ಶರವು ದೇವಳಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. 
ದಕ್ಷಿಣ ಕನ್ನಡ

ಕರಾವಳಿಯಲ್ಲಿ ಸಂಭ್ರಮದ ಅಂಗಾರಕ ಸಂಕಷ್ಟಹರ ಚತುರ್ಥಿ

ಮಂಗಳೂರು: ಕರಾವಳಿಯಲ್ಲಿ ಅಂಗಾರಕ ಸಂಕಷ್ಟಹರ ಚತುರ್ಥಿ ಮಹೋತ್ಸವ ಮಂಗಳವಾರ ಭಕ್ತಿ, ಸಡಗರದಿಂದ ನಡೆದಿದ್ದು, ನಗರದ ಶರವು ಶ್ರೀ ಮಹಾಗಣಪತಿ ಸೇರಿದಂತೆ ಹೆಚ್ಚಿನ ದೇವಾಲಯಗಳಲ್ಲಿ ವಿಶೇಷ ಪೂಜೆ ನೆರವೇರಿತು.

ದೇವಳಕ್ಕೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವರ ದರ್ಶನ ಪಡೆದು ಸಂಕಷ್ಟಿ ವ್ರತ ಹಾಗೂ ಪೂಜಾ ವಿಧಿಗಳಲ್ಲಿ ಪಾಲ್ಗೊಂಡರು.

ಶರವು ದೇವಳಕ್ಕೆ ಭಕ್ತರು ಬೆಳಗ್ಗಿನಿಂದಲೇ ಸರತಿ ಸಾಲಿನಲ್ಲಿ ನಿಂತು ಗರಿಕೆ, ಹಿಂಗಾರ, ಹೂ ಅರ್ಪಿಸಿ, ಪಂಚಕಜ್ಜಾಯ, ಗಣಹೋಮ, ಅಪ್ಪದ ಪೂಜೆ ಸೇವೆ ಸಲ್ಲಿಸಿ ಪ್ರಾರ್ಥನೆ ಸಲ್ಲಿಸಿದರು. 11.30ಕ್ಕೆ ದೇವರ ಗಣಹೋಮ ಪೂರ್ಣಾಹುತಿ, ಅಪ್ಪದ ಪ್ರಸಾದ ವಿತರಣೆ ನಡೆಯಿತು.

ಶರವು ದೇವಳದ ದೇವಳದ ಆಡಳಿತ ಮೊಕ್ತೇಸರ ರಾಘವೇಂದ್ರ ಶಾಸ್ತ್ರಿ ಮತ್ತು ಸುದೇಶ್ ಶಾಸ್ತ್ರಿ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಈ ಸಂದರ್ಭ ಎಸ್. ರಾಹುಲ್ ಶಾಸ್ತ್ರಿ ಮತ್ತು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

ದೇಗುಲಗಳಲ್ಲಿ ವಿಶೇಷ ಪೂಜೆ

ಕುದ್ರೋಳಿ ಶ್ರೀ ಗೋಕರ್ಣನಾಥ ದೇವಳ, ಗಣೇಶಪುರ ಮಹಾಗಣಪತಿ ದೇವಸ್ಥಾನ, ಮಂಗಳಾದೇವಿ ದೇವಸ್ಥಾನ, ಮರೋಳಿ ಸೂರ್ಯನಾರಾಯಣ ದೇವಸ್ಥಾನ, ಬೋಳೂರು ಮಾರಿಯಮ್ಮ ದೇವಸ್ಥಾನ ಸೇರಿದಂತೆ ನಗರದ ಪ್ರಮುಖ ದೇವಳಗಳಲ್ಲಿ ಅಂಗಾರಕ ಸಂಕಷ್ಟಿ ವೃತಾಚರಣೆ ಅಂಗವಾಗಿ ವಿಶೇಷ ಪೂಜೆ ನಡೆಯಿತು.