ವೇಳೆ ಗಾಳಿ ಕೂಡ ಜೋರಾಗಿದ್ದು ಏಕಾಏಕಿ ಹೊತ್ತಿ ಉರಿಯುತ್ತಿದ್ದ ಬೆಂಕಿಯ ಕಿಡಿ ರೈಲ್ವೆ ಹಳಿಯ ಇನ್ನೊಂದು ಪಾರ್ಶ್ವಕ್ಕೆ ಬಂದು ಕುಬೆವೂರು ಗುತ್ತು ಮನೆ ಬಳಿ ಹೊತ್ತಿ ಉರಿಯಲು ಆರಂಭಿಸಿದಾಗ ಸ್ಥಳೀಯರಾದ ನವೀನ್ ರಾಜ್ ಮತ್ತು ಮನೆಯವರು ಆತಂಕಗೊಂಡು ಕಿಲ್ಪಾಡಿ ಗ್ರಾಪಂ ಮಾಜಿ ಅಧ್ಯಕ್ಷ ವಿಕಾಸ್ ಶೆಟ್ಟಿ ಅವರಿಗೆ ದೂರವಾಣಿ ಮೂಲಕ ತಿಳಿಸಿದ್ದಾರೆ. ಅವರು ಕಾರ್ಯಪ್ರವೃತ್ತರಾಗಿ ಕೂಡಲೇ ಮೂಡುಬಿದಿರೆಯಿಂದ ಅಗ್ನಿಶಾಮಕ ದಳ ಆಗಮಿಸಿದ್ದು, ಸ್ಥಳೀಯರಾದ ಇಮ್ತಿಯಾಜ್ ಮತ್ತಿತರರ ಜತೆ ಬೆಂಕಿ ನಂದಿಸಲು ಹರಸಾಹಸಪಟ್ಟಿದ್ದಾರೆ. ಕೊನೆಗೂ ಬೆಂಕಿ ಹತೋಟಿಗೆ ಬಂದಿದೆ.
ಸುಮಾರು ಹದಿನೈದು ಎಕರೆ ಗುಡ್ಡೆಗೆ ಬೆಂಕಿ ತಗಲಿದೆ ಎಂದು ಅಂದಾಜಿಸಲಾಗಿದೆ. ಬೆಂಕಿ ನಿಯಂತ್ರಣಕ್ಕೆ ಬಾರದಿದ್ದರೆ ಅದು ವಸತಿ ಪ್ರದೇಶಗಳಿಗೆ ಹರಡುವ ಭಯವಿತ್ತು. ಸ್ಥಳದಲ್ಲಿ ಕಿಲ್ಪಾಡಿ ಪಂಚಾಯಿತಿ ಕಾರ್ಯದರ್ಶಿ ಹರಿಶ್ಚಂದ್ರ, ಸಿಬ್ಬಂದಿ ಯತೀಶ್ ಕೊಲಕಾಡಿ ಅಗ್ನಿಶಾಮಕ ದಳ ಘಟಕದ ಜತೆಗೆ ಬೆಂಕಿ ನಂದಿಸಲು ನೆರವಾಗಿದ್ದಾರೆ.