ದಕ್ಷಿಣ ಕನ್ನಡ

ನಕಲಿ ಸೌಂದರ್ಯವರ್ಧಕ ಜಾಲ, ಎರಡು ಲಕ್ಷದಷ್ಟು ಉತ್ಪನ್ನಗಳ ವಶ

‘ಆಪರೇಶನ್ ಸೌಂದರ್ಯ’ ಹೆಸರಲ್ಲಿ ಕಾರ್ಯಾಚರಣೆ

ಕಾಸರಗೋಡು: ನಕಲಿ ಸೌಂದರ್ಯವರ್ಧಕ ಸಾಮಗ್ರಿ ಪತ್ತೆಗಾಗಿ ಕೇರಳಂ ರಾಜ್ಯಾದ್ಯಂತ ಡ್ರಗ್ಸ್ ಕಂಟ್ರೋಲ್ ಇಲಾಖೆ ಪೊಲೀಸರ ಸಹಾಯದೊಂದಿಗೆ ‘ಆಪರೇಶನ್ ಸೌಂದರ್ಯ’ ಹೆಸರಲ್ಲಿ ಕಾರ್ಯಾಚರಣೆ ಆರಂಭಿಸಿದ್ದು, ಇದುವರೆಗೆ ಎರಡು ಲಕ್ಷದಷ್ಟು ಸೌಂದರ್ಯವರ್ಧಕ ಸಾಮಗ್ರಿ ಪತ್ತೆಹಚ್ಚಿ ವಶಪಡಿಸಿಕೊಳ್ಳಲಾಗಿದೆ.

ವಶಪಡಿಸಿಕೊಂಡ ಸೌಂದರ್ಯವರ್ಧಕ ಉತ್ಪನ್ನಗಳ ಪ್ಯಾಕೆಟ್ ಮೇಲೆ ‘ಪುನಿಯಾ ಬ್ರದರ್ಸ್ ಪಾಕಿಸ್ತಾನ’ ಎಂಬುದಾಗಿ ನಮೂದಿಸಿರುವುದು ಬಿಟ್ಟರೆ, ಇತರ ಯಾವುದೇ ಮಾಹಿತಿ ಲಭ್ಯವಿಲ್ಲ. ಫೇಸ್‌ಕ್ರೀಮ್ ಒಳಗೊಂಡಂತೆ ಹಲವು ಪೆಟ್ಟಿಗೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಾಸರಗೋಡು, ಕಣ್ಣೂರು, ಪಾಲಕ್ಕಾಡ್, ತಿರುವನಂತಪುರ ಮತ್ತು ಮಲಪ್ಪುರಂ ಜಿಲ್ಲೆಗಳಲ್ಲಿ ಇಂಥ ನಕಲಿ ಸೌಂದರ್ಯವರ್ಧಕ ಪತ್ತೆಹಚ್ಚಲಾಗಿದೆ.

ಜಾಲತಾಣದ ಇನ್‌ಫ್ಲುಯೆನ್ಸರ್‌ಗಳ ಮೇಲೆ ಪೊಲೀಸರು ಇನ್ನೊಂದೆಡೆ ನಿಗಾ ಇರಿಸಿದ್ದು ಅವರ ಬ್ಯಾಂಕ್ ಖಾತೆ ಹಾಗೂ ಆನ್‌ಲೈನ್ ಫ್ಲಾೃಟ್‌ಫಾರಂ ಪರಿಶೀಲಿಸಲಾಗುತ್ತಿದೆ. ಕೆಲವೊಂದು ಖಾತೆಗಳ ವ್ಯವಹಾರ ಸ್ಥಗಿತಗೊಳಿಸಿದ್ದರೂ, ಕೆಲವೊಂದು ಬ್ಯಾಂಕ್‌ಗಳು ಇಂಥ ಮಾಹಿತಿ ನೀಡಲು ತಯಾರಾಗದಿರುವುದರಿಂದ ಪೊಲೀಸರು ಸೈಬರ್ ವಿಭಾಗದ ಮೂಲಕ ತನಿಖೆ ಕೈಗೆತ್ತಿಕೊಂಡಿದ್ದಾರೆ.