ಬೋಳಂಗಡಿ ಸರ್ಕಾರಿ ಶಾಲೆಯಲ್ಲಿ ಕಲಿಕಾ ಹಬ್ಬ ನಡೆಯಿತು. ಪ್ರಮುಖರಾದ ವಾಸು ಪೂಜಾರಿ, ಬುಷ್ರಾ, ವಸಂತಿ ಗಂಗಾಧರ್, ಸಲೀಂ ಬೋಳಂಗಡಿ, ಲೋಕೇಶ್, ಶಿವಾನಂದ ಮತ್ತಿತರರು ಉಪಸ್ಥಿತರಿದ್ದರು. 
ದಕ್ಷಿಣ ಕನ್ನಡ

ಮಕ್ಕಳಿಗೆ ಸಿಗಲಿ ಶಿಕ್ಷಣದೊಂದಿಗೆ ಸಂಸ್ಕಾರ : ವಾಸು ಪೂಜಾರಿ

ಬಂಟ್ವಾಳ: ಸರ್ಕಾರಿ ಶಾಲೆಗಳು ಉಳಿಯಬೇಕಾದರೆ ಪ್ರಾಥಮಿಕ ಶಿಕ್ಷಣ ಕಡ್ಡಾಯವಾಗಿ ಸರ್ಕಾರಿ ಶಾಲೆಗಳಲ್ಲಿ ಮಾಡಬೇಕು ಎಂಬ ಕಾನೂನು ತರುವ ಅಗತ್ಯವಿದೆ. ಮಕ್ಕಳಿಗೆ ಶಿಕ್ಷಣದ ಜತೆಗೆ ಉತ್ತಮ ಸಂಸ್ಕಾರ ಕಲಿಸುವ ಅವಶ್ಯಕತೆ ಇದೆ ಎಂದು ಬಂಟ್ವಾಳ ಪುರಸಭೆಯ ಅಧ್ಯಕ್ಷ ವಾಸು ಪೂಜಾರಿ ಹೇಳಿದರು.


ಬೋಳಂಗಡಿ ದ.ಕ. ಜಿಪಂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2025-26ನೇ ಸಾಲಿನ ಬಂಟ್ವಾಳ ನಗರ ಕ್ಲಸ್ಟರ್‌ಮಟ್ಟದ ಬುನಾದಿ ಸಾಕ್ಷರತೆ ಹಾಗೂ ಸಂಖ್ಯಾ ಜ್ಞಾನಕ್ಕೆ ಸಂಬಂಧಿಸಿದ ಕಲಿಕಾ ಹಬ್ಬದ ಅಧ್ಯಕ್ಷತೆ ವಹಿಸಿ ಮಾತನಾಡಿದರು.


ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಬುಷ್ರಾ, ಪುರಸಭಾ ಮಾಜಿ ಸದಸ್ಯೆ ವಸಂತಿ ಗಂಗಾಧರ್, ಶಾಲಾಭಿವೃದ್ಧಿ ಸಮಿತಿ ಮಾಜಿ ಅಧ್ಯಕ್ಷ ಸಲೀಂ ಬೋಳಂಗಡಿ, ಉದ್ಯಮಿಗಳಾದ ಲೋಕೇಶ್, ಶಿವಾನಂದ, ಕ್ಲಸ್ಟರ್‌ನ ವಿವಿಧ ಶಾಲಾ ಮುಖ್ಯ ಶಿಕ್ಷಕರಾದ ರೇಖಾ, ಸವಿತಾ, ಕವಿತಾ, ಗ್ರೇಸಿ, ಲವೀನ ಉಪಸ್ಥಿತರಿದ್ದರು.


ಬಂಟ್ವಾಳ ನಗರ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಸುಧಾಕರ್ ಭಟ್ ಕಲಿಕಾ ಹಬ್ಬದ ಉದ್ದೇಶ ಹಾಗೂ ಪ್ರಯೋಜನಗಳ ಬಗ್ಗೆ ವಿವರಿಸಿದರು. ಕಲಿಕಾ ಹಬ್ಬದ ಚಟುವಟಿಕೆಗಳಾದ ಗಟ್ಟಿ ಓದು, ಕಥೆ ಹೇಳುವುದು, ಆರೋಗ್ಯ ಮತ್ತು ಪೌಷ್ಟಿಕಾಂಶ, ಸಂತೋಷದಾಯಕ ಗಣಿತ, ರಸಪ್ರಶ್ನೆ, ಚಿತ್ರ ನೋಡಿ ವಿವರಿಸು, ಮಕ್ಕಳು ಮತ್ತು ಪಾಲಕರ ಸಹ ಸಂಬಂಧ ವಲಯ ಎಂಬ ವಿಶೇಷ ಚಟುವಟಿಕೆಗಳು ನಡೆದವು.


ಸಮಾರೋಪ ಸಮಾರಂಭದಲ್ಲಿ ಬೊಂಡಾಲ ಪ್ರಾಥಮಿಕ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಜನಾರ್ದನ್ ಕುಲಾಲ್ ಉಪಸ್ಥಿತರಿದ್ದರು. ಬಂಟ್ವಾಳ ನಗರ ಕ್ಲಸ್ಟರ್ ವ್ಯಾಪ್ತಿಯ ವಿವಿಧ ಶಾಲೆಗಳಿಂದ ಶಿಕ್ಷಕರು ಭಾಗವಹಿಸಿದ್ದರು. ಮುಖ್ಯ ಶಿಕ್ಷಕ ಶ್ರೀಧರ ಪೂಜಾರಿ ಸ್ವಾಗತಿಸಿದರು. ಬೊಂಡಾಲ ಶಾಲಾ ಮುಖ್ಯ ಶಿಕ್ಷಕಿ ರೇಖಾ ಸಿ.ಎಚ್. ವಂದಿಸಿದರು. ಬೋಳಂಗಡಿ ಶಾಲಾ ಶಿಕ್ಷಕಿ ರೇಣುಕಾ ಬಿ.ಇ. ಕಾರ್ಯಕ್ರಮ ನಿರೂಪಿಸಿದರು.