ಯುವತಿಯನ್ನು ಕಾರಿಗೆ ಹಾಕುತ್ತಿರುವ ದೃಶ್ಯ.  
ದಕ್ಷಿಣ ಕನ್ನಡ

ಕ್ಯಾಂಪಸ್‌ನಿಂದ ವಿದ್ಯಾರ್ಥಿನಿಯ ಕಿಡ್ನಾಪ್

ಪ್ರಥಮ ಎಂಬಿಬಿಎಸ್ ಕಲಿಯುತ್ತಿದ್ದ ಮುಸ್ಲಿಂ ಯುವತಿ

ಉಳ್ಳಾಲ(ದ.ಕ.): ತಂಡವೊಂದು ವೈದ್ಯಕೀಯ ಕಾಲೇಜು ಕ್ಯಾಂಪಸ್‌ಗೆ ನುಗ್ಗಿ ವಿದ್ಯಾರ್ಥಿನಿಯನ್ನು ಎತ್ತಿ ಕಾರಿನೊಳಗೆ ಹಾಕಿ ಕರೆದೊಯ್ದ ಘಟನೆ ದೇರಳಕಟ್ಟೆ ಕಣಚೂರು ಕ್ಯಾಂಪಸ್‌ನಲ್ಲಿ ನಡೆದಿದ್ದು, ಇದರ ವಿಡಿಯೋ ವೈರಲ್ ಆಗಿದೆ.

ಕಣಚೂರು ಮೆಡಿಕಲ್ ಕಾಲೇಜಿನ ಪ್ರಥಮ ಎಂಬಿಬಿಎಸ್‌ನಲ್ಲಿ ಕಲಿಯುತ್ತಿರುವ ಮುಸ್ಲಿಂ ವಿದ್ಯಾರ್ಥಿನಿಯೊಬ್ಬಳನ್ನು ಆಕೆಯ ಸಂಬಂಧಿಕರು ಬಲವಂತವಾಗಿ ಕಾರಿನಲ್ಲಿ ಹಾಕಿಕೊಂಡು ಹೋಗಿದ್ದಾರೆ. ವಿದ್ಯಾರ್ಥಿನಿ ಹಿಂದು ಯುವಕನನ್ನು ಪ್ರೀತಿಸುತ್ತಿದ್ದ ಕಾರಣಕ್ಕೆ ಅಪಹರಿಸಲಾಗಿದೆ ಎನ್ನಲಾಗಿದೆ. ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದ್ದು, ಪರ-ವಿರೋಧ ಚರ್ಚೆಗೆ ಗ್ರಾಸವಾಗಿದೆ.

ಹೆತ್ತವರ ನಡುವಿನ ಭಿನ್ನಾಭಿಪ್ರಾಯ

ಘಟನೆಗೆ ಸಂಬಂಧಿಸಿ ಕಣಚೂರು ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್‌ನ ಡೀನ್ ಡಾ.ಶಹನವಾಝ್ ಮನಿಪ್ಪಾಡಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ. ಕ್ಯಾಂಪಸ್‌ನಲ್ಲಿ ನಡೆದಿರುವುದು ಅಪಹರಣವಲ್ಲ, ಹೆತ್ತವರೇ ಆಕೆಯನ್ನು ಕರೆದೊಯ್ದಿದ್ದಾರೆ. ವಿದ್ಯಾರ್ಥಿನಿ ಸರಿಯಾಗಿ ತರಗತಿಗೆ ಹಾಜರಾಗುತ್ತಿರಲಿಲ್ಲ. ಈ ಬಗ್ಗೆ ಎರಡು ದಿನಗಳ ಹಿಂದೆ ಆಕೆಯ ಹೆತ್ತವರು ಕಾಲೇಜಿಗೆ ಬಂದು ವಿಚಾರಿಸಿದ್ದರು. ಅಂದು ವಿದ್ಯಾರ್ಥಿನಿ ಕಾಲೇಜಿಗೆ ಬಾರದೆ ಪಾಂಡೇಶ್ವರ ಪೊಲೀಸ್ ಠಾಣೆಗೆ ತೆರಳಿ ಹೆತ್ತವರ ವಿರುದ್ಧ ದೂರು ನೀಡಿದ್ದಳು. ಆಕೆ ಅಂದು ಹಾಸ್ಟೆಲ್‌ನಲ್ಲಿ ಇರದ ಕಾರಣ ನಾವು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೆವು. ಬಳಿಕ ಪಾಂಡೇಶ್ವರ ಠಾಣೆ ಪೊಲೀಸರ ಮಾಹಿತಿ ಮೇರೆಗೆ ಉಳ್ಳಾಲ ಪೊಲೀಸರು ವಿದ್ಯಾರ್ಥಿನಿಯನ್ನು ಕರೆತಂದಿದ್ದರು. ವಿದ್ಯಾರ್ಥಿನಿ ಮತ್ತು ಆಕೆಯ ಹೆತ್ತವರ ನಡುವಿನ ಭಿನ್ನಾಭಿಪ್ರಾಯವೇ ಘಟನೆಗೆ ಕಾರಣವಾಗಿದೆ. ಘಟನೆಯ ವಿಡಿಯೋವನ್ನು ತಪ್ಪಾಗಿ ಬಿಂಬಿಸಿ ಪ್ರಸಾರ ಮಾಡುವ ಮೂಲಕ ಸಂಸ್ಥೆ ಘನತೆಗೆ ಧಕ್ಕೆ ತರಲಾಗಿದೆ ಎಂದು ಡಾ.ಶಹನವಾಝ್ ಮನಿಪ್ಪಾಡಿ ತಿಳಿಸಿದ್ದಾರೆ.

