ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ಚಾರ್ಮಾಡಿ ಪೇಟೆ ಪ್ರದೇಶದಲ್ಲಿ ವಾಹನ ಅಪಘಾತಗಳ ಸರಣಿ ಮುಂದುವರಿದಿದ್ದು, ಮಳೆಯಿಂದ ರಸ್ತೆ ಜಾರುತ್ತಿರುವುದು ವಾಹನ ಸವಾರರಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ. ಭಾನುವಾರ ಮತ್ತು ಸೋಮವಾರ ಎರಡು ಪ್ರತ್ಯೇಕ ಅಪಘಾತಗಳು ಸಂಭವಿಸಿವೆ. ಅದೃಷ್ಟವಶಾತ್ ಎರಡೂ ಘಟನೆಗಳಲ್ಲಿ ವಾಹನಗಳಲ್ಲಿದ್ದವರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.
ಭಾನುವಾರ ಸಂಜೆ ಉಜಿರೆ ಕಡೆಗೆ ಸಂಚರಿಸುತ್ತಿದ್ದ ಕೆಎಸ್ಸಾರ್ಟಿಸಿ ಬಸ್ ಚಾರ್ಮಾಡಿ ಪೇಟೆಯಲ್ಲಿ ಕಾರಿಗೆ ಡಿಕ್ಕಿ ಹೊಡೆದು, ಬಳಿಕ ಟೆಂಪೋಗೆ ಡಿಕ್ಕಿ ಹೊಡೆದಿದೆ. ಕಾರಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಟೆಂಪೋಗೆ ಹಾನಿಯಾಗಿದೆ. ಅಪಘಾತದ ಪರಿಣಾಮ ವಾಹನಗಳ ಸಂಚಾರಕ್ಕೆ ಅಡಚಣೆಯಾಗಿ ಸುಮಾರು ಒಂದು ತಾಸು ಟ್ರಾಫಿಕ್ ಜಾಮ್ ಉಂಟಾಗಿ ಪ್ರಯಾಣಿಕರು ಹಾಗೂ ವಾಹನ ಸವಾರರು ತೊಂದರೆ ಅನುಭವಿಸುವಂತಾಯಿತು.
ಸೋಮವಾರ ಸಂಜೆ ಮತ್ತೊಂದು ಅಪಘಾತ ಸಂಭವಿಸಿದ್ದು, ಗೂಡ್ಸ್ ಟೆಂಪೋ ನಿಯಂತ್ರಣ ತಪ್ಪಿ ರಸ್ತೆಬದಿಗೆ ಉರುಳಿ ಬಿದ್ದಿದೆ. ಟೆಂಪೋದಲ್ಲಿದ್ದವರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಎರಡು ದಿನಗಳಲ್ಲಿ ಅಪಘಾತಗಳು ಸಂಭವಿಸಿರುವುದು ಚಾರ್ಮಾಡಿ ಪೇಟೆಯ ರಸ್ತೆ ಸುರಕ್ಷತೆಯ ಬಗ್ಗೆ ಆತಂಕ ಮೂಡಿಸಿದೆ.
ಚಾರ್ಮಾಡಿ ಪೇಟೆಯಲ್ಲಿ ವಾಹನ ಸಂಚಾರದ ಒತ್ತಡ ಹೆಚ್ಚಿದ್ದು, ಮಳೆಗಾಲದಲ್ಲಿ ರಸ್ತೆ ಜಾರುವ ಸಮಸ್ಯೆ ಮತ್ತಷ್ಟು ಅಪಾಯಕಾರಿಯಾಗಿದೆ. ಅಪಘಾತಗಳು ಸಂಭವಿಸಿದ ಬಳಿಕ ಕ್ರಮ ಕೈಗೊಳ್ಳುವುದಕ್ಕಿಂತ ಮುಂಚಿತವಾಗಿಯೇ ರಸ್ತೆ ಸುರಕ್ಷತೆಗೆ ಆದ್ಯತೆ ನೀಡಬೇಕೆಂಬುದು ಸ್ಥಳೀಯರ ಆಗ್ರಹವಾಗಿದೆ.
ರಾಷ್ಟ್ರೀಯ ಹೆದ್ದಾರಿ ಇಲಾಖೆ ಅಪಘಾತ ಸಂಭವಿಸುತ್ತಿರುವ ಸ್ಥಳವನ್ನು ಪರಿಶೀಲಿಸಿ, ಮಾಸಿಹೋದ ರಸ್ತೆ ಗೆರೆಗಳನ್ನು ಮತ್ತೆ ಬಳಿಯಬೇಕು. ಮಳೆಗಾಲದಲ್ಲಿ ವಾಹನಗಳು ಜಾರದಂತೆ ಸೂಕ್ತ ಸುರಕ್ಷತಾ ವ್ಯವಸ್ಥೆ ಕಲ್ಪಿಸುವುದರ ಜತೆಗೆ, ಅಪಘಾತ ಸಾಧ್ಯತೆ ಹೆಚ್ಚಿರುವ ಪ್ರದೇಶಗಳಲ್ಲಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಇಲ್ಲವಾದಲ್ಲಿ ಚಾರ್ಮಾಡಿ ಪೇಟೆಯಲ್ಲಿ ಅಪಘಾತಗಳ ಭೀತಿ ಮುಂದುವರಿಯುವ ಆತಂಕವಿದೆ.
ಚಾರ್ಮಾಡಿ ಪೇಟೆ ಪ್ರದೇಶದಲ್ಲಿ ಮಳೆ ಸುರಿಯುವ ಸಂದರ್ಭ ಹೆದ್ದಾರಿ ಹೆಚ್ಚು ಜಾರುತ್ತದೆ. ಕಳೆದ ಎರಡು-ಮೂರು ದಿನಗಳಿಂದ ಈ ಭಾಗದಲ್ಲಿ ಮಳೆ ಸುರಿಯುತ್ತಿದ್ದು, ಒದ್ದೆಯಾದ ರಸ್ತೆಯಲ್ಲಿ ವಾಹನಗಳ ನಿಯಂತ್ರಣ ಕಷ್ಟವಾಗುತ್ತಿದೆ. ಅದರಲ್ಲೂ ದೊಡ್ಡ ವಾಹನಗಳು ಸಂಚರಿಸುವ ರಾಷ್ಟ್ರೀಯ ಹೆದ್ದಾರಿ ಭಾಗದಲ್ಲಿ ಸಣ್ಣ ಅಜಾಗರೂಕತೆ ಅಪಘಾತಕ್ಕೆ ಕಾರಣವಾಗುತ್ತದೆ. ವಾಹನಗಳು ಜಾರದಂತೆ ತಡೆಯಲು ರಾಷ್ಟ್ರೀಯ ಹೆದ್ದಾರಿ ಇಲಾಖೆ ವತಿಯಿಂದ ಈ ಹಿಂದೆ ರಸ್ತೆ ಮೇಲೆ ಗೆರೆಗಳನ್ನು ಎಳೆದು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿತ್ತು. ಆದರೆ, ಡಾಂಬರು ರಸ್ತೆಯ ಮೇಲೆ ಹಾಕಲಾಗಿದ್ದ ಗೆರೆಗಳು ಮಾಸಿಹೋಗಿದ್ದು, ಮಳೆ ಬಂದಾಗ ವಾಹನಗಳ ಚಕ್ರಗಳು ಜಾರುತ್ತಿವೆ ಎಂಬುದು ಸ್ಥಳೀಯರ ಆರೋಪ.