ಕಾಸರಗೋಡು ಜಿಲ್ಲೆಯ ಅಗ್ನಿಶಾಮಕ ದಳದ ಮೊದಲ ಮಹಿಳಾ ಬ್ಯಾಚ್‌ನ ಸದಸ್ಯರು.
- ವಿಪತ್ತು ನಿರ್ವಹಣೆಗೆ ಕಾಸರಗೋಡಿನಲ್ಲಿ ಸಜ್ಜಾಗಿದೆ ಸ್ತ್ರೀ ಶಕ್ತಿ
- ಇದೇ ಮೊದಲ ಬಾರಿ ಮಹಿಳಾ ಸಿಬ್ಬಂದಿಯಗಳ ನೇಮಕ
- ಕೆಲವು ತಿಂಗಳುಗಳಿಂದ ಕಾರ್ಯಾಚರಣೆ
ಬೆಂಕಿ, ಪ್ರವಾಹ ಸೇರಿದಂತೆ ವಿಪತ್ತು ನಿರ್ವಹಣೆ ವಿರುದ್ಧ ಸೆಣಸಾಟಕ್ಕೆ ಮಹಿಳಾ ಸಿಬ್ಬಂದಿ ಕೈಜೋಡಿಸಲಿದ್ದಾರೆ. ಇದೇ ಮೊದಲ ಬಾರಿ ಅಗ್ನಿಶಾಮಕ ದಳಕ್ಕೆ ಮಹಿಳಾ ಸಿಬ್ಬಂದಿಯನ್ನು ನೇಮಿಸಿಕೊಳ್ಳಲಾಗಿದ್ದು, ಕೆಲವು ತಿಂಗಳುಗಳಿಂದ ಮಹಿಳಾ ತಂಡ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದೆ.
ಕಾಸರಗೋಡು ಅಗ್ನಿಶಾಮಕ ದಳದಲ್ಲಿ ಐವರು ಮಹಿಳಾ ಸಿಬ್ಬಂದಿ ಇರುವ ತಂಡ ತಯಾರಾಗಿದ್ದು, ಇವರಲ್ಲಿ ತಿರುವನಂತಪುರದ ಅರುಣಾ ಪಿ.ನಾಯರ್ ಹೊರತುಪಡಿಸಿದರೆ, ಉಳಿದೆಲ್ಲ ಸಿಬ್ಬಂದಿ ಕಾಸರಗೋಡು ನಿವಾಸಿಗಳು. ಅರುಣಾ ಪಿ.ನಾಯರ್ ತಮ್ಮ ತರಬೇತಿ ಪೂರೈಸಿ ದೂರದ ತಿರುವನಂತಪುರದಿಂದ ಕಾಸರಗೋಡಿಗೆ ಬಂದು ಅಗ್ನಿಶಾಮಕ ದಳದ ಸಮವಸ್ತ್ರ ಧರಿಸಿ ಸವಾಲುಗಳನ್ನು ಎದುರಿಸಲು ಸಜ್ಜಾಗಿದ್ದಾರೆ.
ಇವರೊಂದಿಗೆ ಕಾಸರಗೋಡಿನ ಬೇಡಡ್ಕ ಮುನ್ನಾಡ್‌ನ ಕೆ.ಶ್ರೀಜಿಶಾ, ಈಸ್ಟ್ ಎಳೇರಿ ಕೊಲ್ಲಾಡ ನಿವಾಸಿ ಒ.ಕೆ.ಅನುಶ್ರೀ, ಕುಟ್ಟಿಕೋಲ್ ಆನಕಲ್ಲಿನ ಒಟ್ಟಮಾವುಂಗಲ್ ನಿವಾಸಿ ಪ್ರೀತಿ ಪ್ರಕಾಶ್ ಇದ್ದಾರೆ. ಅಗ್ನಿಶಾಮಕ ಸೇವೆಯಲ್ಲಿ ಮಹಿಳೆಯರನ್ನು ಸೇರಿಸಿಕೊಳ್ಳುವ ಬಗ್ಗೆ 2018 ಸೆಪ್ಟೆಂಬರ್‌ನಲ್ಲಿ ನಡೆದ ಸಚಿವ ಸಂಪುಟ ಸಭೆ ನೀರ್ಧರಿಸಿತ್ತು. ಕಾಸರಗೋಡಿನ ಅಗ್ನಿಶಾಮಕ ದಳಕ್ಕೆ ಮೊದಲ ಬಾರಿಗೆ ಐವರು ಮಹಿಳಾ ಸಿಬ್ಬಂದಿ ಸೇರುವಂತಾಗಿದೆ.
ಜಿಲ್ಲೆಯ ವಿವಿಧ ಅಗ್ನಿಶಾಮಕ ಠಾಣೆಗಳಿಗೆ ಪ್ರತಿ ವರ್ಷ ಸರಾಸರಿ 1,700 ತುರ್ತು ಕರೆಗಳು ಬರುತ್ತವೆ. ಕಾರ್ಯಾಚರಣೆಗಳ ಜತೆಗೆ ವಿದ್ಯಾರ್ಥಿಗಳನ್ನು ಕೇಂದ್ರೀಕರಿಸಿ ವ್ಯಾಪಕ ಜಾಗೃತಿ ತರಗತಿ ಆಯೋಜಿಸಲಾಗುತ್ತಿದೆ. ಕಳೆದ ಕೆಲವು ತಿಂಗಳಿಂದ ಮಹಿಳಾ ಸಿಬ್ಬಂದಿ ಸೇವೆಯೂ ಅಗ್ನಿಶಾಮಕ ದಳಕ್ಕೆ ಸೇರ್ಪಡೆಯಾಗಿದ್ದು, ಮಹಿಳಾ ತಂಡ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ.
ತರಬೇತಿ ಸಮಯದಲ್ಲಿ ಸ್ಕೂಬಾ ಡೈವಿಂಗ್ ಮತ್ತು ನೀರಿನಲ್ಲಿ ರಕ್ಷಣೆ ಖುಷಿ ನೀಡಿತು. ಅತ್ಯಂತ ಕಠಿಣ ಹಾಗೂ ಸವಾಲಿನ ಕೆಲಸವೆಂದೇ ಪರಿಗಣಿಸಲಾಗಿರುವ ಈ ತರಬೇತಿ ಕಾಲದಲ್ಲಿದ್ದ ಅಂಜಿಕೆ, ಆತಂಕ ಕ್ರಮೇಣ ದೂರವಾಗಿದೆ. ಇತರರ ಜೀವ ಉಳಿಸುವ ಕಾರ್ಯಾಚರಣೆ ವಿಶೇಷ ಅನುಭವ ನೀಡುತ್ತದೆ.