ವಿದ್ಯಾರ್ಥಿನಿ ಕೇರಳದಲ್ಲಿ ಪತ್ತೆ

ಬಲವಂತವಾಗಿ ಕರೆದೊಯ್ಯಲ್ಪಟ್ಟ ವಿದ್ಯಾರ್ಥಿನಿಯನ್ನು ಕೇರಳದಲ್ಲಿರುವ ಸಂಬಂಧಿಕರ ಮನೆಯಿಂದ ರಕ್ಷಿಸಲಾಗಿದೆ. ಆಕೆಯ ಹೇಳಿಕೆ ದಾಖಲಿಸಿಕೊಳ್ಳಲಾಗಿದ್ದು, ನಾನು ಕುಟುಂಬದ ಬಳಿಗೆ ಹೋಗಲು ಇಷ್ಟಪಡುವುದಿಲ್ಲ ಎಂದು ತಿಳಿಸಿದ್ದಾಳೆ. ಆಕೆಯನ್ನು ವೈದ್ಯಕೀಯ ಪರೀಕ್ಷೆಗೆ ಕರೆದೊಯ್ಯಲಾಗಿದ್ದು, ಅಲ್ಲಿಂದ ಪೊಲೀಸ್ ರಕ್ಷಣೆಯೊಂದಿಗೆ ಆಕೆ ಬಯಸುವ ಸ್ಥಳಕ್ಕೆ ಅಥವಾ ಸಾಂತ್ವನ ಕೇಂದ್ರಕ್ಕೆ ಕಳುಹಿಸಲಾಗುತ್ತದೆ. ಯಾರೇ ಆದರೂ ಪ್ರಾಯಪ್ರಬುದ್ಧರಾದ ಬಳಿಕ ಅವರ ಇಚ್ಛೆಯಂತೆ ಮುಂದುವರಿಯಲು ಹಕ್ಕಿದೆ. ವಿದ್ಯಾರ್ಥಿನಿಯೂ ತನ್ನ ಇಚ್ಛೆಯಂತೆ ಮುಂದುವರಿಯಬಹುದು. ಆದರೆ ಆಕೆಯ ಇಚ್ಛೆಗೆ ವಿರುದ್ಧವಾಗಿ ಮನೆಯವರು ಅಪಹರಣ ಮಾಡಿದ್ದರೆ ಅವರ ವಿರುದ್ಧ ಕೇಸು ದಾಖಲಿಸಿ ಕ್ರಮ ಜರುಗಿಸುತ್ತೇವೆ. ಈ ಅಪರಾಧಕ್ಕೆ ಏಳು ವರ್ಷಕ್ಕಿಂತ ಕಡಿಮೆ ಅವಧಿಯ ಶಿಕ್ಷೆ ವಿಧಿಸಲು ಅವಕಾಶವಿದೆ. ಇಬ್ಬರು ಆರೋಪಿಗಳನ್ನು ಠಾಣೆಗೆ ಕರೆತರಲಾಗಿದ್ದು, ಅವರಿಗೆ ಬಿಎನ್‌ಎಸ್ ಅಡಿ ನೋಟಿಸ್ ನೀಡಲಾಗುವುದು ಎಂದು ಪೊಲೀಸ್ ಆಯುಕ್ತ ಸುಧೀರ್ ರೆಡ್ಡಿ ತಿಳಿಸಿದ್ದಾರೆ.